Advertisement

ಉ.ಕ. ಭಾಗದಲ್ಲಿ ಹೆಚ್ಚುತ್ತಿದೆ ಪ್ರತ್ಯೇಕ ಧರ್ಮದ ಕಾವು

07:25 AM Jul 26, 2017 | Team Udayavani |

ಹುಬ್ಬಳ್ಳಿ: ಲಿಂಗಾಯತ ಪ್ರತ್ಯೇಕ ಧರ್ಮದ ಪ್ರಸ್ತಾಪ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ರಾಜಕೀಯವಾಗಿ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ. ಕಳೆದ ಐದು ದಶಕಗಳಿಂದಲೂ ಸದ್ದು ಮಾಡುತ್ತಿರುವ ಈ ಬೇಡಿಕೆ ಈಗ ಹೈದರಾಬಾದ್‌
ಕರ್ನಾಟಕ ಹಾಗೂ ಮುಂಬಯಿ ಕರ್ನಾಟಕ ಪ್ರದೇಶದಲ್ಲಿ ಪರ-ವಿರೋಧ ಹೇಳಿಕೆ, ರಾಜಕೀಯ ಹಾಗೂ ಧಾರ್ಮಿಕ ಮುಖಂಡರ ಜಿದ್ದಾಜಿದ್ದಿಗೆ ನಾಂದಿ ಹಾಡಿದೆ.

Advertisement

ರಾಜ್ಯದಲ್ಲಿ ಜನತಾ ಪರಿವಾರದ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆಗಿದ್ದಾಗ ಪ್ರತ್ಯೇಕ ಧರ್ಮದ ಶಿಫಾರಸು ಯತ್ನ ನಡೆದಿತ್ತು. ಈಗ ಸಿಎಂ ಸಿದ್ದರಾಮಯ್ಯ ಅವರು ಪ್ರತ್ಯೇಕ ಧರ್ಮ ಮಾನ್ಯತೆ ವಿಷಯ ಪ್ರಸ್ತಾಪಿಸಿರುವುದು ಜನಾಂದೋಲನ ರೂಪ ಪಡೆಯತೊಡಗಿದೆ. ಇದಕ್ಕೆ ಇತ್ತೀಚೆಗೆ ಈ ಬೇಡಿಕೆ ಬೆಂಬಲಿಸಿ ಬೀದರ್‌ನಲ್ಲಿ ನಡೆದ ರ್ಯಾಲಿಯಲ್ಲಿ ನಿರೀಕ್ಷೆಗೂ ಮೀರಿ ಜನ ಸೇರಿದ್ದು-ಬೆಂಬಲ ವ್ಯಕ್ತವಾಗಿದ್ದೇ ಸಾಕ್ಷಿ.

ಪ್ರತ್ಯೇಕ ಧರ್ಮದ ಕೂಗು ಈ ಹಿಂದೆ ಮಹಾರಾಷ್ಟ್ರದಲ್ಲಿ ದೊಡ್ಡ ಸದ್ದು ಮಾಡಿದ್ದರೂ ಬಸವಣ್ಣನವರ ಜನ್ಮ ಹಾಗೂ ಕರ್ಮಭೂಮಿ ಕರ್ನಾಟಕದಲ್ಲಿ ಆಗಾಗ ಧ್ವನಿ ಬಿಟ್ಟರೆ ತೀವ್ರತೆ ಕಂಡುಬಂದಿರಲಿಲ್ಲ. ಈಗ ಈ ಬೇಡಿಕೆಗೆ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಧ್ಯಪ್ರದೇಶದಂತಹ ರಾಜ್ಯಗಳಲ್ಲೂ ಬೆಂಬಲ ವ್ಯಕ್ತವಾಗುತ್ತಿದೆ. ರಾಜ್ಯ ಹಾಗೂ ಮಹಾರಾಷ್ಟ್ರದಲ್ಲಿ ಪ್ರತ್ಯೇಕ ಧರ್ಮ ಅನಿವಾರ್ಯತೆ ಬಗ್ಗೆ ಜಾಗೃತಿ ಮೂಡಿಸುತ್ತಿರುವ ವಿಶ್ವ ಲಿಂಗಾಯತ ಮಹಾಸಭಾವು
ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಮುಂದಾಗಿದೆ. ತಮಿಳುನಾಡಿನ ವೆಲ್ಲೂರಿನಲ್ಲಿ ಈಚೆಗೆ ನಡೆದ ಲಿಂಗಾಯತ ಸಮಾಜದ ವಿವಿಧ ಸಂಘಟನೆಗಳ ಸಮಾವೇಶದಲ್ಲೂ ಪ್ರತ್ಯೇಕ ಧರ್ಮ ವಿಚಾರವಾಗಿ ಗಂಭೀರ ಚರ್ಚೆ ನಡೆದಿದೆ
ಎನ್ನಲಾಗಿದೆ.

ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾನ ಬೇಡಿಕೆ ಹಿಂದೆ ಅಲ್ಪಸಂಖ್ಯಾತ ಮಾನ್ಯತೆ ದೊರೆತರೆ ಅನೇಕ ಸೌಲಭ್ಯಗಳು ದೊರೆಯುವ ಭಾವನೆ ಪ್ರಮುಖ ಸ್ಥಾನ ಪಡೆದಿದೆ. ಜತೆಗೆ ಈ ವಿಚಾರ ಉತ್ತರ ಕರ್ನಾಟಕದ ಮಟ್ಟಿಗಂತೂ ರಾಜಕೀಯವಾಗಿ ಮಹತ್ವದ ಪರಿಣಾಮ-ಪ್ರಭಾವ ಬೀರಲಿದೆ. ಈ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಲಿಂಗಾಯತ ಸಮಾಜದ ಪ್ರಾಬಲ್ಯ ಇದೆ.

ಬಸವೇಶ್ವರರ ಭಾವಚಿತ್ರವನ್ನು ಸರಕಾರಿ ಕಚೇರಿಯಲ್ಲಿ ಕಡ್ಡಾಯ ಮಾಡಿದ್ದು, ವಿಜಯಪುರ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರು ನಾಮಕರಣ, ಆ ಸಮಾವೇಶದಲ್ಲಿ ಈ ಭಾಗದ ಪ್ರಮುಖ ಮಠಾಧೀಶರ ಉಪಸ್ಥಿತಿ, ಇದೀಗ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಭರವಸೆಯಂತಹ ರಾಜ್ಯ ಕಾಂಗ್ರೆಸ್‌ ಸರಕಾರದ ಕ್ರಮಗಳು ಸಹಜವಾಗಿಯೇ ಉತ್ತರ ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ಗೆ ಮುಳುವಾಗುವ ಸಾಧ್ಯತೆಯಿದೆ.

Advertisement

– ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next