ಮೈಸೂರು: ಹುತಾತ್ಮ ಯೋಧರ ಗೌರವಾರ್ಥ ಅವರ ಮಕ್ಕಳಿಗೆ ಪದವಿ ಯಿಂದ ಪಿಎಚ್‌ಡಿ ಹಂತದವರೆಗೆ ಊಟ ಮತ್ತು ವಸತಿ ಸಹಿತ ಉಚಿತ ಶಿಕ್ಷಣ ನೀಡಲು ಮೈಸೂರು ವಿಶ್ವವಿದ್ಯಾನಿಲಯ ತೀರ್ಮಾನಿಸಿದೆ.
ಮೈಸೂರು ವಿವಿ ಪ್ರಭಾರ ಕುಲಪತಿ ಪೊ›.ದಯಾನಂದ ಮಾನೆ ಅಧ್ಯಕ್ಷತೆಯಲ್ಲಿ ವಿವಿಯ ಕಾರ್ಯಸೌಧ ಕ್ರಾಫರ್ಡ್ ಭವನದಲ್ಲಿ ಸೋಮವಾರ ನಡೆದ ಶೈಕ್ಷಣಿಕ ಪರಿಷತ್ತಿನ ಎರಡನೇ ಸಾಮಾನ್ಯ ಸಭೆಯಲ್ಲಿ, ಮೈಸೂರು ವಿವಿ ಈಗಾಗಲೇ ಆತ್ಮಹತ್ಯೆಗೆ ಶರಣಾದ ರೈತರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವುದರಿಂದ ಹುತಾತ್ಮ ಯೋಧರ ಮಕ್ಕಳಿಗೂ ಉಚಿತ ಶಿಕ್ಷಣ ನೀಡಲು ಒಪ್ಪಿಗೆ ದೊರೆಯಿತು.
ಕಾಶ್ಮೀರದಲ್ಲಿ ಇತ್ತೀಚೆಗೆ ಸೇನಾ ಶಿಬಿರದ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಗೌರವಾರ್ಥ ಅವರ ಕುಟುಂಬದ ಹೆಣ್ಣುಮಕ್ಕಳಿಗೆ ಎಲ್ಲ ವಿಶ್ವವಿದ್ಯಾನಿಲಯಗಳಲ್ಲಿ ಪದವಿಯಿಂದ ಪಿಎಚ್.ಡಿ ಹಂತದವರೆಗೆ ಊಟ, ವಸತಿ ಸಹಿತ ಉಚಿತ ಶಿಕ್ಷಣ ನೀಡುವಂತೆ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಎಲ್ಲ ವಿವಿಗಳಿಗೆ ಸೂಚನೆ ನೀಡಿರುವ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.
ಕಾಶ್ಮೀರದಲ್ಲಿ ಮಾತ್ರವಲ್ಲ, ಯೋಧರು ಎಲ್ಲೇ ಹುತಾತ್ಮರಾಗಲಿ ಅವರ ಮಕ್ಕಳನ್ನು ಗಂಡು-ಹೆಣ್ಣು ಎಂದು ಬೇಧ ಮಾಡದೆ ಇಬ್ಬರಿಗೂ ವಿವಿಯಲ್ಲಿ ಉಚಿತ ಶಿಕ್ಷಣ ನೀಡಲು ಸಭೆ ಒಪ್ಪಿಗೆ ನೀಡಿತು. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಾಯ್ದೆಯ ಜಾರಿಯಿಂದಾಗಿ ತೆರಿಗೆ ನಿರ್ವಹಣೆ ಡಿಪ್ಲೊಮಾ ಕೋರ್ಸ್‌ನ ಪರಿಷ್ಕೃತ ಪಠ್ಯಕ್ರಮವನ್ನು 2017-18ನೇ ಶೈಕ್ಷಣಿಕ ಸಾಲಿನಿಂದಲೇ ಅಳವಡಿಸಲು ಸಭೆ ಒಪ್ಪಿಗೆ ನೀಡಿತು.ಮೈಸೂರು ವಿವಿಯ ನೇರ ನೇಮಕಾತಿ ಕರಡು ಅಧಿನಿಯಮಕ್ಕೆ ಒಪ್ಪಿಗೆ ಸೂಚಿಸಲಾಯಿತು.
ಕಾಲೇಜು ಸ್ಥಳಾಂತರಕ್ಕೆ ಅನುಮತಿ: ಹಾಸನದ ಸಾಲಗಾಮೆ ರಸ್ತೆಯಲ್ಲಿರುವ ಸಂತ ಜೋಸೆಫರ ಪ್ರಥಮ ದರ್ಜೆ ಕಾಲೇಜನ್ನು ಬಿ.ಕಾಟೇಹಳ್ಳಿ ಡೈರಿ ಸರ್ಕಲ್ ಸಮೀಪ ಹೊಸದಾಗಿ ನಿರ್ಮಿಸಿರುವ ಕಟ್ಟಡಕ್ಕೆ 2017-18ನೇ ಶೈಕ್ಷಣಿಕ ಸಾಲಿನಿಂದ ಸ್ಥಳಾಂತರಿಸಲು ಅನುಮತಿ ನೀಡಲಾಯಿತು.
ಮಾನ್ಯತೆ ರದ್ದು: ಮೈಸೂರಿನ ಜೆಎಸ್‌ಎಸ್ ರಿಸರ್ಚ್ ಫೌಂಡೇಷನ್ ಮತ್ತು ಬೆಂಗಳೂರಿನ ಬಯೋ ಕಂಟ್ರೋಲ್ ರೀಸರ್ಚ್ ಲ್ಯಾಬೊರೇಟರೀಸ್‌ಗಳು 2017-18ನೇ ಸಾಲಿನಿಂದ ಯಾವುದೇ ವಿದ್ಯಾರ್ಥಿಗೆ ಸಂಶೋಧನೆಗೆ ನೋಂದಣಿ ಮಾಡಿಕೊಳ್ಳಲು ಆಗುತ್ತಿಲ್ಲ, ಹೀಗಾಗಿ ಕೇಂದ್ರಗಳ ಮಾನ್ಯತೆ ರದ್ದುಪಡಿಸುವಂತೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಎರಡೂ ಕೇಂದ್ರಗಳ ಮಾನ್ಯತೆ ರದ್ದುಪಡಿಸಲು ಸಭೆ ಒಪ್ಪಿಗೆ ನೀಡಿತು.
ಚಿನ್ನದ ಪದಕ ದತ್ತಿ ಸ್ಥಾಪನೆ: ಉರ್ದು ವಿಭಾಗದ “ದೆಖನಿ ಅಬದ್’ ವಿಷಯದಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗೆ ಚಿನ್ನದ ಪದಕ ನೀಡಲು ಕಲಬುರ್ಗಿಯ ಸಿರಾಜ್ ಹಶಿಮ್ ಅಲಿ ನೀಡಿರುವ ಒಂದು ಲಕ್ಷ ರೂ. ದೇಣಿಗೆಯಲ್ಲಿ ವರ ಕೋರಿಕೆಯಂತೆ ಪ್ರೊ.ಹಶಿಮ್ ಅಲಿ ಸ್ಮರಣಾರ್ಥ ಚಿನ್ನದ ಪದಕ ದತ್ತಿ ಸ್ಥಾಪಿಸಲು ನಿರ್ಧರಿಸಲಾಯಿತು.
ವಿವಿ ಕುಲಸಚಿವೆ ಡಿ.ಭಾರತಿ, ಪರೀಕ್ಷಾಂಗ ಕುಲಸಚಿವ ಪ್ರೊ.ಜೆ. ಸೋಮಶೇಖರ್, ಶೈಕ್ಷಣಿಕ ಪರಿಷತ್ತಿನ ಸದಸ್ಯರು ಹಾಗೂ ವಿವಿಧ ನಿಕಾಯದ ಅಧ್ಯಕ್ಷರುಗಳು ಸಭೆಯಲ್ಲಿ ಭಾಗವಹಿಸಿದ್ದರು.