Advertisement
ಇಂದಿನ ಶಿಕ್ಷಣವು ಮೂಲಭೂತವಾಗಿ ಮಾನವ ನಲ್ಲಿನ ಅಜ್ಞಾನವನ್ನು ನಿಗ್ರಹಿಸಿ, ಜ್ಞಾನವನ್ನು ನಿರ್ಮಿಸು ವಂಥದ್ದು. ಆತನನ್ನು ಅನಾಗರಿಕನಿಂದ ನಾಗರಿಕನನ್ನಾಗಿ ರೂಪಿಸುವ ಪ್ರಕ್ರಿಯೆ ಎಂದೇ ನಂಬಿಕೆ. ಆದರೆ ಭಾರತೀಯ ಪರಂಪರಾಗತ ಶಿಕ್ಷಣ ಕ್ರಮಗಳು ಮಾನ ವನು ತನ್ನ ಜೀವನವನ್ನು ರೂಪಿಸಿಕೊಳ್ಳಲು ಅಗತ್ಯವಾದ ವಿವೇಕ, ಪ್ರಜ್ಞೆಯನ್ನು ಆತನಲ್ಲಿ ನಿರ್ಮಿಸುವುದಾಗಿತ್ತು. ಹಾಗೆ ವಿವೇಕ ಜಾಗರಣಗೊಂಡು ಜಗತ್ತಿನೊಂದಿಗಿನ ವ್ಯವಹಾರ ಅನುಭವಗಳಿಂದಲೇ ದೈನಂದಿನ ಜೀವನ ರೂಪಿಸಿಕೊಳ್ಳುತ್ತಾ ಬಂದವರು ನಾವು.
Related Articles
Advertisement
ಆದುದರಿಂದಲೇ, ಗುರು-ಶಿಷ್ಯ ಪರಂಪರೆ, ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಅವಕಾಶ, ಸಮಗ್ರ ಶಿಕ್ಷಣ ಹಾಗೂ ಪರಿಪೂರ್ಣ ವ್ಯಕ್ತಿತ್ವವನ್ನು ಬೆಳೆಸುವ ರೀತಿಯನ್ನು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳುವುದು ತೀರಾ ಅಗತ್ಯವಾಗಿದೆ. ವಿದ್ಯುನ್ಮಾನ ಮಾಧ್ಯಮಗಳ ಗೀಳು, ಮಾದಕ ವಸ್ತುಗಳ ಗೀಳು, ರೇಸಿಂಗ್ ವಾಹನಗಳ ಹುಚ್ಚು, ಭಯೋತ್ಪಾದಕತೆಯ ಬಗ್ಗೆ ಇನ್ನಿಲ್ಲದ ಆಕರ್ಷಣೆ, ಕ್ರಮಬದ್ಧವಾಗಿ ಶಿಥಿಲಗೊಳ್ಳುತ್ತಿರುವ ಕೌಟುಂಬಿಕ ವ್ಯವಸ್ಥೆ, ವಿದೇಶೀ ವಾಸದ ಆಕರ್ಷಣೆ ಇತ್ಯಾದಿ ಸಮಸ್ಯೆಗಳಿಗೆ ಸ್ವಲ್ಪವಾದರೂ ಪರಿಹಾರವನ್ನು ಸಮಕಾಲಿನ ಸಂದರ್ಭದಲ್ಲಿ ಅರಸಬೇಕಿದೆ.
ಮೂಲತಃ ಶಿಕ್ಷಣ-ಕಲಿಕೆಗಳೆರಡರ ಹಿಂದಿರುವ “ಮಗು’ ಮನಸ್ಸನ್ನು ನಾವು ಪ್ರತ್ಯೇಕಿಸಿಬಿಟ್ಟಿದ್ದೇವೆ. ಪರಿಣಾಮವೆಂದರೆ ನಾವಿಂದು ಕಲಿತಿದ್ದನ್ನು ಜೀವನಕ್ಕೆ ಉಪಯೋಗಿಸುವ ಬಗೆ ನಮಗೆ ಗೊತ್ತಿಲ್ಲ! ಹಾಗಿದ್ದರೆ ಇವೆರಡರ ನಡುವೆ ಕಳಚಿಕೊಂಡುಬಿಟ್ಟಿರುವ ಕೊಂಡಿ ಯನ್ನು ನಾವು ಮತ್ತೆ ಸರಿಯಾಗಿ ಸೇರಿಸುವುದು ಹೇಗೆ, ಅದು ಸಾಧ್ಯವೇ, ತಂತ್ರಜ್ಞಾನದ ಯುಗದಲ್ಲಿ ಶಿಕ್ಷಣದ ಪರಿಕಲ್ಪನೆಯನ್ನು ನಾವು ಗ್ರಹಿಸಬೇಕಾದ ರೀತಿ ಯಾವುದು, ಪೋಷಕರು-ಶಿಕ್ಷಕರು ಮತ್ತು ಪ್ರಾಥಮಿಕ ಹಂತದಲ್ಲಿಯೇ ಈ “ಕೊಂಡಿ ಹಾಕುವ ಪ್ರಕ್ರಿಯೆ’ಯನ್ನು ಕರಗತ ಮಾಡಿಕೊಳ್ಳಬೇಕಾದ ಮಕ್ಕಳು ಇವರೆಲ್ಲರೂ ಸೇರಿ ಯಾವ ಉಪಾಯಗಳನ್ನು ಅಥವಾ ಹಾಗೆ ಮಾಡಲು ಪ್ರಯೋಗಗಳನ್ನು ಸ್ವತಃ ಮಾಡಬಹುದು ಈ ಎಲ್ಲ ಪ್ರಶ್ನೆಗಳನ್ನು ಪ್ರಸ್ತುತ ಕೇಳಿಕೊಳ್ಳಬೇಕಿದೆ.
ಭಾರತದಂತಹ ದೊಡ್ಡ ದೇಶದಲ್ಲಿ ಈಗಿರುವ ಶಾಲಾಶಿಕ್ಷಣ ಕ್ರಮವನ್ನು ಪೂರ್ತಿಯಾಗಿ ಏಕಾಏಕಿ ಬದಲಿಸುವುದು ಸುಲಭವಂತೂ ಅಲ್ಲ. ಅದರ ಬದಲು ನಮ್ಮ ಮನಸ್ಸಿನ ಧೋರಣೆಗಳನ್ನು ಕಿಂಚಿತ್ ಬದಲಿಸಿಕೊಂಡರೆ, ಮಕ್ಕಳಿಗೆ ಕಲಿಸುವ ಕ್ರಮಗಳಲ್ಲಿ ಕೆಲವು ಸುಲಭ ತಂತ್ರಗಳನ್ನು ಅಳವಡಿಸಿಕೊಂಡರೆ ನಮ್ಮ ಮಕ್ಕಳ ಜೀವನ ದಾರಿ ಸುಗಮ ಎನಿಸುತ್ತದೆ.
ಅತ್ಯುತ್ತಮ ಶಾಲೆಗಳು ಕೂಡ ಮಕ್ಕಳು ಭವಿಷ್ಯದಲ್ಲಿ ಉನ್ನತ ಕಲಿಕೆ, ಉನ್ನತ ಹುದ್ದೆಗೇರಬೇಕೆಂದರೆ ಇಂತಿಷ್ಟು ವಿಷಯಗಳನ್ನು ಕಲಿಯಲೇಬೇಕು ಎಂದು ಪಟ್ಟುಹಿಡಿದು ಕಲಿಸುವ ಪ್ರಕ್ರಿಯೆಯಲ್ಲಿ ತೊಡಗಿರುವುದು, ಪೋಷಕರೂ ಅದನ್ನೇ ಪರಮಪ್ರಸಾದವೆಂಬಂತೆ ಸ್ವೀಕರಿಸುತ್ತಿರುವುದು, ಮಕ್ಕಳನ್ನು ಕಲಿಕೆಯಿಂದಲೇ ವಿಮುಖರಾಗುವಂತೆ ಮಾಡುತ್ತಿದೆ. ಸರಕಾರ, ಶಿಕ್ಷಣ ಸಂಸ್ಥೆಗಳು, ಸಾರ್ವಜನಿಕ ಏಜೆನ್ಸಿಗಳು ಸಂತಸ ಕಲಿಕೆಯ ಮಂತ್ರ ಪಠಿಸುತ್ತಿವೆಯೇ ವಿನಾ ಕಲಿಸುವುದು ಹೇಗೆಂದು ತಿಳಿಯದೇ ಪರದಾಡುತ್ತಿವೆ. ನಾಳೆಯ ಜಗತ್ತು ಹೇಗಿರುತ್ತದೆ, ಹೇಗೆ ನಾವು ಅದಕ್ಕೆ ಹೊಂದಿಕೊಳ್ಳಬೇಕು ಎಂಬುದನ್ನು ಕಲಿಸಿಕೊಡುವಲ್ಲಿ ಸೋಲುತ್ತಿವೆ. ನಾಳೆಯ ಸಮಸ್ಯೆಗಳಿಗೆ ಈಗಲೇ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಶಿಕ್ಷಣ ಪ್ರಕ್ರಿಯೆಯೇ ವ್ಯರ್ಥ ಕಾಲಹರಣ ಎನಿಸಿಬಿಡುತ್ತದೆ. ಪಠ್ಯಕ್ರಮದಲ್ಲಿ ಇರುವಷ್ಟನ್ನು ಮಾತ್ರ ಗಿಣಿಪಾಠ ಒಪ್ಪಿಸಿ, ಅಂಕಗಳಿಸಿ, ಭೇಷ್ ಅನ್ನಿಸಿಕೊಳ್ಳಲು ತುದಿಗಾಲಲ್ಲಿರುವವರ ಕಲಿಕೆ ಯಾವುದಕ್ಕೂ ಸಲ್ಲ ಎಂಬುದು ಈಗ ಅರ್ಥವಾಗಿದೆ.
ಸಮಾಜಕ್ಕೆ ಬೇಕಿರುವುದು ವಿಕಾಸವೇ ಹೊರತು ಕ್ರಾಂತಿಯಲ್ಲ. ಸದಾ ವಿಕಾಸವನ್ನು ಉಂಟುಮಾಡುವ ಶಿಕ್ಷಣದ ಆವಶ್ಯಕತೆ, ಅನಿವಾರ್ಯತೆ ಇಂದು ನಮ್ಮ ಕಣ್ಣ ಮುಂದಿದೆ. ಶಿಕ್ಷಣ ಎಂದರೆ ಮನುಷ್ಯನ ಜ್ಞಾನಾತ್ಮಕ, ಭಾವನಾತ್ಮಕ, ಕ್ರಿಯಾತ್ಮಕ ಸಂಸ್ಕಾರಗಳ ಸಮನ್ವಯತೆ ಮತ್ತು ವಿಕಾಸಗೊಳಿಸುವಿಕೆಯೇ ಆಗಿದೆ. ಮನುಷ್ಯನ ವ್ಯವಹಾರದಲ್ಲಿ ಪರಿವರ್ತನೆಗಳನ್ನು ತರುವುದು, ಜ್ಞಾನದಿಂದ ಇಚ್ಛೆಯ ಜಾಗೃತಿ, ಆ ಮೂಲಕ ಮನುಷ್ಯನನ್ನು ಕ್ರಿಯಾಶೀಲನನ್ನಾಗಿಸುವುದು ಅಂದರೆ ವ್ಯವಹಾರಕ್ಕೆ ಇಳಿಸುವುದು, ಪ್ರೀತಿಯಲ್ಲಿ ಪರಿವರ್ತನೆಯನ್ನು ತರುವುದೇ ಕಲಿಕೆ ಎನ್ನಬಹುದು. ಕಲಿಯುವುದು ಮತ್ತು ಕಲಿಸುವುದೇ ನಿಜವಾದ ಶಿಕ್ಷಣ. ಇಂತಹ ಶಿಕ್ಷಣದ ಪ್ರಕ್ರಿಯೆಯಲ್ಲಿ ಆಧಾರಬಿಂದುವಾಗಿ ಗುರುತಿಸಲ್ಪಡುವ ಮಗು, ಮಗು ಕಲಿಯಬೇಕಾದ ವಿಷಯ ವಸ್ತು ಹಾಗೂ ಕಲಿಕೆಯಲ್ಲಿ ಸಹಾಯವನ್ನು ಮಾಡುವಂತಹ ಶಿಕ್ಷಣ ಎಲ್ಲದರ ಬಗೆಗೂ ಗಮನ ಅಗತ್ಯ.
ಮಗು ಹುಟ್ಟಿನಿಂದಲೇ ಜ್ಞಾನಿಯಾಗಿರುವುದಿಲ್ಲ. ಅದಕ್ಕೆ ಮಾರ್ಗದರ್ಶನದ ಆವಶ್ಯಕತೆ ಇದೆ. ಸೂಕ್ತ ವಾತಾವರಣದ ಮೂಲಕವೇ ಜ್ಞಾನವು ಪ್ರಕಟವಾಗುತ್ತದೆ ಅಥವಾ ವಿಕಾಸವನ್ನು ಹೊಂದುತ್ತದೆ. ಈ ವಿಕಾಸವನ್ನು ಕೇವಲ ಶಿಕ್ಷಕನಿಂದ ಮಾಡಲು ಸಾಧ್ಯವಿಲ್ಲ. ಒಂದು ಗಿಡವು ತನ್ನಿಂದ ತಾನೇ ಬೆಳೆಯುತ್ತದೆ. ನಾವು ಅದಕ್ಕೆ ಕೇವಲ ನೀರು, ಗೊಬ್ಬರ, ಮಣ್ಣು ಇತ್ಯಾದಿಗಳನ್ನು ಒದಗಿಸಬಹುದು ವಿನಾ ಅದನ್ನು ಬೆಳೆಸಲು ಸಾಧ್ಯ ವಾಗುವುದಿಲ್ಲ. ಆ ಗಿಡಕ್ಕೆ ಬೇಕಾದ ಭೂಮಿಯನ್ನು ಅಗೆದು ಮಣ್ಣನ್ನು ಹದ ಮಾಡಿಕೊಡಬಹುದು, ಗಿಡಕ್ಕೆ ಸೂರ್ಯನ ಬೆಳಕು, ಗಾಳಿ ಇವುಗಳು ದೊರೆಯುವಂತೆ ವ್ಯವಸ್ಥೆಯನ್ನು ಮಾಡಬಹುದು, ಅದರ ಸುರಕ್ಷೆಗಾಗಿ ಸುತ್ತಲೂ ಬೇಲಿಯನ್ನು ಹಾಕಬಹುದು. ಆದರೆ ಬೆಳೆಯ ಬೇಕಾಗಿರುವುದು ಆ ಗಿಡವೇ ತಾನೇ? ಅದರಂತೆ ಒಬ್ಬ ಶಿಕ್ಷಕನು ಮಗುವಿಗೆ ಓದಿಸಲು, ಕಲಿಸಲು ಸಾಧ್ಯವಿಲ್ಲ. ಓದುವುದೇ ಇರಲಿ ಅಥವಾ ಕಲಿಯುವುದೇ ಇರಲಿ ಮಗು ಪ್ರಯತ್ನವನ್ನು ಮಾಡಬೇಕಾಗಿದೆ. ಶಿಕ್ಷಕನು ಕೇವಲ ಮಗುವಿಗೆ ಸಹಾಯಕನಾಗಿರುತ್ತಾನೆಯೇ ಹೊರತು ಬೇರೇನೂ ಅಲ್ಲ. ಆ ಮೂಲಕ ಮಗುವಿನ ಬೆಳವಣಿಗೆಗೆ ಸೂಕ್ತ ಅವಕಾಶ ಮತ್ತು ವಾತಾವರಣವನ್ನು ಶಿಕ್ಷಕನಾದವನು ನಿರ್ಮಿಸಿ ಕೊಡುತ್ತಾನೆ.
ಒಟ್ಟಿನಲ್ಲಿ, ಶಿಕ್ಷಣ ಎಂದರೆ ಚಾರಿತ್ರ್ಯ ನಿರ್ಮಾಣದ ವಿಚಾರಗಳ ಮೈಗೂಡುವಿಕೆ; ಅದು ಮೆದುಳಿನಲ್ಲಿ ತುರುಕಲ್ಪಟ್ಟ ಸಮಾಚಾರಗಳ ಮೊತ್ತವಲ್ಲ. ಶಿಕ್ಷಣ ಎಂದರೆ ಅರಿವು. ಮಗು ತನ್ನ ಪರಿಸರದ ಬಗ್ಗೆ, ಇಡೀ ಜಗತ್ತಿನ ಬಗ್ಗೆ ಅರಿವಿನಾಚೆಯ ಅನೇಕ ಸಂಗತಿಗಳನ್ನು, ಅಂಶಗಳನ್ನು ತನ್ನ ಅರಿವಿನ ಪರಿಧಿಯೊಳಗೆ ತಂದುಕೊಳ್ಳುವ ಪ್ರಕ್ರಿಯೆ. ಪ್ರಸ್ತುತ, ದೇಶದ ಯುವ ಜನರನ್ನು ಪಶುತ್ವ ದಿಂದ ಮಾನವತ್ವದ ಕಡೆಗೂ, ಮಾನವತ್ವದಿಂದ ದೇವತ್ವದ ಕಡೆಗೂ ಒಯ್ಯುವ ಶಿಕ್ಷಣವು ಮಾತ್ರ ನಾವಿಂದು ಎದುರಿಸುತ್ತಿರುವ ನೂರಾರು ಸಮಸ್ಯೆಗಳಿಗೆ ಉತ್ತರವಾಗಬಲ್ಲದು.
ಡಾ| ಮೈತ್ರಿ ಭಟ್, ವಿಟ್ಲ