Advertisement

ಬದಲಾವಣೆಯನ್ನೇ ಭರವಸೆಯಾಗಿಸಿದ ಶಿಕ್ಷಣ

12:31 AM Oct 20, 2021 | Team Udayavani |

ಕೋವಿಡ್‌ ರಜೆಯ ಬಳಿಕ ಶಾಲಾ ತರಗತಿಗಳು ಪುನರಾರಂಭಗೊಂಡಿವೆ. ಮಕ್ಕಳಿಗೆ ಶಾಲೆಗಳಿಗೆ ತೆರಳುವ ಸಂಭ್ರಮವಾದರೆ ಶಿಕ್ಷಕರಿಗೆ ತಮ್ಮ ಶಿಷ್ಯರನ್ನು ನೋಡುವ ತವಕ. ಹಾಗೆಂದು ಈ ಹಿಂದಿನಂತೆ ಶಾಲೆಗಳಲ್ಲಿ ತರಗತಿಗಳನ್ನು ನಡೆಸುವುದು ಶಿಕ್ಷಕರಿಗೆ ತುಸು ತ್ರಾಸದಾಯಕವೇ. ಕೊರೊನಾ ಅವಧಿಯಲ್ಲಿ ಮಕ್ಕಳು ಆಧುನಿಕ ಶಿಕ್ಷಣ ವ್ಯವಸ್ಥೆಗೆ ತಮ್ಮನ್ನು ಒಗ್ಗಿಸಿಕೊಂಡಿದ್ದರು. ಇದೀಗ ಮತ್ತೆ ಭೌತಿಕ ತರಗತಿಗಳ ಬಗೆಗೆ ಮಕ್ಕಳಿಗೆ ಒಲವು ಮೂಡಿಸುವ ಕೆಲಸ ಶಿಕ್ಷಕರಿಂದಾಗಬೇಕಿದೆ. ಬದಲಾವಣೆಯ ಗಾಳಿಗೆ ಶಿಕ್ಷಕ ತನ್ನನ್ನು ತಾನು ಒಡ್ಡಿಕೊಳ್ಳಬೇಕಿರುವುದು ಅನಿವಾರ್ಯ. ಹೀಗಾದಲ್ಲಿ ಮಾತ್ರವೇ ಶಿಕ್ಷಣ ಕ್ಷೇತ್ರ ಹೊಸ ಮನ್ವಂತರಕ್ಕೆ ತೆರೆದುಕೊಳ್ಳಲು ಸಾಧ್ಯ.

Advertisement

ಬದಲಾವಣೆ ಅನಿವಾರ್ಯ ಎನ್ನುವಷ್ಟು ದೊಡ್ಡಪೆಟ್ಟು ಬಿದ್ದಾಗಷ್ಟೇ ಮನುಷ್ಯ ಬದಲಾಗಲು ಪ್ರಯತ್ನಿಸುತ್ತಾನೆ ಎಂಬುದಕ್ಕೆ ಉತ್ತಮ ಉದಾಹರಣೆ ಕೋವಿಡ್‌-19 ಸಾಂಕ್ರಾಮಿಕ ರೋಗ.

ಒಂದು ಸಾಂಕ್ರಾಮಿಕ ರೋಗದಿಂದ ಹಳಿತಪ್ಪಿದ್ದ ಶಿಕ್ಷಣ ವ್ಯವಸ್ಥೆ ಒಂದು ಹಂತಕ್ಕೆ ಬಂದು ನಿಂತಿದೆ ಎಂದರೆ ಅದಕ್ಕೆ ಕಾರಣ ಆನ್‌ಲೈನ್‌ ಶಿಕ್ಷಣ ವ್ಯವಸ್ಥೆ ಮತ್ತು ಶಿಕ್ಷಣ ಇಲಾಖೆಯ ವಿದ್ಯಾಗಮ ಯೋಜನೆ. ಏನೂ ಇಲ್ಲ ಎನ್ನುವುದಕ್ಕಿಂತ ಏನೋ ಇದೆ ಎಂಬ ಭಾವನೆ (ಕುತೂಹಲ/ಸಮಾಧಾನ ಯಾವುದೂ ಇರಬಹುದು) ಮೂಡಿಸುವಲ್ಲಿ ಈ ಯೋಜನೆಯ ಪಾತ್ರ ದೊಡ್ಡದು. ಆದರೀಗ ಅದನ್ನೆಲ್ಲ ಮೀರಿ ಮತ್ತೆ ಭೌತಿಕ ತರಗ ತಿಗಳು ಪ್ರಾರಂಭವಾಗಿವೆ. ಒಂದು ಹಂತ ದಲ್ಲಿ ಇದು ನೈಜ ಸವಾಲೆಂದರೂ ತಪ್ಪಾಗಲಾರದು.

ಶಿಕ್ಷಕರು, ಹೆತ್ತವರು, ವಿದ್ಯಾರ್ಥಿ ಗಳಾದಿಯಾಗಿ ಈಗ ಒಂದು ಹಂತ ವನ್ನು ದಾಟಿ ಬಂದಿದ್ದೇವೆ. ಈವ ರೆಗೆ ಮೊಬೈಲಿನ ಪರಿಣಾಮದ ಬಗ್ಗೆ, ಮಕ್ಕಳ ಮೇಲೆ ಅದರ ಪರಿಣಾಮದ ಬಗ್ಗೆ ಗಂಟೆಗಟ್ಟಲೆ ಮಾತನಾಡುತ್ತಿದ್ದ, ಪುಟಗಟ್ಟಲೆ ಬರೆಯುತ್ತಿದ್ದ ನಾವು ಮೊಬೈಲ್‌ ಇಲ್ಲದೇ ತರಗತಿಗಳು ಅಸಾಧ್ಯವೇ ಎಂಬ ಭಾವನೆಯನ್ನು ಪರೋಕ್ಷವಾಗಿ ಮೂಡಿಸಿಯಾಗಿದೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೆರಡು ಮೊಬೈಲಿನ ಮೂಲಕವೇ ನಡೆಯುತ್ತಿರುವುದು. ಅದನ್ನು ಬಿಟ್ಟು ಒಮ್ಮಿಂದಲೇ ಶಾಲೆಗೆ ಬಾ ಎಂದರೆ ಮೊಬೈಲ್‌ ಎಂಬ ಮಾಯಾಜಾಲದ ಒಳಗೆ ಹೊಕ್ಕು ಈ ಪ್ರಪಂ ಚವೆಲ್ಲ ಅದರಲ್ಲೇ, ಎಲ್ಲ ದೊರಕುವುದು ಅಲ್ಲೇ ಎಂಬ ಭ್ರಮೆಯಲ್ಲಿ ರುವ ಮಕ್ಕಳಿಗೆ ಅದರಿಂದ ಹೊರಗೆ ಬರಲು ಹೇಗೆ ಸಾಧ್ಯ?.

ಒಂದಂತೂ ಸತ್ಯ ಪ್ರಪಂಚದಲ್ಲಿ ಯಾವುದೂ ಶಾಶ್ವತವಲ್ಲ. ಹಾಗೆಯೇ ಯಾವ ಸಮಸ್ಯೆಗೂ ಪರಿಹಾರ ಇಲ್ಲ ಎಂಬುದಿಲ್ಲ. ಅದೇ ರೀತಿಯಲ್ಲಿ ಇಂದಿನ ಸ್ಥಿತಿ ಕೂಡ. ಈ ಸ್ಥಿತಿಯಿಂದ ಹೊರಬರಲು ಈ ಸವಾಲನ್ನು ಎದುರಿಸಲು ಶಿಕ್ಷಕರಿಗೆ ವಿವಿಧ ಯೋಜನೆ ಮತ್ತು ಯೋಚನೆಗಳಿರಬೇಕು. ಹೆತ್ತವರಿಗೆ ಕಾಯುವ ತಾಳ್ಮೆ ಬೇಕು. ಮಕ್ಕಳಿಗೆ ಆ ಜಾಲದಿಂದ ಹೊರಬರುವ ಮನಸ್ಸಿರಬೇಕು. ಆದರೆ ಇವೆಲ್ಲ ಸಾಧ್ಯವಾಗಲು ಶಿಕ್ಷಕರ ಯೋಜನೆ ಹೇಗಿರಬೇಕು?

Advertisement

ನಾವಿಲ್ಲಿ ನೆನಪಿಡಬೇಕಾದ ವಿಷಯವೆಂದರೆ ಔಪಚಾರಿಕ ಶಿಕ್ಷಣ ಎಂದರೆ ಬರೀ ಬೋಧನೆಯಲ್ಲ. ಇದು ಮಕ್ಕಳ ನಿರಂತರ ಕಲಿಕೆಗೆ ಸಹಾಯವಾಗುವಂತಿರಬೇಕು. ಕೋವಿಡ್‌ ಪೂರ್ವದಲ್ಲಿ ತರಗತಿ ಪಾಠ, ನೋಟ್ಸ್‌, ಆಟದ ಅವಧಿ ಇದ್ದರಷ್ಟೇ ಶಿಕ್ಷಣ ಎಂದೆನಿಸಿದ್ದ ಮಕ್ಕಳು ಈಗ ಪೂರ್ಣಪ್ರಮಾಣದಲ್ಲಿ ಮನೆಯಲ್ಲಿದ್ದು, ಮನೆ ವಾತಾವರಣ, ಊಟೋಪಚಾರ, ಲಘು ಕಲಿಕೆಯನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಒಮ್ಮೆಲೆ ಶಾಲೆಗೆ ಕರೆದು ವಿಷಯಾಧಾರಿತ ಬೋಧನೆ ಪ್ರಾರಂಭಿಸಿದರೆ ಮಾರನೇ ದಿನ ಮಕ್ಕಳು ಶಾಲೆಯತ್ತ ಬರದೇ ಇರಬಹುದು. ಅದಕ್ಕಾಗಿ ಶಿಕ್ಷಕರಾದವರು ವಿಭಿನ್ನ ವಿಧಾನಗಳ ಮೂಲಕ ಮಕ್ಕಳಲ್ಲಿ ಶಾಲೆ ಮತ್ತು ಪಾಠದ ಸೆಳೆತ ಹೆಚ್ಚಾಗುವಂತೆ ಪ್ರಯತ್ನಿಸಬೇಕಾಗಿದೆ.

ಭಾಷಾ ತರಗತಿಗಳಲ್ಲಿ ಹಾಡು, ಕಥೆ, ನೈಜ ಸನ್ನಿವೇಶಗಳನ್ನು ಶಿಕ್ಷಕರು ವಿವರಿಸಿ, ಅನಂತರ ಮಕ್ಕಳು ತಮ್ಮ ಅಭಿವ್ಯಕ್ತಿಯನ್ನು ಪ್ರಕಟಿಸಲು ಅವಕಾಶ ನೀಡಬೇಕು. ಮಕ್ಕಳ ಪಾಲಿಗೆ ಕಬ್ಬಿಣದ ಕಡಲೆಯಾಗಿರುವ ಗಣಿತ ಅವರ ದೈನಂದಿನ ಚಟುವಟಿಕೆಗಳ ಜತೆ ಸೇರಿ ಸಿಹಿಯಾದ ಮಿಠಾಯಿ ಆಗಬೇಕಾಗಿದೆ. ಪ್ರಯೋಗ ಎಂದರೆ ಪ್ರಮಾದವಾಗದೆ ಮನೋರಂಜನೆ ಎನಿಸಬೇಕಾಗಿದೆ. ಮಾದರಿಗಳ ತಯಾರಿ ಹೆಚ್ಚಾಗಬೇಕಾಗಿದೆ. ಸಮಾಜ ವಿಜ್ಞಾನ ಎಂಬುದು ನೀರಸ ವಿಷಯ ಎಂಬ ಭಾವನೆ ಹೋಗಿಸಲು ಸಮಾಜ ಶಿಕ್ಷಕರಿಂದ ಮಾತ್ರ ಸಾಧ್ಯ. ದೂರದ ಆಸ್ಟ್ರೇಲಿಯಾದ ಬಗ್ಗೆ ಹೇಳುವ ಮೊದಲು ರಾಜ್ಯ, ಜಿಲ್ಲೆ, ತಾಲೂಕು, ತನ್ನ ಗ್ರಾಮದ ಹೆಸರು ಮಕ್ಕಳಿಗೆ ನೆನಪಿದೆಯಾ ಎಂಬುದನ್ನು ಪರೀಕ್ಷಿಸಬೇಕಾಗಿದೆ.

ಇದನ್ನೂ ಓದಿ:ಬಾಂಗ್ಲಾ ಹಿಂದುಗಳ ರಕ್ಷಣೆಗೆ ಸಿಎಎ ಬೇಕು: ಕಾಂಗ್ರೆಸ್‌ ನಾಯಕ ಮಿಲಿಂದ್‌ ದೇವ್ರಾ!

ಇವುಗಳ ಇತಿಹಾಸದ ಬಗ್ಗೆ ಗೌರವ ಮೂಡಿಸಬೇಕಾಗಿದೆ. “ನಲಿಕಲಿ’ ತರಗತಿಯಲ್ಲಿ ಕಲಿಯಬೇಕಾದರೆ ವರ್ಣರಂಜಿತ ವರ್ಣಗಳು, ಕಲಾ ಚಿತ್ರಗಳು ಚೈತನ್ಯಭರಿತ ವಿವರಣೆಗಳು ಚಿತ್ತದಲ್ಲಿ ಅಚ್ಚಾಗಬೇಕಾಗಿದೆ. ಬಹುಶಃ ಇಲ್ಲಿ ಶಿಕ್ಷಕಿ ಮತ್ತೂಮ್ಮೆ ತಾಯಿ ಆಗಬೇಕಾಗಿದೆ. ಶಾಲೆ ತಾಯಿಯ ವಾತ್ಸಲ್ಯದ ಮಡಿಲಾಗಬೇಕಾಗಿದೆ. ಈ ಎಲ್ಲ ವಿಧಾನದ ಮೂಲಕ ಮಕ್ಕಳನ್ನು ನಿಧಾನವಾಗಿ ಮೊದಲಿನ ದಾರಿಗೆ ಕರೆತರಲು ಶಿಕ್ಷಕರಿಂದ ಮಾತ್ರ ಸಾಧ್ಯ. ಆದರೆ ಇಲ್ಲಿ ಶಿಕ್ಷಕರಿಗೆ ತಾಳ್ಮೆ, ಯೋಜನೆ ಎಲ್ಲ ಸವಾಲುಗಳನ್ನು ಎದುರಿಸುತ್ತೇನೆ ಎನ್ನುವ ಉತ್ಸಾಹ ಇರಬೇಕು. ಹಾಗೆಂದು ಹೆತ್ತವರ ಪಾತ್ರ ಇಲ್ಲವೆಂದಲ್ಲ. ಬರೀ ಬಾಯಿಪಾಠ ಅಕ್ಷರ ಕಲಿಕೆ, ಪುಟಗಟ್ಟಲೆ ಬರೆಯುವುದು, ಕ್ಷಣಾರ್ಧದಲ್ಲಿ ಲೆಕ್ಕ ಬಿಡಿಸುವುದಷ್ಟೇ ಶಿಕ್ಷಣವಲ್ಲ. ಶಾಲೆಯ ಹೊರತಾಗಿಯೂ ಸಮಾಜದ ನಡುವೆ ಕಲಿಯುವ ಸಹಶಿಕ್ಷಣದ ಅವಶ್ಯವೂ ಇದೆ.

ಸೃಜನಶೀಲತೆ, ಕ್ರಿಯಾಶೀಲತೆ, ಮಾನವೀಯತೆ ಇವೆಲ್ಲವಿದ್ದರೆ ಒಬ್ಬ ಮನುಷ್ಯ. ಇದನ್ನು ಮಕ್ಕಳಲ್ಲಿ ಬೆಳೆಸುವುದಕ್ಕೆ ಶಿಕ್ಷಕರು ಪ್ರಯತ್ನಿಸುತ್ತಿದ್ದರೆ ಅದಕ್ಕೆ ಹೆತ್ತವರು ನೆರವಾಗಬೇಕು. ಪಕ್ಷಿಗಳಂತೆ ಸ್ವತ್ಛಂದವಾಗಿ ಆಟವಾಡುತ್ತಾ ಇರುವ ಮಕ್ಕಳಿಗೂ ಕೂಡ ಶಿಕ್ಷಣ ಅಷ್ಟೇ ಮುಖ್ಯ ಮತ್ತು ಆಕರ್ಷಕ ಎಂಬ ಅರಿವು ಮೂಡಿಸಬೇಕು. ನಿಸರ್ಗದೊಡನೆ ಈತನಕ ಇದ್ದ ಮಕ್ಕಳ ಚಿತ್ತದೊಳಗೆ ಶಾಲೆಯ ನಾಲ್ಕು ಗೋಡೆಯ ಮಧ್ಯೆ ಸಹ ವಿಭಿನ್ನ ಕಲ್ಪನೆಯನ್ನು ಮೂಡಿಸಿಕೊಳ್ಳಲು ಸಾಧ್ಯ ಎಂಬ ಚಿಂತನೆ ತುಂಬಬೇಕಾಗಿದೆ.

ಮನೆಯಂಗಳದಲ್ಲಿ ಮಲಗಿ ಬಾನನ್ನು ನೋಡಿ ನಗುತ್ತಿದ್ದ ವಿದ್ಯಾರ್ಥಿ ಬಾಹ್ಯಾಕಾಶ ಕೂಡ ಅಷ್ಟೇ ಆಕರ್ಷಕ ಎಂಬು ದನ್ನು ಯೋಚಿಸುವಂತೆ ಮಾಡಬೇಕಾಗಿದೆ. ಮೊಬೈಲ್‌ನಲ್ಲಿ ಯೋಧರಾಗುವ ಬದಲು ದೇಶರಕ್ಷಕರ ಬಗೆಗೆ ನಿಜ ಜೀವನದಲ್ಲಿ ಗೌರವ ನೀಡುವ ಕೆಲಸವಾಗಬೇಕಿದೆ. ಇವೆಲ್ಲ ಅವರಿಂದ ಮಾತ್ರ ಸಾಧ್ಯ. ಎಂಥ ಪರಿಸ್ಥಿತಿ ಬಂದರೂ ಸವಾಲುಗಳು ಎದುರಾದರೂ ಪರಿಸ್ಥಿತಿಗೆ ತಕ್ಕಂತೆ ಪರಿಹಾರ ಒದಗಿಸುವವರು ಶಿಕ್ಷಕರು. ಅವರು ಮನಸ್ಸು ಮಾಡಿದರೆ ಯಾವುದೂ ಸಮಸ್ಯೆಯಲ್ಲ. ಮನಸ್ಸು ಮಾಡಬೇಕಾಗಿದೆ ಅದೂ ಮನಸ್ಸಾರೆ. ಆಗಷ್ಟೇ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮನ್ವಂತರ ಸಾಧ್ಯ.

-ಶುಭಾ ಕೆ., ಶಿಕ್ಷಕಿ (ಜಿ.ಪಿ.ಟಿ.)
ಪೆರೋಡಿತ್ತಾಯಕಟ್ಟೆ, ಬೆಳ್ತಂಗಡಿ

Advertisement

Udayavani is now on Telegram. Click here to join our channel and stay updated with the latest news.

Next