Advertisement

ಉಚಿತ ಬಸ್‌ ಪ್ರಯಾಣ ಕೊಡುಗೆಯ ಪರಿಣಾಮ: ಪ್ರವಾಸಿ ಕೇಂದ್ರಗಳಲ್ಲಿ ವ್ಯಾಪಾರ ಹೆಚ್ಚಳ ನಿರೀಕ್ಷೆ

12:08 AM Jun 30, 2023 | Team Udayavani |

ಕಾರ್ಕಳ: ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಹಿನ್ನೆಲೆಯಲ್ಲಿ ಪ್ರವಾಸಿ ತಾಣ, ಧಾರ್ಮಿಕ ಕ್ಷೇತ್ರಗಳಿಗೆ ಆಗಮಿಸುವವರ ಸಂಖ್ಯೆ ಹೆಚ್ಚಾಗಿದ್ದು ಮಹಿಳೆಯರ ದಂಡೇ ಹರಿದು ಬರುತ್ತಿದೆ. ಇದರಿಂದಾಗಿ ಪ್ರವಾಸಿ ಕೇಂದ್ರಗಳ ಪರಿಸರದಲ್ಲಿ ವ್ಯಾಪಾರ ವಹಿವಾಟು ಹೆಚ್ಚಿ ಪ್ರವಾಸೋದ್ಯಮ ಕ್ಷೇತ್ರಕ್ಕೂ ಆದಾಯ ಹೆಚ್ಚಾಗುವ ನಿರೀಕ್ಷೆ ಇದೆ.

Advertisement

ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಉಡುಪಿಯ ಶ್ರೀಕೃಷ್ಣ ದೇವಸ್ಥಾನ, ಶೃಂಗೇರಿ, ಹೊರನಾಡು ಮುಂತಾದ ಕಡೆಗಳಿಗೆ ಸಾಗರೋಪಾದಿಯಲ್ಲಿ ಜನರು ಕಂಡುಬರುತ್ತಿದ್ದಾರೆ. ಹಂಪಿ, ಮೈಸೂರು, ಬೇಲೂರು, ಹಾಸನ ಮೊದಲಾದ ಪ್ರೇಕ್ಷಣೀಯ ಸ್ಥಳಗಳಿಗೂ ಭೇಟಿ ನೀಡುತ್ತಿದ್ದಾರೆ. ಹೆಚ್ಚಿನ ಯಾತ್ರಿಕರ ಆಗಮನದಿಂದ ಉಭಯ ಜಿಲ್ಲೆಗಳ ಧಾರ್ಮಿಕ ತಾಣಗಳ ಪರಿಸರದಲ್ಲಿ ವ್ಯಾಪಾರ ಚಟುವಟಿಕೆ ಚುರುಕಾಗಿದೆ. ಪ್ರವಾಸಿಗರು ದೇಗುಲದ ಪರಿಸರದ ಅಂಗಡಿಗಳಲ್ಲಿ, ಬಸ್‌ ನಿಲ್ದಾಣಗಳಲ್ಲಿ ಸಣ್ಣಪುಟ್ಟ ವ್ಯಾಪಾರ ನಡೆಸುತ್ತಾರೆ. ದೇವರ ದರ್ಶನಕ್ಕೆ ತೆರಳುವಾಗ ಹರಕೆ ಅರ್ಪಣೆಗೆ ಕಾಣಿಕೆ ರೂಪದ ಸೊತ್ತು, ಪೂಜಾ ಸಾಮಗ್ರಿ ಖರೀದಿಸುತ್ತಿದ್ದಾರೆ.

ಜತೆಗೆ ದೇವರ ಫೋಟೋ, ಸಂಬಾರ ಪದಾರ್ಥ (ಕಾಳುಮೆಣಸು ಇತ್ಯಾದಿ) ಮಣಿಸರಕು, ತೋರಣ, ಪ್ರಸಾದ, ಖರ್ಜೂರ, ಕಲ್ಲುಸಕ್ಕರೆ, ಮಂಡಕ್ಕಿ, ಕೊಬ್ಬರಿ ಎಣ್ಣೆ ಹೀಗೆ ದೇವಸ್ಥಾನ ಬದಿಯ ಅಂಗಡಿಗಳಿಂದ ಖರೀದಿಸಿ ಕೊಂಡೊಯ್ಯುತ್ತಾರೆ.

ಸ್ನೇಹಿತರು, ಅಕ್ಕಪಕ್ಕದ ಮನೆಯವರ ಜತೆಗೂಡಿ ತಂಡವಾಗಿ ಆಗಮಿಸುವ ಮಹಿಳಾ ಭಕ್ತರು ದೇವಸ್ಥಾನಗಳಲ್ಲಿ ಅನ್ನಪ್ರಸಾದ ಸ್ವೀಕರಿಸಿ, ಚಹಾ, ಉಪಾಹಾರಕ್ಕಾಗಿ ಪರಿಸರದ ಹೊಟೇಲು, ಮಿನಿ ಕ್ಯಾಂಟೀನ್‌, ಬೀದಿ ಬದಿಯ ಗೂಡಂಗಡಿಗಳನ್ನು ಆಶ್ರಯಿಸುತ್ತಾರೆ. ಸಣ್ಣಪುಟ್ಟ ವ್ಯಾಪಾರದಿಂದ ಹಿಡಿದು ದೊಡ್ಡ ಪ್ರಮಾಣದ ವರೆಗೆ ವ್ಯಾಪಾರದ ವರೆಗೂ ನಾನಾ ಹಂತದಲ್ಲಿ ವ್ಯಾಪಾರ ವೃದ್ಧಿಗೆ ಇದು ಅನುಕೂಲ ಮಾಡಿಕೊಡುತ್ತಿದೆ.

ವಸತಿಗೃಹಗಳೂ ಭರ್ತಿ
ದೂರದೂರುಗಳಿಂದ ಆಗಮಿಸುವ ಮಹಿಳಾ ಭಕ್ತರು ದೇವಸ್ಥಾನಗಳ ವಸತಿಗೃಹಗಳಲ್ಲಿ ವಾಸ್ತವ್ಯ ಹೂಡುತ್ತಾರೆ. ಛತ್ರ, ವಸತಿಗೃಹಗಳು ಭರ್ತಿಯಾಗುತ್ತಿವೆ. ವಸತಿಗೃಹ ಬುಕ್ಕಿಂಗ್‌, ಪ್ರವಾಸಿ ತಾಣಗಳಿಗೆ ಟಿಕೆಟ್‌ ಬುಕ್ಕಿಂಗ್‌ ಇತ್ಯಾದಿ ಕಾರಣಗಳಿಂದ ಪ್ರವಾಸೋದ್ಯಮ ನಿಟ್ಟಿನಲ್ಲೂ ಹೆಚ್ಚು ಆದಾಯ ಲಭಿಸಲಾರಂಭಿಸಿದೆ. ಮುಂದಿನ ದಿನಗಳಲ್ಲಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಿದರೆ ಮತ್ತಷ್ಟು ದಟ್ಟಣೆ ಆಗುವ ನಿರೀಕ್ಷೆಗಳಿವೆ.

Advertisement

ಮೊದಲೆಲ್ಲ ಮಹಿಳೆಯರು ಅಂಗಡಿಗೆ ಖರೀದಿಗೆ ಬರುತ್ತಿದ್ದರೂ ದೊಡ್ಡ ಸಂಖ್ಯೆಯಲ್ಲಿ ಬರುತ್ತಿರಲಿಲ್ಲ. ಈಗ ಉಚಿತ ಬಸ್‌ ಸೌಲಭ್ಯದ ಬಳಿಕ ಖರೀದಿಗೆ ಬರುವವರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚು. ದೊಡ್ಡ ಬೆಲೆಯ ಸಾಮಗ್ರಿಗಳನ್ನು ಅವರು ಖರೀದಿಸುವುದಿಲ್ಲ. ಅವರದು ಸಣ್ಣ ಪುಟ್ಟ ಖರೀದಿಯೇ ಆಗಿದ್ದರೂ ಒಟ್ಟಾರೆ ವ್ಯವಹಾರದಲ್ಲಿ ಹೆಚ್ಚಳವಾಗಿದೆ.
– ದಿನೇಶ್‌ ಕೆ., ವ್ಯಾಪಾರಿ ಕುಕ್ಕೆ ಸುಬ್ರಹ್ಮಣ್ಯ

 ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next