Advertisement

ಆಡಳಿತ ವಿರೋಧಿ ಅಲೆಯ ಪರಿಣಾಮ

10:33 PM May 13, 2023 | Team Udayavani |

ದೇಶವನ್ನೇ ತನ್ನತ್ತ ಸೆಳೆದಿದ್ದ ಕರ್ನಾಟಕ ವಿಧಾನಸಭೆಯ ಚುನಾವಣೆ ಫ‌ಲಿತಾಂಶ ಪ್ರಕಟವಾಗಿದೆ. ಅತಂತ್ರ ವಿಧಾನಸಭೆ ರಚನೆಯಾಗಲಿದೆ ಮತ್ತು ಜೆಡಿಎಸ್‌ ಸರ್ಕಾರ ರಚನೆಯಲ್ಲಿ ಪ್ರಧಾನ ಪಾತ್ರ ವಹಿಸಲಿದೆ ಎಂದು ಹಲವು ಸುದ್ದಿ ವಾಹಿನಿಗಳು ಪ್ರಕಟಿಸಿದ ಮತಗಟ್ಟೆ ಸಮೀಕ್ಷೆಗಳು ಹುಸಿಯಾಗಿವೆ. 224 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ 136 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಇದರಿಂದಾಗಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಸೋಲು ಅನುಭವಿಸಿದೆ. ಆಡಳಿತ ವಿರೋಧಿ ಅಲೆಗೆ ಹಾಲಿ ಸರ್ಕಾರದ ಒಟ್ಟು 14 ಮಂದಿ ಸಚಿವರು ಜನರ ಕೋಪಕ್ಕೆ ತುತ್ತಾಗಿದ್ದಾರೆ.

Advertisement

ಸಾಮಾನ್ಯವಾಗಿ ಕರ್ನಾಟಕ ಆಡಳಿತರೂಢ ಪಕ್ಷಕ್ಕೆ ಮತ್ತೆ ಮಣೆ ಹಾಕು ವುದು ಅಪರೂಪ. ಈ ಬಾರಿಯೂ ಹಾಗೆಯೇ ಆಗಿದೆ. ಬಿಜೆಪಿ ಸರ್ಕಾರದ ವಿರುದ್ಧ ವ್ಯಕ್ತವಾಗಿದ್ದ ಶೇ.40 ಭ್ರಷ್ಟಾಚಾರ ಆರೋಪ, ಪೊಲೀಸ್‌ ಇಲಾಖೆಯಲ್ಲಿ ಉಂಟಾದ ನೇಮಕ ಹಗರಣ, ಬೆಲೆ ಏರಿಕೆ, ನಿರುದ್ಯೋಗ ವಿಚಾರದಲ್ಲಿ ಜನರ ಆಕ್ರೋಶವನ್ನು ಕಾಂಗ್ರೆಸ್‌ ಸಮರ್ಥ         ವಾಗಿಯೇ ಬಳಕೆ ಮಾಡಿಕೊಂಡಿದೆ. 2018ರ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳಲ್ಲಿ ಗೆದ್ದುಕೊಂಡು ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ನಂತರ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದವು. ನಂತರ ಆಪರೇಷನ್‌ ಕಮಲದ ಮೂಲಕ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ 20 ಮಂದಿ ಶಾಸಕರನ್ನು ಬಿಜೆಪಿಗೆ ಸೇರ್ಪಡೆ ಮಾಡಿ, ನಂತರ ನಡೆದಿದ್ದ ಉಪ ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಯಡಿಯೂರಪ್ಪನವರ ನೇತೃತ್ವದಲ್ಲಿ ಹೊಸ ಸರ್ಕಾರವೂ ಸ್ಥಾಪನೆಯಾಗಿತ್ತು.

ಆದರೆ, ಜನರ ನಿರೀಕ್ಷೆಗಳಿಗೆ ತಕ್ಕಂತೆ ಸರ್ಕಾರ ಕಾರ್ಯನಿರ್ವಹಿಸಲಿಲ್ಲ ಎಂದು ಹಲವು ಆರೋಪಗಳು ಪದೇ ಪದೆ ವ್ಯಕ್ತವಾಗುತ್ತಿದ್ದವು. ಆ ಆರೋಪವನ್ನು ಸರಿಪಡಿಸುವ ನಿಟ್ಟಿನಲ್ಲಿ ಯಾವುದೇ ಪೂರಕವಾಗಿರುವ ತಿರುಗೇಟು, ಸಮರ್ಥನೆಗಳು ರಭಸವಾಗಿ ಬರಲಿಲ್ಲ. ಅದನ್ನು ಕಾಂಗ್ರೆಸ್‌ ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಮತ್ತು ಅವರ ತಂಡ ಸಮರ್ಥವಾಗಿ ಬಳಸಿಕೊಂಡಿತು.

ಕಾಂಗ್ರೆಸ್‌ ವಿಚಾರದಲ್ಲಿ ಇದೊಂದು ಅತ್ಯುತ್ತಮ ಫ‌ಲಿತಾಂಶವೆಂದೇ ಹೇಳಬೇಕಾಗುತ್ತದೆ. 1989ರಲ್ಲಿ ವೀರೇಂದ್ರ ಪಾಟೀಲ್‌ ನೇತೃತ್ವದಲ್ಲಿ 178 ಸ್ಥಾನಗಳನ್ನು ಗೆದ್ದದ್ದು ರಾಜ್ಯದ ಮಟ್ಟಿಗೆ ಇದುವರೆಗಿನ ದಾಖಲೆ. ಸಿದ್ದರಾಮ ಯ್ಯನವರ ನೇತೃತ್ವದಲ್ಲಿ 122 ಕ್ಷೇತ್ರಗಳಲ್ಲಿ ಜಯ ಸಾಧಿಸಲಾಗಿತ್ತು. ಸದ್ಯ ಬಿಜೆಪಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ನೇತೃತ್ವದಲ್ಲಿ 1999ರಲ್ಲಿ 132 ಕ್ಷೇತ್ರಗಳಲ್ಲಿ ವಿಜಯ ಪತಾಕೆಯನ್ನು ಕಾಂಗ್ರೆಸ್‌ ಹಾರಿಸಿತ್ತು. ಆ ಜಯದ ಬಳಿಕ ಪ್ರಸಕ್ತ ಸಾಲಿನ ಚುನಾವಣೆಯಲ್ಲಿ 136 ಕ್ಷೇತ್ರಗಳಲ್ಲಿ ವಿಜಯಿಯಾಗಿರುವುದು ಸಾಧನೆಯೇ ಸರಿ.

ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಕೂಡ ಕೆಲವೊಂದು ಪ್ರಯೋಗ   ಗಳನ್ನು ಮಾಡಿದ್ದು ಕೂಡ ಬಿಜೆಪಿಗೆ ಎರವಾಗಿ ಪರಿಣಮಿಸಿತು ಎಂಬ ವಾದಗಳೂ ಇವೆ. ಕಾಂಗ್ರೆಸ್‌ ವಾಗ್ಧಾನ ಮಾಡಿದ ಐದು ಗ್ಯಾರೆಂಟಿಗಳಿಗೆ ರಾಜ್ಯದ ಜನರು ಮಾರು ಹೋಗಿದ್ದಾರೆ ಎನ್ನುವುದರ ಜತೆಗೆ ಆಡಳಿತ ವೈಖರಿ ಮತ್ತು ಧೋರಣೆ ಹಿಡಿಸಲಿಲ್ಲ ಎನ್ನುವುದು ಹಗಲಿನಷ್ಟೇ ಸತ್ಯವಾಗಿದೆ.

Advertisement

ಹಿಂದಿನ ಚುನಾವಣೆಯಂತೆ ಜನರು ಅತಂತ್ರ ವಿಧಾನಸಭೆಗೆ ಮತ ಹಾಕದೆ, ಸುಭದ್ರ ಸರ್ಕಾರಕ್ಕಾಗಿ ಜನಾದೇಶ ನೀಡಿದ್ದಾರೆ. ಕಾಂಗ್ರೆಸ್‌ನ ನಾಯಕರು ಅದನ್ನು ಅರಿತುಕೊಂಡು ಜನಪರ ಕಾರ್ಯಕ್ರಮ, ಕಟ್ಟುನಿಟ್ಟಿನ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುಂದಡಿ ಇಡುವುದು ಅಗತ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next