Advertisement

ಕೇಶ ಸೌಂದರ್ಯಕ್ಕೆ ಇಲ್ಲಿದೆ ಸುಲಭ ಮನೆಮದ್ದು

02:50 PM Mar 26, 2021 | Team Udayavani |

ಕೇಶ ಸೌಂದರ್ಯ ಪ್ರತಿಯೊಬ್ಬರ ಕಾಳಜಿಯ ವಿಷಯಗಳಲ್ಲಿ ಒಂದು. ನಮ್ಮ ತಲೆ ಕೂದಲು ಸದಾ ಸೊಂಪಾಗಿರಬೇಕು ಎನ್ನುವುದು ಪ್ರತಿಯೊಬ್ಬರ ಆಸೆ ಕೂಡಾ ಹೌದು. ಅದರಲ್ಲೂ ಮಹಿಳೆಯರಂತೂ ಈ ವಿಷಯದಲ್ಲಿ ಎಲ್ಲಿಲ್ಲದ ಆಸಕ್ತಿಯನ್ನು ತೋರಿಸುತ್ತಾರೆ.

Advertisement

ಕೂದಲು ಉದುರುವಿಕೆ ಹಾಗೂ ಹೊಟ್ಟಿನ ಸಮಸ್ಯೆ ಸಾಮಾನ್ಯವಾಗಿ ಹಲವರನ್ನು ಕಾಡುತ್ತದೆ. ಇದನ್ನು ನಿವಾರಿಸುವ ಸಲುವಾಗಿ ನಾನಾ ಬಗೆಯ ಶ್ಯಾಂಪೊ ಹಾಗೂ ರಾಸಾಯನಿಕ ವಸ್ತುಗಳನ್ನು ಬಳಸುತ್ತಾರೆ. ಆದರೆ ಈ ಸಮಸ್ಯೆಗಳಿಗೆ ಮನೆಯಲ್ಲಿಯೇ ಸಿಗುವ ನೈಸರ್ಗಿಕ ವಸ್ತುಗಳಿಂದ ಪರಿಹಾರನ್ನು ಕಂಡುಕೊಳ್ಳಬಹುದಾಗಿದೆ.

ಮದರಂಗಿ

ಮದರಂಗಿಯನ್ನು ಸಾಮಾನ್ಯವಾಗಿ ಮದುವೆ ಅಥವಾ ಶುಭ ಸಮಾರಂಭಗಳಲ್ಲಿ  ಕೈಗೆ ಹಚ್ಚಿಕೊಳ್ಳುತ್ತಾರೆ. ಆದರೆ ಈ ಮದರಂಗಿ ಕೂದಲಿನ ಸಮಸ್ಯೆಗೂ ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ. ಮದರಂಗಿಯ ಜೊತೆ ಜೊತೆಗೆ ಸಾಸಿವೆ ಎಣ್ಣೆಯನ್ನು ಬಳಸಿದರೆ ಇನ್ನೂ ಹೆಚ್ಚು ಶೀಘ್ರವಾಗಿ ಸಮಸ್ಯೆ ಪರಿಹಾರವಾಗುತ್ತದೆ. 250 ಮಿ.ಲೀ. ಸಾಸಿವೆ ಎಣ್ಣೆಗೆ ತೊಳೆದು ಒಣಗಿಸಿರುವ ಮದರಂಗಿ ಎಲೆಗಳನ್ನು 60 ಗ್ರಾಂನಷ್ಟು ಹಾಕಿ. ನಂತರ ಇದನ್ನು ಕುದಿಸಿ ಬಳಿಕ ಎಣ್ಣೆಯನ್ನು ಸೋಸಿಕೊಳ್ಳಿ. ತದನಂತರ ಆಗಾಗ ಈ ಎಣ್ಣೆಯನ್ನು ತಲೆ ಕೂದಲಿಗೆ ಮಸಾಜ್ ಮಾಡಿಕೊಳ್ಳಿ.

ಈರುಳ್ಳಿ ಬೆಳ್ಳುಳ್ಳಿ  ಬಳಕೆ

Advertisement

ಇವುಗಳಲ್ಲಿ ಇರುವಂತಹ ಸಲ್ಫರ್ ಅಂಶವು ಕಾಲಜನ್ ಉತ್ಪತ್ತಿಯನ್ನು ಹೆಚ್ಚಿಸುವ ಮೂಲಕ ಕೂದಲಿನ ಬೆಳವಣಿಗೆಗೆ ಸಹಕಾರಿ. ಬೆಳ್ಳುಳ್ಳಿ ಮತ್ತು ಈರುಳ್ಳಿಯಲ್ಲಿ ಉತ್ತಮ ಮಟ್ಟದ ಸಲ್ಫರ್ ಅಂಶವಿದೆ. ಹೀಗಾಗಿ ಸಾಂಪ್ರದಾಯಿಕ ಔಷಧಿಗಳಲ್ಲಿ ಕೂದಲಿನ ಬೆಳವಣಿಗೆಗೆ ಇದನ್ನು ಬಳಸಲಾಗಿದೆ.

ಬಳಸುವುದು ಹೇಗೆ?

ಮೊದಲು ಈರುಳ್ಳಿಯನ್ನು ಕತ್ತರಿಸಿಕೊಂಡು ಅದರ ರಸ ತೆಗೆಯಿರಿ. ಈ ರಸವನ್ನು ತಲೆಗೆ ಹಾಕಿ ಚೆನ್ನಾಗಿ ಮಸಾಜ್ ಮಾಡಿಕೊಂಡು 15 ನಿಮಿಷಗಳ ಕಾಲ ಹಾಗೆ ಬಿಡಿ. ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಇನ್ನು ಕೆಲವು ಬೆಳ್ಳುಳ್ಳಿಯನ್ನು ಜಜ್ಜಿಕೊಂಡು  ಅದಕ್ಕೆ  ಸ್ವಲ್ಪ ತೆಂಗಿನ ಎಣ್ಣೆ ಸೇರಿಸಿ ಕೆಲವು ನಿಮಿಷ ಬಿಸಿ ಮಾಡಿಕೊಳ್ಳಬೇಕು. ನಂತರ ಸ್ಪಲ್ಪ ಹೊತ್ತು ಈ ಎಣ್ಣೆ ತಣ್ಣಗಾಗಲು ಬಿಟ್ಟು ಆ ಬಳಿಕ ಈ ಎಣ್ಣೆಯನ್ನು ತಲೆಗೆ ಮಾಸಾಜ್ ಮಾಡಿ.

ಇದನ್ನೂ ಓದಿ:ವಿಟ್ಲ ಠಾಣಾಧಿಕಾರಿ ಮೇಲೆ ಫೈರಿಂಗ್ ಪ್ರಕರಣ: ಪಿಸ್ತೂಲ್, ಗಾಂಜಾ, ಮಾರಕಾಯುಧಗಳು ವಶಕ್ಕೆ

ದಾಸವಾಳದ ಬಳಕೆ

ದಾಸವಾಳದಲ್ಲಿ ಕೂದಲಿನ ಆರೋಗ್ಯಕ್ಕೆ ಪೂರಕವಾಗುವ ಅಂಶಗಳಿದ್ದು ದಾಸವಾಳ  ಮತ್ತು ತೆಂಗಿನ ಎಣ್ಣೆ ಬಳಸಿದರೆ ಕೂದಲು ಕಪ್ಪಾಗಿ ಉದ್ದವಾಗಿ ಕಾಣುವುದು. ಇದು ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯುವುದು ಮತ್ತು ತಲೆಹೊಟ್ಟು ನಿವಾರಣೆ ಮಾಡುವುದು. ಇದನ್ನು ನಿಯಮಿತವಾಗಿ ಬಳಕೆ ಮಾಡಿದರೆ ಕೂದಲು ಉದುರುವಿಕೆ ತಡೆಯಬಹುದು.

ದಾಸವಾಳದ ಕೆಲವು ಎಲೆಗಳನ್ನು ಜಜ್ಜಿಕೊಂಡು  ಇದಕ್ಕೆ ಎಳ್ಳೆಣ್ಣೆ ಅಥವಾ ತೆಂಗಿನ ಎಣ್ಣೆ ಹಾಕಿ ಪೇಸ್ಟ್ ಮಾಡಿ ಕೊಂಡು ಕೂದಲಿಗೆ ಹಚ್ಚುವುದರಿಂದ  ಆರೋಗ್ಯವಂತ ಕೂದಲನ್ನು ಪಡೆಯಬಹುದಾಗಿದೆ.

ಮೊಟ್ಟೆಯ ಬಳಕೆ

ಮೊಟ್ಟೆಯಲ್ಲಿ ಕೂಡ ಸಲ್ಫರ್ ಅಂಶವು ಉತ್ತಮವಾಗಿದ್ದು, ಪ್ರೋಟೀನ್ ಹಾಗೂ ಖನಿಜಾಂಶ ಗಳಾದ ಸೆಲೆನಿಯಂ, ಐಯೋಡಿನ್, ಕಬ್ಬಿಣಾಂಶ ಮತ್ತು ಸತು ಇದೆ. ಇದರಿಂದ ಕೂದಲಿನ ಬೆಳವಣಿಗೆಗೆ ತುಂಬಾ ಸಹಕಾರಿಯಾಗುತ್ತದೆ.

ಮೊಟ್ಟೆಯಲ್ಲಿರುವ ಬಿಳಿ ಲೋಳೆ ತೆಗೆದುಕೊಂಡು ಒಂದು ಚಮಚ ಆಲಿವ್ ಎಣ್ಣೆಯ ಜತೆಗೆ ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಳ್ಳಿ. ನಂತರ ತಲೆಕೂದಲಿಗೆ ಹಚ್ಚಿ. ಬಳಿಕ  15 ರಿಂದ 20 ನಿಮಿಷ ಕಾಲ ಹಾಗೇ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.

Advertisement

Udayavani is now on Telegram. Click here to join our channel and stay updated with the latest news.

Next