Advertisement

ಪರಿಣಾಮಕಾರಿ ಕಾರ್ಯನಿರ್ವಹಣೆಗೆ ತಂತ್ರಜ್ಞಾನ ಅಗತ್ಯ

12:49 PM Nov 22, 2017 | Team Udayavani |

ಹುಣಸೂರು: ಸಹಕಾರ ಸಂಘಗಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳುವುದು ಅತ್ಯವಶ್ಯವೆಂದು ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್‌.ವಿ.ರಾಜೀವ್‌ ಅಭಿಪ್ರಾಯಪಟ್ಟರು.

Advertisement

ಹುಣಸೂರಿನಲ್ಲಿ 64ನೇ ಅಖೀಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಸಹಕಾರ ಇಲಾಖೆಯು ಮೆಮುಲ್‌, ಡಿಸಿಸಿ ಬ್ಯಾಂಕ್‌, ಪಿಎಲ್‌ಡಿಬಿ ಹಾಗೂ ಎಪಿಎಂಸಿ ಸಂಯುಕ್ತಾಶ್ರಯದಲ್ಲಿ ನಡೆದ ಸಮಾರೋಪದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.

ರಾಜ್ಯದಲ್ಲಿ ಸಹಕಾರಿ ಸಂಘಗಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಇನ್ನಷ್ಟು ಪರಿಣಾಮಕಾರಿಯಾಗಬೇಕಿದೆ. ನಮ್ಮದೇಶದಲ್ಲೂ ಮಾನವ ಸಂಪನ್ಮೂಲ ಬಳಕೆಯನ್ನು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಕೌಶಲ್ಯಯುಕ್ತ ತರಬೇತಿಗಾಗಿ ಕೇಂದ್ರ ಸರಕಾರ ಹೊಸ ಇಲಾಖೆಯೇ ಸೃಷ್ಟಿಸಿದ್ದು, ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದರು.

ಎಂಡಿಸಿಸಿ ಬ್ಯಾಂಕಿನ ನಿರ್ದೇಶಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ತಾಲೂಕಿನಲ್ಲಿ ಹೆಚ್ಚಿನ ರೈತರು ತಂಬಾಕು ಬೆಳೆ ಅವಲಂಬಿಸಿದ್ದಾರೆ. ಮುಂದೆ ತಂಬಾಕು ನಿಷೇಧ ಕುರಿತು ಕೇಂದ್ರ ಸರಕಾರ ಗಂಭೀರ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ರೈತರು ಈಗಿಂದಲೇ ಪರ್ಯಾಯ ಬೆಳೆಯತ್ತ ಗಮನಹರಿಸಬೇಕು.

ನಗದುರಹಿತ ವ್ಯವಹಾರ ಇಂದಿನ ಅಗತ್ಯವಾಗಿದೆ. ಕೌಶಲ್ಯ ಮತ್ತು ಬುದ್ಧಿಮತ್ತೆಯೊಂದಿಗೆ ದುಡಿದಲ್ಲಿ ಮಾತ್ರ ಅಭಿವದ್ಧಿ ಸಾಧ್ಯವೆನ್ನುವುದನ್ನು ನಾವೆಲ್ಲರೂ ಅರಿಯಬೇಕು ಎಂದು ತಿಳಿಸಿದರು. ಕೌಶಲ್ಯಾಭಿವದ್ಧಿಯಲ್ಲಿ ಸಹಕಾರ ಸಂಸ್ಥೆಗಳ ಪ್ರಮುಖ ಪಾತ್ರ ಕುರಿತಾಗಿ ವಿಷಯ ಮಂಡಿಸಿದ ಕಾಸ್ಮಾರ್ಡ್‌ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಎ.ಸಿ.ದಿವಾಕರ್‌, ದೇಶದಲ್ಲಿ ಪ್ರತಿವರ್ಷ 1.28 ಕೋಟಿ ಜನರು ಕಾರ್ಮಿಕರಾಗಿ ಹೊರ ಹೊಮ್ಮುತ್ತಿದ್ದಾರೆ,

Advertisement

ಆದರೆ ಈ ಪೈಕಿ ಕೇವಲ 30ಲಕ್ಷ ಮಂದಿ ಮಾತ್ರ ಕೌಶಲ್ಯಾಧಾರಿತ ತರಬೇತಿ ಪಡೆದುಕೊಳ್ಳುತ್ತಿದ್ದು, ಇದನ್ನು ಹೋಗಲಾಡಿಸಲು ಕೇಂದ್ರ ಸರಕಾರ ಮುದ್ರಾ ಯೋಜನೆಯನ್ನು ಜಾರಿಗೊಳಿಸಿದೆ. ಮುದ್ರಾಯೋಜನೆಯನ್ನು ಹೆಚ್ಚು ಬಳಸಿಕೊಂಡಿರುವ ಪ್ರಥಮ ರಾಜ್ಯ ಕರ್ನಾಟಕವಾಗಿದ್ದು, ರಾಜ್ಯದಲ್ಲಿ 47 ಲಕ್ಷ ಯೂನಿಟ್‌ಗಳು ಮುದ್ರಾ ಯೋಜನೆಯಡಿ ಸ್ಥಾಪಿತಗೊಂಡಿವೆ ಎಂದರು.

ಇದೇ ಸಂದರ್ಭದಲ್ಲಿ ಹಿರಿಯ ಸಹಕಾರಿಗಳನ್ನು ಹಾಗೂ ಉತ್ತಮವಾಗಿ ಕರ್ತವ್ಯ ನಿರ್ವಹಿಸಿರುವ ಸಹಕಾರಿ ಸಂಘದ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳನ್ನು ಸನ್ಮಾನಿಸಲಾಯಿತು. ಮೈಸೂರು ಜಿಲ್ಲಾ ಸಹಕಾರಕೇಂದ್ರ ಬ್ಯಾಂಕಿನ ನಿರ್ದೇಶಕ ರಾಮಕೃಷ್ಣೇಗೌಡ ಮಾತನಾಡಿದರು.

ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಕೆ.ಎಸ್‌.ಕುಮಾರ್‌, ತಾಪಂ ಉಪಾಧ್ಯಕ್ಷ ಪ್ರೇಮ್‌ಕುಮಾರ್‌, ಟಿಎಪಿಸಿಎಂಎಸ್‌ ಅಧ್ಯಕ್ಷ ಬಿ.ಎನ್‌.ವೆಂಕಟೇಶ್‌, ಜಿಲ್ಲಾಸಹಕಾರ ಹಾಲು ಒಕ್ಕೂಟದ ನಾಮನಿರ್ದೇಶಕಿ ಶಿವಗಾಮಿ, ಅಧಿಕಾರಿಗಳು ಹಾಗೂ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next