Advertisement

ಮತ್ತೆ ಪಿಎಸ್ಐ ಪ್ರಕರಣದ ಸದ್ದು; ಬ್ಲೂಟೂತ್ ಬಳಸಿ ಪಾಸಾಗಿದ್ದ ಪೇದೆ ಸೇರಿ 8 ಅಭ್ಯರ್ಥಿಗಳ ಬಂಧನ

04:18 PM Aug 05, 2022 | Team Udayavani |

ಕಲಬುರಗಿ: ಪಿಎಸ್‌ಐ ನೇಮಕಾತಿ ಅಕ್ರಮದ ವಿಚಾರಣೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳ ತಂಡ ಮತ್ತೆ ಎಂಟು ಅಭ್ಯರ್ಥಿಗಳನ್ನು ಬಂಧಿಸಿ ಸದ್ದು ಮಾಡಿದೆ. ಇದರೊಂದಿಗೆ ಹಗರಣ ಇನ್ನೂ ಮುಗಿದಿಲ್ಲ ಎಂದು ಸಂದೇಶ ರವಾನಿಸಿದ್ದಾರೆ.

Advertisement

ಈ ಬಂಧನದಿಂದಾಗಿ ಅಫಜಲಪುರದಲ್ಲಿ ಕೆಲವರು ಕಣ್ಮರೆಯಾಗಿದ್ದಾರೆ ಎಂದು ಗೊತ್ತಾಗಿದೆ.

ಹೈದರಾಬಾದ್ ಕರ್ನಾಟಕ ಕೋಟಾದಲ್ಲಿ ಪ್ರಥಮ ರ‍್ಯಾಂಕ್ ಪಡೆದಿದ್ದ ಜೇವರ್ಗಿಯ ಭಗವಂತರಾಯ ಜೋಗೂರ, ನಾಲ್ಕನೇ ರ‍್ಯಾಂಕ್ ಪಡೆದಿದ್ದ, ಪ್ರಸ್ತುತ ರಾಯಚೂರು ಜಿಲ್ಲೆ ದೇವದುರ್ಗದಲ್ಲಿ ಪೊಲೀಸ್ ಕಾನ್‌ ಸ್ಟೇಬಲ್ ಆಗಿರುವ ಕಲ್ಲಪ್ಪ ಸಿದ್ದಪ್ಪ ಅಲ್ಲಾಪುರ, ರವಿರಾಜ, ಪೀರಪ್ಪ ಸಿದ್ನಾಳ, ಶ್ರೀಶೈಲ ಹಚ್ಚಡ, ಹೈ–ಕ ಕೋಟಾದಲ್ಲಿ 22ನೇ ರ‍್ಯಾಂಕ್ ಪಡೆದಿದ್ದ ಅಫಜಲಪುರ ತಾಲ್ಲೂಕಿನ ಗೌರ (ಬಿ) ಗ್ರಾಮದ ಸಿದ್ದುಗೌಡ ಶರಣಪ್ಪ ಪಾಟೀಲ, ಸೋಮನಾಥ, ವಿಜಯಕುಮಾರ್ ಗುಡೂರ ಬಂಧಿತರು ಎಂದು ಗುರುತಿಸಲಾಗಿದೆ.

ಪ್ರಕರಣದ ಕಿಂಗ್‌ಪಿನ್‌ ಆರ್.ಡಿ. ಪಾಟೀಲನ ಹೆಂಡತಿಯ ತಮ್ಮ ಬಂಧಿತ ಸಿದ್ದುಗೌಡನೂ ಸೇರಿದ್ದು, ಈತ ಯಾದಗಿರಿ ಜಿಲ್ಲೆ ಮುದ್ನಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದರೂ, ಅಕ್ರಮವಾಗಿ ಪರೀಕ್ಷೆ ಬರೆದು ರಾಂಕ್ ನಲ್ಲಿ ಪಾಸಾಗಿದ್ದ.

ಬಂಧತ ಎಂಟು ಜನ ಅಭ್ಯರ್ಥಿಗಳು ಕಳೆದ ಅಕ್ಟೋಬರ್ 3ರಂದು ನಡೆದ ಪರೀಕ್ಷೆಯಲ್ಲಿ ಬ್ಲೂ ಟೂತ್ ಬಳಸಿ  ಪಾಸಾಗಿದ್ದರು.

Advertisement

ಹಗರಣದ ಪ್ರಮುಖ ಕಿಂಗ್‌ಪಿನ್‌ ಆರ್‌.ಡಿ. ಪಾಟೀಲ ಬ್ಲೂಟೂತ್ ಬಳಸಿ ಇವರನ್ನು ಪಾಸ್ ಮಾಡಿಸಿದ್ದ ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಈಗಾಗಲೇ ಬಂಧನದಲ್ಲಿರುವ ಆರೋಪಿಗಳು ನೀಡಿದ ಮಾಹಿತಿ ಆಧರಿಸಿದ್ದ ಸಿಐಡಿ ಅಧಿಕಾರಿಗಳ ತಂಡ ಹಲವು ತಿಂಗಳುಗಳಿಂದ ಇವರ ಬಗ್ಗೆ ಮಾಹಿತಿ ಸಂಗ್ರಹಿಸಿತ್ತು. ನಿಖರ ಮಾಹಿತಿ ಸಿಗುತ್ತಿದ್ದಂತೆಯೇ ಇವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಂಧಿತರಲ್ಲಿ ರವಿರಾಜ್, ಪೀರಪ್ಪ ಸಿದ್ನಾಳ ಹಾಗೂ ಶ್ರೀಶೈಲ ಹಚ್ಚಡ ಮೂವರೂ ಕಲಬುರಗಿಯ ಶರಣಬಸವೇಶ್ವರ ಕಲಾ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದರು.

ಇದನ್ನೂ ಓದಿ:100 ರೂ. ಹಣ ಡ್ರಾ ಮಾಡಿದ ಕಾರ್ಮಿಕನಿಗೆ ಬಂದಿದ್ದು 2,700 ಕೋಟಿ ರೂ. ಎಸ್ ಎಮ್ ಎಸ್ !

ಸಿದ್ದುಗೌಡ ಪಾಟೀಲ ಶರಣಬಸವೇಶ್ವರ ವಿಜ್ಞಾನ ಕಾಲೇಜಿನಲ್ಲಿ ಮತ್ತು ಸೋಮನಾಥ ಗೋದುತಾಯಿ ಎಂಜಿನಿಯರಿಂಗ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದರು. ಅದೇ ರೀತಿ ಭಗವಂತರಾಯ ಜೋಗೂರ ಹೊಸ ಆರ್‌ಟಿಒ ಕಚೇರಿ ಬಳಿಯ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ) ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದ. ಮತ್ತೋರ್ವ ಆರೋಪಿ ವಿಜಯಕುಮಾರ್ ಗುಡೂರ ನಗರದ ಎಂ.ಎಸ್‌. ಇರಾನಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ಎಂದು ವಿಚಾರಣೆ ವೇಳೆ ಗೊತ್ತಾಗಿದೆ.

ಸಿಐಡಿ ಡಿವೈಎಸ್ಪಿಗಳಾದ ಶಂಕರಗೌಡ ಪಾಟೀಲ, ಪ್ರಕಾಶ ರಾಠೋಡ, ವೀರೇಂದ್ರಕುಮಾರ್ ಹಾಗೂ ಡಿಟೆಕ್ಟಿವ್ ವಿಭಾಗದ ಪಿಎಸ್‌ಐಗಳಾದ ಆನಂದ, ಯಶವಂತ ಹಾಗೂ ಶಿವಪ್ರಸಾದ್ ನೆಲ್ಲೂರ ಅವರನ್ನೊಳಗೊಂಡ ತಂಡವು ಅಭ್ಯರ್ಥಿಗಳನ್ನು ಬಂಧಿಸಿ ನಗರದ ಐವಾನ್ ಇ ಶಾಹಿ ಅತಿಥಿ ಗೃಹದಲ್ಲಿರುವ ಸಿಐಡಿ ಕ್ಯಾಂಪ್ ಕಚೇರಿಯಲ್ಲಿ ವಿಚಾರಣೆ ನಡೆಸುತ್ತಿದೆ.

ಅಭ್ಯರ್ಥಿಗಳಿಂದ ಆರ್.ಡಿ. ಪಾಟೀಲ ಹಾಗೂ ಸಹವರ್ತಿಗಳು ಎಷ್ಟು ಹಣ ಪಡೆದಿದ್ದಾರೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next