Advertisement

ಸಂಶೋಧನೆಗೆ ಒತ್ತು ನೀಡುವ ಶಿಕ್ಷಣ: ಸಚಿವ ಪೋಖ್ರಿಯಾಲ್‌

02:24 AM Feb 26, 2020 | mahesh |

ಸುರತ್ಕಲ್‌: ದೇಶದಲ್ಲಿ ಸಂಶೋಧನೆಗೆ ಒತ್ತು ನೀಡುವಂತಹ ನೂತನ ಶಿಕ್ಷಣ ವ್ಯವಸ್ಥೆ ಜಾರಿಯಾಗಲಿದ್ದು ಇದರಿಂದ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಲಿಕೆಗೆ ಉತ್ತೇಜನ ಲಭಿಸಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಡಾ| ರಮೇಶ್‌ ಪೋಖ್ರಿಯಾಲ್‌ ನಿಶಾಂತ್‌ ಹೇಳಿದರು.

Advertisement

ಅಂತಾರಾಷ್ಟ್ರೀಯ ಗುಣಮಟ್ಟದ ಸಂಶೋಧನಾ ಫಲಿತಾಂಶಗಳನ್ನು ನೀಡುವ ಅತ್ಯಾಧುನಿಕ ಉಪ
ಕರಣಗಳುಳ್ಳ ಏಕಕಿಂಡಿ ವ್ಯವಸ್ಥೆಯ ಸಂಶೋಧನಾ ಘಟಕವನ್ನು (ಸೆಂಟ್ರಲ್‌ ರಿಸರ್ಚ್‌ ಫೆಸಿಲಿಟಿ) ಎನ್‌ಐಟಿಕೆಯಲ್ಲಿ ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು. ಕಟ್ಟಡ ನಿರ್ಮಾಣಕ್ಕೆ ಎನ್‌ಐಟಿಕೆ ಅನುದಾನದ ಬೇಡಿಕೆಯಿಟ್ಟಿದ್ದು 48 ಕೋಟಿ ರೂ. ಬಿಡುಗಡೆಗೆ ಕ್ರಮ ಕೈಗೊಳ್ಳಲಾಗು ವುದು ಎಂದರು.

ಕೇಂದ್ರ ಸರಕಾರ ಸಂಶೋಧನೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ನೂತನ ಶಿಕ್ಷಣ ನೀತಿಯೂ ಜಾರಿಯಾಗುತ್ತಿದೆ. ಜಗತ್ತಿನೆಲ್ಲೆಡೆಯಿಂದ ಭಾರತಕ್ಕೆ ಬಂದು ಕಲಿಯುವವರ ಸಂಖ್ಯೆ ಹೆಚ್ಚುತ್ತಿದೆ. ಪ್ರೊಫೆಸರ್‌ಗಳು ಕೇವಲ ವೇತನಕ್ಕೆ ಕೆಲಸ ಮಾಡುತ್ತಿದ್ದೇವೆ ಎಂದೆಣಿಸದೆ ಯುವ ಉದ್ಯಮಿಗಳನ್ನು ತಯಾರಿಸುವ ಗುರಿಯನ್ನಿಟ್ಟುಕೊಂಡು ಮುಂದುವರಿಯಬೇಕು ಎಂದು ತಿಳಿಸಿದರು.

ದೂರದೃಷ್ಟಿ ಅಗತ್ಯ
ಯುವ ಜನಾಂಗ ನೌಕರಿಯನ್ನೇ ನಂಬಿ ಕೂರದೆ ನೌಕರಿ ನೀಡುವ ಮಟ್ಟಕ್ಕೆ ಬೆಳೆಯಬೇಕು. ಸೂಕ್ತ
ದೂರದೃಷ್ಟಿ ಇಲ್ಲದಿದ್ದರೆ ಇನ್ನೊಬ್ಬರಿಗೆ ದಾರಿ ತೋರಲು ಸಾಧ್ಯವಾಗದು. ಆಲೋಚನೆಯಷ್ಟೇ ಇದ್ದರೆ ಸಾಲದು, ಆ ನಿಟ್ಟಿನಲ್ಲಿ ಕಾರ್ಯಯೋಜನೆ ಮುಖ್ಯ ಎಂದರು. ಇದೇ ಸಂದರ್ಭ ಸ್ವಚ್ಛ ಭಾರತ್‌, ಸ್ವಸ್ಥ ಭಾರತ್‌ ಹಾಗೂ ಶ್ರೇಷ್ಠ ಭಾರತ್‌ ಪರಿಕಲ್ಪನೆಯಡಿ ಸರಕಾರ ಮುನ್ನಡೆಯುತ್ತಿದ್ದು ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ನಿಸರ್ಗಕ್ಕೆ ಕೊಡುಗೆ ನೀಡುವಂತಾಗಬೇಕು ಎಂದು ಹೇಳಿದರು.

ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಪೂರಕ
ಎನ್‌ಐಟಿಕೆ ಆಡಳಿತ ಮಂಡಳಿಯ ಚೇರ್‌ಮನ್‌ ಪ್ರೊ| ಬಲವೀರ ರೆಡ್ಡಿ ಮಾತನಾಡಿ, ಎನ್‌ಐಟಿಕೆಯಲ್ಲಿ ಪ್ರತಿವರ್ಷ 150 ಸಂಶೋಧನಾ ವಿದ್ಯಾರ್ಥಿಗಳು ಸೇರ್ಪಡೆಯಾಗುತ್ತಿದ್ದಾರೆ. ಪ್ರಸ್ತುತ 700ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳು ಇದ್ದಾರೆ. ಸಂಶೋಧನೆಯಲ್ಲಿ ಅತ್ಯಾಧುನಿಕ ಉಪಕರಣಗಳ ಬಳಕೆಯಿಂದ ಸಂಶೋಧನಾ ಫಲಿತಾಂಶಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟ ಕಾಯ್ದುಕೊಳ್ಳಲು, ಜಗತ್ತಿನ ವಿವಿಧೆಡೆಯ ಸಂಶೋಧನೆಗಳೊಂದಿಗೆ ಪೈಪೋಟಿ ನಡೆಸಲು ಸಾಧ್ಯವಾಗಲಿದೆ. ಘಟಕದ ಉಪಕರಣಗಳು ಕೇವಲ ಎನ್‌ಐಟಿಕೆಗೆ ಮಾತ್ರ ಸೀಮಿತವಾಗಿಲ್ಲ. ಬೇರೆ ಕಾಲೇಜುಗಳ ತಾಂತ್ರಿಕ, ವಿಜ್ಞಾನ ಸಂಶೋಧನಾ ವಿದ್ಯಾರ್ಥಿಗಳು ಕೂಡ ಇದರ ಸದುಪಯೋಗ ಪಡೆದುಕೊಳ್ಳಬಹುದು. ಎನ್‌ಐಟಿಕೆಯಲ್ಲಿ ಕಲಿತ ಶೇ. 95ರಷ್ಟು ವಿದ್ಯಾರ್ಥಿಗಳು ಕ್ಯಾಂಪಸ್‌ ಸೆಲೆಕ್ಷನ್‌ ಮೂಲಕ ಉದ್ಯೋಗ ಪಡೆಯುತ್ತಿದ್ದಾರೆ. ಉಳಿದ ಶೇ. 5ರಷ್ಟು ಮಂದಿ ಮಾತ್ರ ಉನ್ನತ ಶಿಕ್ಷಣಕ್ಕೆ ತೆರಳುತ್ತಿದ್ದಾರೆ ಎಂದರು.

Advertisement

ಟೋಲ್‌ಗೇಟ್‌ ಸ್ಥಳಾಂತರಕ್ಕೆ ಮನವಿ
ಎನ್‌ಐಟಿಕೆ ನಿರ್ದೇಶಕ ಪ್ರೊ| ಉಮಾ ಮಹೇಶ್ವರ ರಾವ್‌ ಮಾತನಾಡಿ, ಸಂಸ್ಥೆಯ ಸಮೀಪದಲ್ಲೇ ಇರುವ ಟೋಲ್‌ಗೇಟಿನಿಂದಾಗಿ ವಿದ್ಯಾರ್ಥಿಗಳು, ಅದರಲ್ಲೂ ವಿದ್ಯಾರ್ಥಿನಿಯರ ಭದ್ರತೆಗೆ ತೊಡಕಾಗುತ್ತಿದೆ. ಆದ್ದರಿಂದ ಟೋಲ್‌ಗೇಟನ್ನು ಸ್ಥಳಾಂತರಿಸಬೇಕು ಎಂದರು. ಎನ್‌ಐಟಿಕೆಯಲ್ಲಿ ಪ್ರಸ್ತುತ ಇರುವ ಶಾಲೆಯನ್ನು ಕೇಂದ್ರೀಯ ವಿದ್ಯಾಲಯವನ್ನಾಗಿ ಮೇಲ್ದರ್ಜೆಗೆ ಏರಿಸಲು ಅನುದಾನದ ಆವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಎಚ್‌ಆರ್‌ಡಿ ಸಚಿವಾಲಯ ನೆರವು ಒದಗಿಸಬೇಕು ಎಂದು ಮನವಿ ಮಾಡಿದರು.
ಎನ್‌ಎಂಪಿಟಿ ಚೇರ್‌ಮನ್‌ ಎ.ವಿ. ರಮಣ್‌, ರಿಜಿಸ್ಟ್ರಾರ್‌ ರವೀಂದ್ರನಾಥ್‌, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಪ್ರೊ| ಜಗನ್ನಾಥ್‌ ನಾಯಕ್‌, ಪ್ರೊ| ಉದಯ್‌ ಭಟ್‌ ಹಾಜರಿದ್ದರು.

ಹೊಸ ಕಟ್ಟಡಕ್ಕೆ ಶಿಲಾನ್ಯಾಸ
ಸೆಂಟ್ರಲ್‌ ರಿಸರ್ಚ್‌ ಫೆಸಿಲಿಟಿ ಘಟಕವು ಪ್ರಸ್ತುತ ಹಳೆಯ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಲಿದ್ದು, 48 ಕೋಟಿ ರೂ. ವೆಚ್ಚದ ಹೊಸ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು. ವಿದ್ಯಾರ್ಥಿ-ವಿದ್ಯಾರ್ಥಿನಿಯರ ಹಾಸ್ಟೆಲ್‌ ಕಟ್ಟಡದ ಶಂಕುಸ್ಥಾಪನೆಯನ್ನೂ ಸಚಿವರು ನೆರವೇರಿಸಿದರು.
ಸುಮಾರು 200 ಕೋಟಿ ರೂ.ಗಳ ಅತ್ಯಾಧುನಿಕ ಸಂಶೋಧನಾ ಉಪಕರಣಗಳು ಬರಲಿದ್ದು ಪ್ರಥಮ ಹಂತದಲ್ಲಿ 80 ಕೋಟಿ ರೂ. ಮೌಲ್ಯದ ಉಪಕರಣಗಳು ಅಳವಡಿಕೆಯಾಗಿವೆ. ಇನ್ನೂ 45 ಉಪಕರಣಗಳನ್ನು ದೇಶ-ವಿದೇಶಗಳಿಂದ ತರಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಮೂರು ನಾಲ್ಕು ತಿಂಗಳೊಳಗೆ ಸಂಪೂರ್ಣ ಅನುಷ್ಠಾನವಾಗಲಿದೆ. ಮೆಕ್ಯಾನಿಕಲ್‌, ಸಿವಿಲ್‌ ಸಹಿತ ವಿವಿಧ ವಿಭಾಗದ ಸಂಶೋಧನೆಗಳಿಗೆ ಕೇಂದ್ರೀಯ ವ್ಯವಸ್ಥೆಯ ಘಟಕ ಇದಾಗಿರುವುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next