Advertisement

ಮೊಟ್ಟೆ ಫ್ಲೇವರ್‌ ಬ್ರೆಡ್‌ನಲ್ಲಿ ಮೊಟ್ಟೆಯಂಶ ಇದೆಯೇ?

12:30 PM Sep 02, 2021 | Team Udayavani |

ಮೊದಲಾದರೆ ಬ್ರೆಡ್‌ ಅಂದರೆ, ಸಾಕು ಅದು ಮೈದಾ ಮತ್ತು ಗೋಧಿ ಹಿಟ್ಟಿನಿಂದ ಮಾಡಿದ್ದು ಎಂಬ ಒಂದೇ ಒಂದು ಉತ್ತರ ಸಿಗುತ್ತಿತ್ತು. ಒಂದಷ್ಟು ದಿನಗಳಾದ ಮೇಲೆ ಸ್ವೀಟ್‌ ಬ್ರೆಡ್‌ ಜತೆಗೆ ಉಪ್ಪಿನಂಶ ಇರುವ ಬ್ರೆಡ್‌ನ‌ ಬಳಕೆಯೂ ಶುರುವಾಗಿತ್ತು. ಕಾಲ ಬದಲಾದಂತೆ  ಈಗ ಬ್ರೆಡ್‌ಗಳಲ್ಲೂ ತರಹೇವಾರಿ ಹುಟ್ಟಿಕೊಂಡಿವೆ. ಅಂದರೆ ಗೋಧಿ, ಬೆಳ್ಳುಳ್ಳಿ, ಬಹುಧಾನ್ಯ, ಜೇನು, ಹಾಲು, ಮೊಟ್ಟೆ, ಓಟ್‌ಮೀಲ್‌, ಚೀಸ್‌ ಫ್ಲೇವರ್‌ನ ಬ್ರೆಡ್‌ ಸಿಗುತ್ತಿವೆ. ಆದರೆ ಬ್ರೆಡ್‌ ಉತ್ಪಾದಕರು ನಿಜಕ್ಕೂ ಈ ಎಲ್ಲ ಅಂಶಗಳುಳ್ಳ ಬ್ರೆಡ್‌ ಅನ್ನು ಮಾಡುತ್ತಾರಾ? ಹಾಗಾದರೆ ಬ್ರೆಡ್‌ನಲ್ಲಿ ಇದರ ಅಂಶ ಎಷ್ಟಿರುತ್ತದೆ? ಈ ಎಲ್ಲ ಪ್ರಶ್ನೆಗಳು ಇನ್ನೂ ಗ್ರಾಹಕರಲ್ಲಿ ಉಳಿದುಕೊಂಡಿವೆ. ಈ ಸಂದೇಹಗಳನ್ನು ನಿವಾರಿಸುವ ಸಲುವಾಗಿ ಕೇಂದ್ರ ಸರಕಾರ ಬ್ರೆಡ್‌ ಉತ್ಪಾದನೆಯ ಮೇಲೆ ನಿಯಮಾವಳಿ ರೂಪಿಸಲು ಮುಂದಾಗಿದೆ.

Advertisement

ಈಗ ನಿಯಮಾವಳಿಗಳು ಇಲ್ಲವೇ? :

ಸದ್ಯ ಬ್ರೆಡ್‌ ಉತ್ಪಾದನೆ ಮೇಲೆ ನಿಯಮಾವಳಿಗಳು ಇದ್ದರೂ ವಿಶೇಷವಾಗಿ ತಯಾರಾಗುವ ಬ್ರೆಡ್‌ಗಳ ಗುಣಮಟ್ಟ ಅಳೆಯುವ ಯಾವುದೇ ಮಾಪಕಗಳಿಲ್ಲ. ಹೀಗಾಗಿ ಭಾರತ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್ಎಸ್‌ಎಸ್‌ಎಐ) ಒಂದು ಕರಡು ನಿಯಮಾವಳಿ ರೂಪಿಸಿದ್ದು, ಐದು ಮಾದರಿಯ ಬ್ರೆಡ್‌ಗಳ ಗುಣಮಟ್ಟ ಅಳೆಯಲು ಮುಂದಾಗಿದೆ. ಈ ಕರಡು ನಿಯಮಾವಳಿಯನ್ನು ಕೇಂದ್ರ ಆರೋಗ್ಯ ಇಲಾಖೆಗೆ ಅದು ಕಳುಹಿಸಿಕೊಟ್ಟಿದೆ. ಒಂದು ವೇಳೆ ಈ ನಿಯಮಾವಳಿ ಜಾರಿಗೆ ಬಂದರೆ, ಗೋಧಿ ಬ್ರೆಡ್‌, ಕಂದು ಬ್ರೆಡ್‌, ಬಿಳಿ ಬ್ರೆಡ್‌, ಬಹುಧಾನ್ಯ ಬ್ರೆಡ್‌ ಮತ್ತು 14 ವಿಶೇಷವಾಗಿ ರೂಪಿತವಾದ ಬ್ರೆಡ್‌ಗಳ ಮೇಲೆ ಗುಣಮಟ್ಟದ ಮಾಪಕ ರೂಪಿಸಲಾಗುತ್ತಿದೆ. ಈ 14 ವಿಶೇಷವಾಗಿ ರೂಪಿತವಾದ ಬ್ರೆಡ್‌ಗಳಲ್ಲಿ ಬೆಳ್ಳುಳ್ಳಿ ಬ್ರೆಡ್‌, ಮೊಟ್ಟೆ ಬ್ರೆಡ್‌, ಓಟ್‌ಮೀಲ್‌ ಬ್ರೆಡ್‌, ಹಾಲು ಬ್ರೆಡ್‌ ಮತ್ತು ಚೀಸ್‌ ಬ್ರೆಡ್‌ ಕೂಡ ಸೇರಿವೆ.

ಯಾಕೆ ಈ ಕ್ರಮ? :

ಸದ್ಯ ಬ್ರೆಡ್‌ ಉತ್ಪಾದಕರು ವಿಶೇಷತೆಯ ಹೆಸರಲ್ಲಿ ಬ್ರೆಡ್‌ ಮೇಲೆ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ. ಅಂದರೆ ಸಾಮಾನ್ಯ ಬ್ರೆಡ್‌ಗಿಂತ ಹೆಚ್ಚಿನ ಹಣವನ್ನು ಈ ತರಹೇವಾರಿ ಬ್ರೆಡ್‌ಗೆ ನೀಡುತ್ತಿದ್ದಾರೆ. ಆದರೆ, ಹೆಚ್ಚು ಹಣ ಕೊಟ್ಟರೂ, ತಾವು ಖರೀದಿಸಿದ ಬ್ರೆಡ್‌ನಲ್ಲಿ ಹೇಳಿದಂಥ ವಿಶೇಷ ಫ್ಲೇವರ್‌ನ ಅಂಶ ಎಷ್ಟಿದೆ ಎಂಬುದು ಮಾತ್ರ ಅವರಿಗೆ ಗೊತ್ತಾಗುವುದಿಲ್ಲ. ಅಂದರೆ ಬೆಳ್ಳುಳ್ಳಿ ಅಂಶದ ಬ್ರೆಡ್‌ ಅನ್ನು ಖರೀದಿಸುತ್ತಾರೆ, ಆದರೆ ಇದರಲ್ಲಿ ಬೆಳ್ಳುಳ್ಳಿ ಪ್ರಮಾಣ ಎಷ್ಟಿದೆ ಎಂಬ ಅಂಶ ಗೊತ್ತಾಗಲ್ಲ. ಅಂದರೆ ಬೆಳ್ಳುಳ್ಳಿಯ ಒಂದು ತುಣುಕು ಇದೆಯೋ ಒಂದು ಹನಿ ಇದೆಯೋ ಅಥವಾ ಬೆಳ್ಳುಳ್ಳಿ ಅಂಶವೇ ಇಲ್ಲವೋ ಎಂಬ ಮಾಹಿತಿ ತಿಳಿಯುತ್ತಿಲ್ಲ. ಜತೆಗೆ  ಈ ವಿಶೇಷತೆಯ ಹೆಸರು ಸಾಮಾನ್ಯ ಬ್ರೆಡ್‌ಗಿಂತ ಎರಡು ಪಟ್ಟು, ಕೆಲವೊಮ್ಮೆ ಮೂರು ಪಟ್ಟು ಹಣವನ್ನು ಪಡೆಯಲಾಗುತ್ತಿದೆ ಎಂಬ ದೂರುಗಳಿವೆ ಎಂದು ನೆಟ್‌ವರ್ಕ್‌18 ವೆಬ್‌ಸೈಟ್‌ ವರದಿ ಮಾಡಿದೆ.

Advertisement

ಮುಂದೇನಾಗುತ್ತದೆ? :

ಎಫ್ಎಸ್‌ಎಸ್‌ಎಐ ರೂಪಿಸಿರುವ ಕರಡು ನಿಯಮಾವಳಿ ಜಾರಿಗೆ ಬಂದಿದ್ದೇ ಆದಲ್ಲಿ, ವಿಶೇಷ ರೀತಿಯ ಬ್ರೆಡ್‌ನಲ್ಲಿ ವಿಶೇಷ ಫ್ಲೇವರ್‌ನ ಅಂಶ ಎಷ್ಟಿದೆ ಎಂದು ನಮೂದಿಸಬೇಕಾಗುತ್ತದೆ. ಅಂದರೆ ಓಟ್‌ಮಾಲ್‌ ಬ್ರೆಡ್‌ನಲ್ಲಿ ಶೇ.15ರಷ್ಟು ಓಟ್‌ಮೀಲ್‌, ಬೆಳ್ಳುಳ್ಳಿ ಫ್ಲೇವರ್‌ನ ಬ್ರೆಡ್‌ನಲ್ಲಿ ಶೇ.2ರಷ್ಟು ಬೆಳ್ಳುಳ್ಳಿ ಅಂಶ, ಕಂದು ಬ್ರೆಡ್‌ನಲ್ಲಿ ಶೇ.50ರಷ್ಟು ಗೋಧಿಯ ಹಿಟ್ಟು ಇರಲೇಬೇಕು. ಹಾಗೆಯೇ, ಗೋಧಿ ಬ್ರೆಡ್‌ನಲ್ಲೇ ಶೇ.75ರಷ್ಟು ಪೂರ್ಣ ಗೋಧಿ ಹಿಟ್ಟು, ಬಹುಧಾನ್ಯ ಬ್ರೆಡ್‌ನಲ್ಲಿ ಶೇ.20ರಷ್ಟು ಬಹುಧಾನ್ಯದ ಹಿಟ್ಟು ಇರಲೇಬೇಕು.  ಇನ್ನು ಹಾಲಿನ ಬ್ರೆಡ್‌ನಲ್ಲಿ ಶೇ.6ರಷ್ಟು ಹಾಲಿನ ಗಟ್ಟಿಗಳು, ಜೇನು ಬ್ರೆಡ್‌ನಲ್ಲಿ ಶೇ.5ರಷ್ಟು ಜೇನು, ಚೀಸ್‌ ಬ್ರೆಡ್‌ನಲ್ಲಿ ಶೇ.10ರಷ್ಟು ಚೀಸ್‌ ಅಂಶ ಇರಲೇಬೇಕು. ಹಾಗೆಯೇ ಇನ್ನು ಉಳಿದ ಯಾವುದೇ ಹಣ್ಣಿನ, ಒಣದ್ರಾಕ್ಷಿ, ಟ್ರೇಟಿಕೇಲ್‌, ರೇ, ಪ್ರೋಟೀನ್‌ನ ಅಂಶಗಳು ಶೇ.20ರಷ್ಟಾದರೂ ಇರಲೇಬೇಕು.

ಭಾರತದಲ್ಲಿ ಬೇಕರಿ ಉದ್ಯಮ ಹೇಗಿದೆ? :

ಭಾರತದ ಆಹಾರ ಸಂಸ್ಕರಣ ವಲಯದಲ್ಲಿ ಬೇಕರಿ ಉದ್ಯಮದ ಪಾಲು ದೊಡ್ಡದಿದೆ. ಸುಮಾರು 2,000ಕ್ಕೂ ಹೆಚ್ಚು ಸಂಘಟಿತ ಅಥವಾ ಅರೆ ಸಂಘಟಿತ ಉತ್ಪಾದಕರು 13 ಲಕ್ಷ ಟನ್‌ ಬೇಕರಿ ಉತ್ಪನ್ನಗಳು ತಯಾರಿಸುತ್ತಾರೆ. ಹಾಗೆಯೇ, 10 ಲಕ್ಷ ಅಸಂಘಟಿತ ಉತ್ಪಾದಕರು 17 ಲಕ್ಷ ಟನ್‌ ಬೇಕರಿ ಉತ್ಪನ್ನಗಳು ತಯಾರಿಸುತ್ತಾರೆ. ಈ ಬೇಕರಿ ಉತ್ಪನ್ನಗಳಲ್ಲಿ ಬ್ರೆಡ್‌ ಮತ್ತು ಬಿಸ್ಕತ್‌ ಶೇ.80ರಷ್ಟು ಇದೆ. ಅಂದರೆ 2020ರಲ್ಲಿ ಭಾರತದ ಬೇಕರಿ ಉದ್ಯಮದ ಒಟ್ಟು ವಹಿವಾಟು 7.60 ಬಿಲಿಯನ್‌ ಅಮೆರಿಕನ್‌ ಡಾಲರ್‌ ಇತ್ತು. ಜತೆಗೆ ಈ ಉದ್ಯಮವು ಉತ್ತಮವಾಗಿಯೇ ಬೆಳವಣಿಗೆ ಕಾಣುತ್ತಿದ್ದು, ಬೇಕರಿ ಉತ್ಪನ್ನಗಳ ಮಾರಾಟ ಕೇವಲ ನಗರಕ್ಕಷ್ಟೇ ಅಲ್ಲ, ಹಳ್ಳಿಗಳತ್ತಲೂ ಹೋಗಿದೆ. ಹಾಗೆಯೇ ಭಾರತದ ಬೇಕರಿ ಉದ್ಯಮಕ್ಕೆ ಈಗ ಅಂತಾರಾಷ್ಟ್ರೀಯ ಕಂಪೆನಿಗಳೂ ಲಗ್ಗೆ ಇಟ್ಟಿವೆ. ಪಿಜ್ಜಾ, ಬರ್ಗರ್‌ ಮಾದರಿಯಲ್ಲಿ  ಸ್ಪರ್ಧೆ ನೀಡುತ್ತಿವೆ. ಜತೆಗೆ, ಕರ್ನಾಟಕ, ದಿಲ್ಲಿ, ಮಹಾರಾಷ್ಟ್ರ,  ತಮಿಳುನಾಡು, ಕೇರಳ, ಆಂಧ್ರ,ತೆಲಂಗಾಣದಲ್ಲಿ ಸ್ಥಳೀಯ ಮತ್ತು ಗ್ಲೋಬಲ್‌ ಮಟ್ಟದ ಸಂಸ್ಥೆಗಳು ಹೆಚ್ಚು ಬೆಳವಣಿಗೆ ಕಾಣುತ್ತಿವೆ.

ಉದ್ಯಮದ ಮೇಲಿರುವ ಸವಾಲುಗಳೇನು? :

ಸದ್ಯ ಸ್ಥಳೀಯವಾಗಿಯೇ ಉತ್ಪಾದಕರು ಬೇಕರಿ ಉತ್ಪನ್ನಗಳನ್ನು ರೆಡಿ ಮಾಡಿ ಮಾರುತ್ತಿದ್ದಾರೆ. ಒಂದೊಮ್ಮೆ, ಇಂಥ ನಿಯಮಾವಳಿಗಳು ಜಾರಿ ಬಂದರೆ ಬ್ರೆಡ್‌ ಅನ್ನು ಉತ್ಪಾದಿಸುವ ರೀತಿಯೂ ಬದಲಾಗಬೇಕು. ಹೊಸ ರೀತಿಯ ಉಪಕರಣಗಳನ್ನೂ ಖರೀದಿ ಮಾಡಬೇಕು. ಜತೆಗೆ ಉತ್ಪಾದನ ಪ್ರಕ್ರಿಯೆಯಷ್ಟೇ ಅಲ್ಲ, ಇದಕ್ಕೆ ಬಳಕೆ ಮಾಡಬೇಕಾದ ವಸ್ತುಗಳಿಗೂ ಹೆಚ್ಚಿನ ಹಣ ನೀಡಬೇಕು.  ಅಲ್ಲದೇ, ಎಫ್ಎಸ್‌ಎಸ್‌ಎಐ ಹೇಳುವ ಪ್ರಕಾರ, ಈ ಉದ್ಯಮದಲ್ಲಿ ತಂತ್ರಜ್ಞಾನದ ಕೊರತೆಯಿದೆ ಮತ್ತು ಉತ್ಪಾದನೆ ಹಾಗೂ ಪ್ಯಾಕೇಜಿಂಗ್‌ನಲ್ಲಿ ಇನ್ನೂ ಸುಧಾರಣೆಯಾಗಿಲ್ಲ. ಹೀಗಾಗಿಯೇ ಈ ಉದ್ಯಮದ ಪ್ರಗತಿಗೆ ಸಮಸ್ಯೆಯಾಗಿದೆ. ಹೀಗಾಗಿ ವಿಶೇಷ ಬ್ರೆಡ್‌ಗಳಿಗೆ ನಿಯಮಾವಳಿ ರೂಪಿಸಿದರೆ, ಅವರಿಗೆ ಒಂದು ಮಾನದಂಡ ಹಾಕಿಕೊಟ್ಟಂತಾಗುತ್ತದೆ ಎಂದಿದೆ. ಅಲ್ಲದೆ ಸದ್ಯ ಈ ಬೇಕರಿ ಉತ್ಪನ್ನಗಳು ದೊಡ್ಡ ದೊಡ್ಡ ಮಿಠಾಯಿ ಅಂಗಡಿಯವರು ಮಾರಾಟ ಮಾಡುತ್ತಾರೆ. ಅಲ್ಲದೆ ಸ್ಥಳೀಯವಾಗಿ ಉತ್ಪಾದಿಸುವಾಗ ಯಾವುದೇ ಮಾನದಂಡಗಳನ್ನು ಅನುಸರಣೆ ಮಾಡುವುದಿಲ್ಲ. ಜತೆಗೆ, ಈ ವಲಯದಲ್ಲಿ ಮಾನದಂಡ ರೂಪಿಸದೇ, ರ್‍ಯಾಂಡಮ್‌ ಆಗಿ ಪರೀಕ್ಷೆ ನಡೆಸಲಾಗುವುದಿಲ್ಲ, ಇಲ್ಲಿ ಸಾಮರ್ಥ್ಯ ಹೆಚ್ಚಿಸಲೂ ಆಗುವುದಿಲ್ಲ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

2017ರಲ್ಲಿ  ಬಂದಿತ್ತು ನಿಯಮಾವಳಿ :

2017ರಲ್ಲಿ ಎಫ್ಎಸ್‌ಎಸ್‌ಎಐ ಬೇಕರಿ ಉತ್ಪನ್ನಗಳ  ಕುರಿತಂತೆ ಒಂದು ನಿಯಮಾವಳಿ ರೂಪಿಸಿತ್ತು. ಬೇಕರಿ ಉದ್ಯಮದಲ್ಲಿ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಬೇಕರಿ ವಲಯದಲ್ಲಿನ ಟ್ರೆಂಡ್‌ಗಳನ್ನು ನೋಡಿಕೊಂಡು, ಲಘುವಾದ, ಆರೋಗ್ಯಕರ ಉತ್ಪನ್ನಗಳನ್ನು ಉತ್ಪಾದಿಸಬೇಕು. ಇದರಲ್ಲಿ ಅಲರ್ಜಿಗೆ ಕಾರಣವಾಗುವ ಯಾವುದೇ ಅಂಶಗಳು ಇರಬಾರದು. ಸಾವಯವ ಮತ್ತು ವೋಲ್‌ ಗೆùನ್‌ ಅಂಶಗಳು ಇರಬೇಕು ಎಂದಿತ್ತು. ಆದರೆ, ಇದುವರೆಗೆ  ವಿಶೇಷವಾದ ಬ್ರೆಡ್‌ ತಯಾರಿಕೆ ಸಂಬಂಧ  ಯಾವುದೇ ಮಾನದಂಡಗಳನ್ನು  ರೂಪಿಸಲಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next