ಬೆಂಗಳೂರು: ಬಿಜೆಪಿಯವರಿಗೆ ಅಧಿಕಾರ ದಾಹ ಹೆಚ್ಚಾಗಿದ್ದು ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸಿದ್ದಾರೆ. ಸರ್ಕಾರ ಉರುಳಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಸಂಸದ ಪ್ರಭಾಕರ್ ಕೋರೆ ವಿಶೇಷ ಪ್ರಯತ್ನ ನಡೆಸಿದ್ದು,ಅವರೇ ಈ ಪ್ರಕರಣದ ಕಿಂಗ್ ಪಿನ್‌ಗಳಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ದೂರಿದ್ದಾರೆ.
ತುರ್ತು ಪತ್ರಿಕಾಗೋಷ್ಠಿ ನಡೆಸಿದ ಅವರು, ಶಾಸಕರಾದ ಡಾ.ಅಶ್ವಥ್ ನಾರಾಯಣ್, ಸತೀಶ್ ರೆಡ್ಡಿ, ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಯಡಿಯೂರಪ್ಪಗೆ ಸಾಥ್ ನೀಡಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಶಾಸಕರಾದ ಸಿ.ಎಸ್. ಶಿವಳ್ಳಿ, ಅನಿಲ್ ಚಿಕ್ಕಮಾದು, ವಿ. ಮುನಿಯಪ್ಪ, ಬಿ.ಸಿ. ಪಾಟೀಲ್, ಕೋಟಿಗಟ್ಟಲೇ ಹಣದ ಆಮಿಷ ಒಡ್ಡಿದ್ದಾರೆ. ಇವರಿಗೆ ಕೆಲವು ಫೈನಾನ್ಸಿಯರ್ ಸಾಥ್ ನೀಡಿದ್ದಾರೆ. ಕಪ್ಪು ಹಣ ಬಳಸಿಕೊಂಡು ಶಾಸಕರಿಗೆ 50, 100 ಕೋಟಿ ನೀಡುವ ಭರವಸೆ ನೀಡಿದ್ದಾರೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ್ದೇವೆ. ಬಿಜೆಪಿಯವರು ಕಾಂಗ್ರೆಸ್‌ನ ಒಬ್ಬರೇ ಶಾಸಕರನ್ನು ಖರೀದಿಸಲಿ ನೋಡೋನ ಎಂದು ಸವಾಲು ಹಾಕಿದರು.
ಯಡಿಯೂರಪ್ಪ ಅವರ ಈ ಪ್ರಯತ್ನಕ್ಕೆ ಬಿಜೆಪಿಯಲ್ಲಿಯೇ ವಿರೋಧ ವ್ಯಕ್ತವಾಗುತ್ತಿದೆ. ಆದರೂ, ತಮ್ಮ ಆಪ್ತ ಶಾಸಕರನ್ನು ಬಳಸಿಕೊಂಡು ಕಾಂಗ್ರೆಸ್ ಶಾಸಕರ ಪತ್ನಿ ಹಾಗೂ ಮಕ್ಕಳಿಗೆ ಆಸೆ ತೋರಿಸಿ ಆಪರೇಷನ್ ಕಮಲ ಮಾಡುವ ಪ್ರಯತ್ನ ನಡೆಸಿದ್ದಾರೆ. ಯಲಹಂಕ ವಿಶ್ವನಾಥ, ಡಾ. ಅಶ್ವಥ್ ನಾರಾಯಣ್ ಹಾಗೂ ಸಕಲೇಶಪುರ ಬಿಜೆಪಿ ಅಭ್ಯರ್ಥಿ ಬಗ್ಗೆ ಆದಾಯ ತೆರಿಗೆ ಇಲಾಖೆ ತನಿಖೆ ನಡೆಸಲಿ, ನಿಜಾಂಶ ಹೊರ ಬರುತ್ತದೆ ಎಂದು ಹೇಳಿದರು.
ಬಿಜೆಪಿಯಿಂದ ನಮ್ಮ ಶಾಸಕರಿಗೆ ಆಮಿಷ ಒಡ್ಡುವ ಮೂಲಕ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಬಿಜೆಪಿಯಿಂದ ಅಪರೇಷನ್ ಕಮಲ ನಡೆಯುತ್ತಿದೆ. ಆಪರೇಷನ್ ಕಮಲಕ್ಕೆ ಹಣದ ಮೂಲ ಯಾವುದು ಎಂದು ತನಿಖೆ ನಡೆಸಲು ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ್ದೇವೆ. ಆಮಿಷ ಒಡ್ಡುತ್ತಿರುವ ಬಗ್ಗೆ ನಮ್ಮ ಶಾಸಕರೇ ನಮ್ಮ ಗಮನಕ್ಕೆ ತಂದಿದ್ದಾರೆ
– ಈಶ್ವರ್ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ.
ಬಿಜೆಪಿಯವರು ಹಲವು ಶಾಸಕರನ್ನು ಸಂಪರ್ಕಿಸಿದ್ದಾರೆ. ಹಲವು ಆಮಿಷಗಳನ್ನು ಒಡ್ಡಿದ್ದಾರೆ. ರಮೇಶ್ ಜಾರಕಿಹೊಳಿ ನನಗೆ ಈಗಲೂ ಒಳ್ಳೆಯ ಸ್ನೇಹಿತ. ರಮೇಶ್ ಜಾರಕಿಹೊಳಿ ಸಂಕಷ್ಟದಲ್ಲಿ ನಾನು ಕಲ್ಲು ಬಂಡೆಯಂತೆ ನಿಂತಿದ್ದೆ. ಈಗಲೂ ರಮೇಶ್ ಜಾರಕಿಹೊಳಿ ಜೊತೆಗಿದ್ದೇನೆ.
– ಡಿ.ಕೆ. ಶಿವಕುಮಾರ್, ಜಲ ಸಂಪನ್ಮೂಲ ಸಚಿವ.
ಬಿಜೆಪಿಯವರು ಕಾಂಗ್ರೆಸ್ ಶಾಸಕರಿಗೆ ಕೋಟ್ಯಂತರ ರೂಪಾಯಿ ಆಮಿಷ ಒಡ್ಡುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಗಳು ಬರುತ್ತಿವೆ. ಅದನ್ನು ನಾವು ನಂಬುತ್ತೇವೆ. ಈ ಆಧಾರದ ಮೇಲೆ ದೂರು ನೀಡಿದ್ದೇವೆ. ಯಡಿಯೂರಪ್ಪಗೆ ಸಿಹಿ ಸಿಕ್ಕರೆ ತಿಂದುಕೊಳ್ಳಲಿ
– ಡಾ.ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ.