Advertisement

ಇಫಿ-2022 ಚಿತ್ರೋತ್ಸವದಲ್ಲಿ ‘ದಿ ನುವೆಲ್‌ ಜನರೇಷನ್‌’ಸೇರಿದಂತೆ ಎಂಟು ಫ್ರೆಂಚ್‌ ಸಿನಿಮಾಗಳು

05:59 PM Nov 18, 2022 | Team Udayavani |

ಅರವಿಂದ ನಾವಡ
ಪಣಜಿ: ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI)ದ 53 ನೇ ಆವೃತ್ತಿಗೆ ಗೋವಾದ ರಾಜಧಾನಿ ಪಣಜಿ ಸಜ್ಜಾಗುತ್ತಿದೆ. ನವೆಂಬರ್‌ 20 ರಿಂದ 28 ರವರೆಗೆ ನಡೆಯುವ ಈ ಚಿತ್ರೋತ್ಸವದಲ್ಲಿ ವಿವಿಧ ದೇಶಗಳ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಭಾರತೀಯ ಪನೋರಮಾ ವಿಭಾಗದ ಕಥಾ ಹಾಗೂ ಕಥೇತರ ವಿಭಾಗದಲ್ಲಿ ಕನ್ನಡದ ಮೂರು ಚಿತ್ರಗಳು ಪ್ರದರ್ಶನಗೊಳ್ಳುತ್ತಿರುವುದು ವಿಶೇಷ.

Advertisement

ಒಂದು ನಿರ್ದಿಷ್ಟ ದೇಶದ ಸಿನಿಮಾ ಪರಂಪರೆ ಕುರಿತು ಬೆಳಕು ಚೆಲ್ಲುವ ’ಕಂಟ್ರಿ ಫೋಕಸ್‌’ ವಿಭಾಗದಡಿ ಈ ಬಾರಿ ‘ಫ್ರಾನ್ಸ್‌’ ದೇಶದ ಎಂಟು ಸಮಕಾಲೀನ ಚಲನಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ಸಿನಿಮಾ ಕ್ಷೇತ್ರದಲ್ಲಿ ಫ್ರಾನ್ಸ್‌ ನದ್ದು ದೊಡ್ಡ ಹೆಸರು. ಹೊಸ ಅಲೆಯ ಚಲನಚಿತ್ರಗಳನ್ನೂ ಸಾಕಷ್ಟು ಸಂಖ್ಯೆಯಲ್ಲಿ ನಿರ್ಮಿಸಿರುವ ಹಾಗೂ ಪ್ರಯೋಗಶೀಲತೆಯಲ್ಲೂ ಫ್ರಾನ್ಸ್‌ ಗೆ ವಿಶೇಷ ಸ್ಥಾನವಿದೆ. ಗೊಡಾರ್ಡ್‌, ಟ್ರೌಫಟ್‌ ರಂಥ ಫ್ರಾನ್ಸ್‌ನ ಚಲನಚಿತ್ರ ನಿರ್ದೇಶಕರು ಸಿನಿಮಾವನ್ನು ನೋಡುವ ಕ್ರಮವನ್ನೇ ಬದಲಾಯಿಸಿದರು.

ಈ ಹಿನ್ನೆಲೆಯಲ್ಲಿ ಫ್ರಾನ್ಸ್‌ನ ಸಿನಿಮಾ ಸೊಗಸನ್ನು ಪ್ರಸ್ತುತಪಡಿಸಲಾಗುತ್ತಿದೆ. ಫ್ರಾನ್ಸ್‌ ಎಂಬೆಸ್ಸಿ ಹಾಗೂ ಇನ್‌ ಸ್ಟಿಟ್ಯೂಟ್‌ ಫ್ರಾಂಕೈಸ್‌ ಇಂಡಿಯಾದ ಸಹಯೋಗವಿದೆ ಇದಕ್ಕೆ.

ಅದರ್‌ ಪೀಪಲ್ಸ್‌ ಚಿಲ್ಡ್ರನ್ (2021)
ಈ ಚಿತ್ರವನ್ನು ನಿರ್ದೇಶಿಸಿರುವುದು ರೆಬೆಕಾ ಜೊಟೊವಿಸ್ಕಿ (Rebecca Zlotowski). ಈ ಚಿತ್ರ ಈ ವಿಭಾಗದ ಉದ್ಘಾಟನಾ ಚಿತ್ರ. ಇಫಿರಾ ಶಿಕ್ಷಕಿ. ತನ್ನ ಹೊಸ ಪ್ರಿಯಕರನ ಜತೆಗೆ ಬದುಕು ಆರಂಭಿಸುತ್ತಾಳೆ. ಆದರೆ ತನ್ನ ಹಿಂದಿನ ಸಂಬಂಧದ ಮಗಳೊಂದಿಗೆ ಮರು ಸಂಪರ್ಕಕ್ಕೆ ತೊಡಗಿದಾಗ ಇದ್ದಕ್ಕಿದ್ದಂತೆ ಬದುಕು ಹಾಗೂ ಸಂಬಂಧಗಳು ಹೆಚ್ಚು ಸಂಕೀರ್ಣಗೊಳ್ಳುತ್ತಾ ಹೋಗುತ್ತವೆ. ಈ ಸೂಕ್ಷ್ಮ ಎಳೆಗಳನ್ನು ಚಿತ್ರ ಕಟ್ಟಿಕೊಡುತ್ತದೆ. 79 ನೇ ವೆನಿಸ್‌ ಸಿನಿಮೋತ್ಸವದಲ್ಲಿ ಈ ಚಿತ್ರ ಗೋಲ್ಡನ್‌ ಲಯನ್‌ ಪ್ರಶಸ್ತಿಗೆ ಸೆಣಸಿತ್ತು.

Advertisement

ದಿ ಕ್ರಾಸಿಂಗ್‌ (2021]
ಇದೊಂದು ಅನಿಮೇಷನ್‌ ಚಿತ್ರ. ಇಬ್ಬರು ಒಡಹುಟ್ಟಿದವರ ಬದುಕಿನ ಕುರಿತಾದ ಚಿತ್ರ. ಈ ಚಿತ್ರ ಅನೆಕಿ ಅಂತಾರಾಷ್ಟ್ರೀಯ ಅನಿಮೇಷನ್‌ ಸಿನಿಮೋತ್ಸವದಲ್ಲಿ ಆಯ್ಕೆಯಾಗಿತ್ತು.

ಬೆಲ್ ಆ್ಯಂಡ್‌ ಸೆಬಾಸ್ಟಿಯನ್‌ : ದಿ ನುವೆಲ್‌ ಜನರೇಷನ್‌ (2021]
ಪಿಯರೆ ಕೋರ್‌ (Pierre Core) ನಿರ್ದೇಶಿಸಿರುವ ಚಿತ್ರ. ಹತ್ತು ವರ್ಷದ ಸೆಬಾಸ್ಟಿಯನ್‌ ರಜೆ ದಿನವನ್ನು ಕಳೆಯಲು ತನ್ನ ಅಜ್ಜಿ ಮತ್ತು ಚಿಕ್ಕಮ್ಮನ ಮನೆಗೆ ಹೋಗಿರುತ್ತಾನೆ. ನಗರದಲ್ಲಿ ಬೆಳೆದ ಆತನಿಗೆ ಈ ಹಳ್ಳಿಯ ಜೀವನ, ಅಲ್ಲಿನ ಬದುಕು ಹಾಗೂ ಅವರಿಗೆ ಸಹಾಯ ಮಾಡುವ ಕ್ರಮ ಎಲ್ಲವೂ ಹೊಸದು ಎನಿಸುತ್ತದೆ. ಈ ಸಂದರ್ಭದಲ್ಲಿ ತನ್ನ ಹೊಸ ಗೆಳೆಯನಾಗಿ ನಾಯಿಯೊಂದು ಘಬೆಲ್‌] ಸಿಗುತ್ತದೆ. ಮಾಲಕನ ಅನ್ಯಾಯ ಮತ್ತು ಹಿಂಸೆಯಿಂದ ರಕ್ಷಿಸಲು ಸೆಬಾಸ್ಟಿಯನ್‌ ನಿರ್ಧರಿಸುತ್ತಾನೆ.

ಬಿಟ್ವೀನ್‌ ಟು ವರ್ಲ್ಡ್ಸ್‌ (2021]
ಇಮ್ಯಾನ್ಯುಯಲ್‌ ಕರೆರ್ ((Emmanuel Carrere) ರೂಪಿಸಿರುವ ಚಿತ್ರವಿದು. ಲೇಖಕಿಯೊಬ್ಬಳು ತನ್ನ ಹೊಸ ಪುಸ್ತಕದ ವಸ್ತುವಿಗಾಗಿ ಉತ್ತರ ಫ್ರಾನ್ಸ್‌ ನಲ್ಲಿನ ಉದ್ಯೋಗ ಅನಿಶ್ಚಿತತೆ ಕುರಿತು ಅಧ್ಯಯನಕ್ಕೆ ಹೊರಡುತ್ತಾಳೆ. ತನ್ನ ಗುರುತನ್ನು ಹೇಳದೆ ಕ್ಲೀನರ್‌ ಆಗಿ ಇತರೆ ಮಹಿಳೆಯರೊಡನೆ ಕೆಲಸಕ್ಕೆ ತೊಡಗುತ್ತಾಳೆ. ಈ ಚಿತ್ರವು ಕರ್ಲೊವಿ ವೇರಿ ಸಿನಿಮೋತ್ಸವ ಹಾಗೂ ಕಾನ್‌ ನ ಡೈರೆಕ್ಟರ್ಸ್‌ ಫೋರ್ಟ್‌ನೈಟ್‌ ಸೆಕ್ಷನ್‌ ನಲ್ಲಿ ಪ್ರದರ್ಶನಗೊಂಡಿತ್ತು.

ದಿ ವೆಲ್ವೆಟ್‌ ಕ್ವೀನ್‌ (2021)
ಮಾರಿ ಅಮಿಗ್ವೆಟ್‌ ಹಾಗೂ ವಿನ್ಸೆಂಟ್‌ ಮನಿರ್‌ (Marie Amiguet, Vincent Munier] ನಿರ್ದೇಶಿಸಿರುವ ಚಿತ್ರವಿದು. ಇಬ್ಬರು ಟಿಬೆಟ್‌ ಪರ್ವತದ ಹೈ ಆಲ್ಟಿಟ್ಯೂಡ್‌ ನ ಕಠೋರತೆಯನ್ನು ಶೋಧಿಸಲು ಸಜ್ಜಾಗುತ್ತಾರೆ. ಅದರ ವಿವರವೇ ಚಿತ್ರ.

ಸಿಕ್ಸ್ಟೀನ್‌ (2021)
ಫಿಲಿಪ್‌ ಲಿರೆಟ್‌ (Phillippe Lioret) ನಿರ್ದೇಶಿಸಿರುವ ಚಿತ್ರ. ನೋರಾ ಮತ್ತು ಲಿಯೊ ಒಂದೆ ಉಪನಗರದಲ್ಲಿ ವಾಸಿಸುತ್ತಿರುವವರು. ಒಂದೇ ಶಾಲೆಯಲ್ಲಿ ಕಲಿಯುತ್ತಿದ್ದವರು. ಆದರೆ ಇಬ್ಬರ ಸಾಮಾಜಿಕ ಹಿನ್ನೆಲೆ, ಮತ ಎಲ್ಲವೂ ಪರಸ್ಪರ ವಿರುದ್ಧವಾದುದು. ಆದರೂ ಪರಸ್ಪರ ಪ್ರೀತಿಸುವ ಇಬ್ಬರ ಬದುಕು ಹಲವು ಏರಿಳಿತಗಳನ್ನು ಕಾಣುತ್ತದೆ.

ದಿ ವ್ಯಾನಿಶೆಡ್‌ ಪ್ರೆಸಿಡೆಂಟ್‌ (2022)
1920. ಎಲ್ಲ ಅಚ್ಚರಿಗಳ ಮಧ್ಯೆ ಜನರಿಗೆ ಅಷ್ಟೊಂದು ಚಿರಪರಿಚಿತರಲ್ಲದ ಪೌಲ್‌ (Paul Deschanel) ದೇಶದ ಪ್ರಧಾನಿಯಾಗಿ ಆಯ್ಕೆಯಾಗುತ್ತಾರೆ. ವಿಚಿತ್ರವೆನ್ನುವಂಥ ಹಲವು ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಆದರೆ ರಾಜಕೀಯ ಜಗತ್ತಿನ ಸಿನಿಕತೆ ಹಾಗೂ ಮಾಧ್ಯಮಗಳ ಟೀಕೆಗೆ ಗುರಿಯಾಗುವ ಪೌಲ್‌ ನ ನೆಮ್ಮದಿಯನ್ನು ಕೆಡಿಸುತ್ತದೆ. ಒಂದು ದಿನ ಪೌಲ್‌ ರೈಲಿನಿಂದ ಬಿದ್ದು ಸಾಯುತ್ತಾನೆ. ಇದರ ಕುತೂಹಲ ಕುರಿತ ಸಿನಿಮಾ. Jean-Marc Peyrefitte ನಿರ್ದೇಶಿಸಿದ್ದಾರೆ.


ದಿ ಗ್ರೀನ್‌ ಪರ್ಫ್ಯೂಮ್‌
ನಿಕೋಲಸ್‌ ಪರಿಸರ್‌ (Nicolas Pariser) ನಿರ್ದೇಶಿಸಿರುವ ಚಿತ್ರವಿದು. ಪ್ರದರ್ಶನದ ಮಧ್ಯೆಯೇ ನಟ ವಿಷ ಸೇವನೆಯಿಂದ ಕುಸಿದು ಬಿದ್ದು ಸಾಯುತ್ತಾನೆ. ಅವನ ಸ್ನೇಹಿತನ ಮೇಲೆ ಎಲ್ಲರ ಸಂಶಯ ಹರಿಯುತ್ತದೆ. ಪೊಲೀಸರು ತನಿಖೆ ಆರಂಭಿಸಿದಂತೆ ವಿಚಿತ್ರ ತಿರುವುಗಳು ತೆರೆದುಕೊಳ್ಳುತ್ತವೆ. ಈ ಸಾವಿನ ಹಿಂದೆ ಸಂಸ್ಥೆಯೊಂದರ ನೆರಳೂ ಕಾಣತೊಡಗುತ್ತದೆ. ಈ ಕುತೂಹಲದ ಪ್ರಯಾಣವೇ ಸಿನಿಮಾ.

Advertisement

Udayavani is now on Telegram. Click here to join our channel and stay updated with the latest news.

Next