ಬೆಂಗಳೂರು: ಬಾಗಲೂರು ಠಾಣಾ ವ್ಯಾಪ್ತಿಯಲ್ಲಿ ಬಾರ್‌ವೊಂದಕ್ಕೆ ನುಗ್ಗಿ ದರೋಡೆ ಮಾಡಿದ್ದ ಒಬ್ಬ ವಿದ್ಯಾರ್ಥಿ ಸೇರಿದಂತೆ 8 ಮಂದಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.
ಹನುಮಂತನಗರದ ಸಿಂದನೂರು ರಾಜ ಶ್ರೀನಿವಾಸರಾವ್ (20), ಚಾಲಕ ಮಂಜು ಅಲಿಯಾಸ್ ಮ್ಯಾಕ್ಸಿ (26), ಪೃಥ್ವಿರಾಜ್ (19), ಯಲಹಂಕದ ವಿಜಯ್ ಅಲಿಯಾಸ್ ವಿಜಿ (28), ಕೃಷ್ಣಮೂರ್ತಿ ಅಲಿಯಾಸ್ ಸಲಾಮ್ (25), ಬಲರಾಮ್ (28), ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಮಣಿಕಂಠ (26) ಮತ್ತು ದೇವನಹಳ್ಳಿಯ ನಾಗರಾಜ್ ಅಲಿಯಾಸ್ ಕಾಟ (23) ಬಂಧಿತರು ಎಂದು ಈಶಾನ್ಯ ವಿಭಾಗದ ಡಿಸಿಪಿ ಗಿರೀಶ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿಗಳ ಪೈಕಿ ಸಿಂದನೂರು ರಾಜ ಶ್ರೀನಿವಾಸರಾವ್ ಆಂಧ್ರಪ್ರದೇಶದವನಾಗಿದ್ದು, ಬಸನಗುಡಿಯಲ್ಲಿರುವ ಪ್ರತಿಷ್ಠಿತ ಕಾಲೇಜಿನಲ್ಲಿ ಬಿಎಸ್ಸಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಮಾದಕ ವ್ಯಸನಿಯಾಗಿರುವ ಈತ, ಮತ್ತೂಬ್ಬ ಆರೋಪಿ ಮಂಜುನನ್ನು ಪರಿಚಯಿಸಿಕೊಂಡು ಶ್ರೀನಗರದಲ್ಲಿ ಬಾಡಿಗೆಗೆ ರೂಮ್‌ನಲ್ಲಿ ನೆಲೆಸಿದ್ದ.
ಇತ್ತೀಚೆಗೆ ರಾಜು ತಂದೆ ಕಾಲೇಜು ಶುಲ್ಕಕ್ಕಾಗಿ ಕೊಟ್ಟಿದ್ದ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದ. ಶುಲ್ಕ ಕಟ್ಟಲು ಹಣವಿಲ್ಲದ್ದರಿಂದ ಮತ್ತು ತನ್ನ ಹುಟ್ಟು ಹಬ್ಬ ಆಚರಣೆಗೆ ಹಣ ಹೊಂದಿಸಲು ತನ್ನ ಸ್ನೇಹಿತ ಮಂಜುಗೆ ಹೇಳಿದ್ದ. ಈ ಹಿನ್ನೆಲೆಯಲ್ಲಿ ಮಂಜು ತನ್ನ ಇತರೆ ಸ್ನೇಹಿತರಾದ ವಿಜಿ ಮತ್ತು ಅಭಿಷೇಕ್‌ಗೆ ತಿಳಿಸಿ ಇಸ್ಪೀಟ್ ಆಟ ಆಡುವ ಜಾಗ ತೋರುವಂತೆ ಹೇಳುತ್ತಾನೆ.
ಆದರೆ ಎಲ್ಲೂ ಕೂಡ ಇಸ್ಪೀಟ್ ಆಡುವ ಅಡ್ಡೆ ಸಿಗದ ಕಾರಣ ಆರೋಪಿಗಳು ಗೊಲ್ಲಹಳ್ಳಿ ಗೇಟ್ ಸಮೀಪ ಇರುವ ಶ್ರೀನಿವಾಸ್ ವೈನ್ಸ್ ನುಗ್ಗಿ ದರೋಡೆ ಮಾಡಲು ಹೊಂಚು ಹಾಕಿದ್ದರು. ಅದರಂತೆ ಆರೋಪಿಗಳು ಸೆ.27 ರಂದು ಶ್ರೀನಿವಾಸ್ ವೈನ್ಸ್‌ಗೆ ನುಗ್ಗಿ ಕ್ಯಾಶಿಯರ್ ಮತ್ತು ವೈನ್ಸ್‌ನಲ್ಲಿದ್ದ ಸಾರ್ವಜನಿಕರೊಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ 12 ಸಾವಿರ ನಗದಿನೊಂದಿಗೆ ಪರಾರಿಯಾಗಿದ್ದರು ಎಂದು ಅವರು ತಿಳಿಸಿದ್ದಾರೆ.