Advertisement

ಬೀದಿ ಬದಿ ವ್ಯಾಪಾರಸ್ಥರಿಗೆ ಸಾಮರ್ಥ್ಯಾಭಿವೃದ್ಧಿ ಪಾಠ

04:29 PM Feb 12, 2022 | Team Udayavani |

ಅಳ್ನಾವರ: ಮಳೆ ಇರಲಿ, ಚಳಿ ಇರಲಿ ಬೀದಿ ಬದಿ ಕುಳಿತು ನಿತ್ಯ ವ್ಯಾಪಾರ ಮಾಡುವವರು ಸಮಾಜಕ್ಕೆ ನೀಡುವ ಕೊಡುಗೆ ವಿಶಿಷ್ಟ. ಅವರ ಹಿತರಕ್ಷಣೆಗೆ ಸರ್ಕಾರ ಹಲವಾರು ಕಾನೂನು ಹಾಗೂ ಯೋಜನೆಗಳನ್ನು ರೂಪಿಸಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾ ಧಿಕಾರದ ಪ್ಯಾನೆಲ್‌ ವಕೀಲ ಸೋಮಶೇಖರ ಜಾಡರ ಹೇಳಿದರು.

Advertisement

ಪಪಂ ಸಭಾಭವನದಲ್ಲಿ ಶುಕ್ರವಾರ ನಡೆದ ಬೀದಿ ಬದಿ ವ್ಯಾಪಾರಸ್ಥರ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿ, ನಮಗಾಗಿ ಇರುವ ಸವಲತ್ತುಗಳ ಬಗ್ಗೆ ತಿಳಿವಳಿಕೆ ಇರಬೇಕು. ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಲು ಸ್ಥಳೀಯವಾಗಿ ವೆಂಡಿಂಗ್‌ ಸಮಿತಿ ರಚನೆ ಮಾಡಲಾಗಿದೆ ಎಂದರು.

ಇಂದಿನ ಆಧುನಿಕ ಯುಗದ ಪೈಪೋಟಿಯಲ್ಲಿ ದೊಡ್ಡ ದೊಡ್ಡ ಮಾಲ್‌ಗ‌ಳ ವೈಭವದ ಮಧ್ಯ ಬೀದಿ ಬದಿ ವ್ಯಾಪಾರಿಗಳು ದೇಶದ ಆರ್ಥಿಕ ಚಟುವಟಿಕೆಯಲ್ಲಿ ತಮ್ಮದೇ ಆದ ಸಂಪನ್ಮೂಲ ನೀಡುತ್ತಾ ಸಾಗಿದ್ದಾರೆ. ಚಿಕ್ಕವರು ಎಂಬ ಕೀಳರಿಮೆಯಿಂದ ಹೊರ ಬರಬೇಕು. ಯಾವತ್ತೂ
ದೊಡ್ಡವರು ಎಂಬ ಭಾವನೆ ಇರಬೇಕು. ನಮ್ಮಿಂದ ದೊಡ್ಡವರು ಮುಂದೆ ಬಂದಿದ್ದಾರೆ ಎಂಬ ಸತ್ಯ ತಿಳಿದುಕೊಳ್ಳಿ ಎಂದು ಹೇಳಿದರು.

ದೇಶದಲ್ಲಿ ನಾಲ್ಕು ಕೋಟಿಗೂ ಹೆಚ್ಚು ಹಾಗೂ ರಾಜ್ಯದಲ್ಲಿ 3 ಲಕ್ಷ ಬೀದಿ ಬದಿ ನೋಂದಾಯಿತ ವ್ಯಾಪಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರದ್ದು ಆಕರ್ಷಣೀಯ ವ್ಯಕ್ತಿತ್ವ. ಸ್ಥಳೀಯ ವೆಂಡಿಂಗ್‌ ಸಮಿತಿ ಹಾಗೂ ವ್ಯಾಪಾರಸ್ಥರ ನಡುವೆ ಸುಮಧುರ ಬಾಂಧವ್ಯ ಇರಬೇಕು ಎಂದರು. ಬೀದಿ ಬದಿ ವ್ಯಾಪಾರಿಗಳ ಪರಿಕಲ್ಪನೆ ವಿಧ, ಗುರುತಿಸುವ ವಿಧಾನ ಮತ್ತು ಅರ್ಹತೆ ಕುರಿತು ಸಮುದಾಯ ಸಂಘಟನಾ ಧಿಕಾರಿ ಶರಣಪ್ಪ ಉಣಕಲ್ಲ, ಬ್ಯಾಂಕ್‌ ಸಾಲ ಮತ್ತು ಆರ್ಥಿಕ ಬಲಗೊಳ್ಳುವಿಕೆ ಬಗ್ಗೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಸಹಾಯಕ ವ್ಯವಸ್ಥಾಪಕ ಅರ್ಜುನ ಗೌಡರ, ಮಾರಾಟ ಸಮಿತಿ ಮತ್ತು ಜವಾಬ್ದಾರಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಗಳು ಕುರಿತು ಜಿಲ್ಲಾ ಕಾನೂನು ಸೇವೆಗಳ ಪ್ರಾ ಧಿಕಾರದ ವಕೀಲ ವೈ.ಪಿ. ಮದೂರು , ನೋಂದಾವಣಿ ಪ್ರಕ್ರಿಯೆ ಮತ್ತು ಅನುಕೂಲಗಳ ಕುರಿತು ನಾಗರಿಕ ಮಿತ್ರ ಸಂಸ್ಥೆಯ ಅಧ್ಯಕ್ಷ ಎಸ್‌.ಎಂ. ಮುಲ್ಲಾ ಮಾತನಾಡಿದರು.

ಪಪಂ ಸದಸ್ಯೆ ಜೈಲಾನಿ ಸುದರ್ಜಿ ಶಿಬಿರ ಉದ್ಘಾಟಿಸಿದರು. ಪಪಂ ಮುಖ್ಯಾಧಿಕಾರಿ ಪಿ.ಕೆ. ಗುಡದಾರಿ, ಪ್ರೊಬೇಷನರಿ ಮುಖ್ಯಾಧಿಕಾರಿ ಮಂಜುನಾಥ ಗುಳೇದ, ನಾಗರಾಜ ಗುರ್ಲಹೂಸೂರ, ಸುಮಾ ಸೊಪ್ಪಿ, ಸುವರ್ಣಾ ಕಡಕೋಳ, ಇರ್ಫಾನ ಬಾಗವಾನ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next