Advertisement

ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಇಳಿಕೆ ಅಪಾಯಕಾರಿ

11:31 PM May 26, 2022 | Team Udayavani |

ಇಡೀ ಜಗತ್ತಿಗೆ ಕೊರೊನಾ ತಂದಿಟ್ಟಿರುವ ಸಮಸ್ಯೆಗಳು ಅಷ್ಟಿಷ್ಟಲ್ಲ. ವಿಶ್ವದ ಆರೋಗ್ಯ ವ್ಯವಸ್ಥೆಯ ಮೇಲೆ ತನ್ನ ಕೆಟ್ಟ ಪ್ರಭಾವ ಬೀರಿರುವ ಈ ಕೊರೊನಾ, ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಎಲ್ಲರ ಭವಿಷ್ಯಕ್ಕೆ ಮಾರಕವಾಗಿದೆ. ಅದರಲ್ಲೂ ಕೊರೊನಾ ಲಾಕ್‌ಡೌನ್‌ ಅವಧಿಯಲ್ಲಂತೂ ಜನಜೀವನ ತೀರಾ ಅಸ್ತವ್ಯಸ್ತವಾಗಿದ್ದುದು ಇಡೀ ಜಗತ್ತಿಗೇ ಗೊತ್ತಿರುವ ಸತ್ಯ.

Advertisement

2020ರ ಆರಂಭದಲ್ಲಿ ಶುರುವಾದ ಈ ಕೊರೊನಾ ಕಾಟ ಇನ್ನೂ ಮುಗಿದಿಲ್ಲ. ಇದರ ನಡುವೆಯೇ ಪ್ರಪಂಚದಾದ್ಯಂತ ಶಾಲಾ-ಕಾಲೇಜುಗಳು ಆರಂಭವಾಗುತ್ತಿವೆ. ಸರಿಯಾಗಿ ಹೇಳಬೇಕು ಎಂದರೆ ಈ ವರ್ಷವೇ ಶೈಕ್ಷಣಿಕ ವರ್ಷಾರಂಭದಲ್ಲೇ ತರಗತಿಗಳು ಆರಂಭವಾಗುತ್ತಿರುವುದು. ಈ ವರ್ಷವಾದರೂ ಕೊರೊನಾ ಕಾಡದೇ ತರಗತಿಯಲ್ಲೇ ಮಕ್ಕಳು ಕಲಿಯಲಿ ಎಂಬುದು ಎಲ್ಲರ ಆಶಾಭಾವ. ಈ ಬೆಳವಣಿಗೆಗಳ ಮಧ್ಯೆ ಕೇಂದ್ರ ಶಿಕ್ಷಣ ಸಚಿವಾಲಯ ನಡೆಸಿರುವ ಮಕ್ಕಳ ಸಾಧನಾ ಸಮೀಕ್ಷೆ 2021 ಕೆಲವೊಂದು ಆಘಾತಕಾರಿ ಅಂಶವನ್ನು ಹೊರಹಾಕಿದೆ. ಇದರ ಪ್ರಕಾರ, ಉನ್ನತ ತರಗತಿಗಳಲ್ಲಿ ಇರುವ ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಕಡಿಮೆಯಾಗಿದೆ. ಇದ್ದುದರಲ್ಲಿ ಪ್ರಾಥಮಿಕ ಶಾಲೆಯ ಮಕ್ಕಳೇ ಪರವಾಗಿಲ್ಲ ಎಂಬ ಅಂಶ ಇದರಲ್ಲಿ ಗೊತ್ತಾಗಿದೆ.

ಅಂದ ಹಾಗೆ ಕೇಂದ್ರ ಸರಕಾರ 2017ರಲ್ಲಿ ಇಂಥ ಒಂದು ಸಮೀಕ್ಷೆ ನಡೆಸಿತ್ತು. ಆಗ ಮಕ್ಕಳ ಕಲಿಕಾ ಸಾಮರ್ಥ್ಯದಿಂದ ಹಿಡಿದು ಎಲ್ಲ ಸಂಗತಿಗಳು ಉತ್ತಮವಾಗಿಯೇ ಇದ್ದವು. ಸರಿಯಾಗಿ ತರಗತಿಗಳು ನಡೆಯುತ್ತಿದ್ದವು, ಶಿಕ್ಷಕರು ಹೇಳಿಕೊಟ್ಟ ಪಾಠಗಳನ್ನೂ ಮಕ್ಕಳು ಕಲಿಯುತ್ತಿದ್ದರು. ಆದರೆ 2021ರ ಸಮೀಕ್ಷೆ ಹೆಚ್ಚು ಕಡಿಮೆ ಈ ಎಲ್ಲ ಸಂಗತಿಗಳನ್ನು ಉಲ್ಟಾ ಮಾಡಿದೆ.  ಕೊರೊನಾ ಲಾಕ್‌ಡೌನ್‌ ಅವಧಿಯಲ್ಲಿ ಹೆಚ್ಚು ಸುದ್ದಿಯಾಗಿದ್ದ ಅಂಶವೆಂದರೆ, ಗ್ರಾಮೀಣ ಮಕ್ಕಳಿಗೆ ಆನ್‌ಲೈನ್‌ ತರಗತಿ ಕಲಿಯುವಂಥ ವ್ಯವಸ್ಥೆ ಇದೆಯೇ ಎಂಬುದು. ಇದಕ್ಕೆ ಮಿಶ್ರ ಉತ್ತರಗಳೂ ಬಂದಿದ್ದವು. ಆದರೆ ಈ ಸಮೀಕ್ಷೆ ಪ್ರಕಾರ, ದೇಶದ ಶೇ.24ರಷ್ಟು ಮಕ್ಕಳಿಗೆ ಆನ್‌ಲೈನ್‌ ಪಾಠ ಕಲಿಯಲು ಬೇಕಾದ ಯಾವುದೇ ಡಿಜಿಟಲ್‌ ಸಾಧನಗಳು ಸಿಕ್ಕಿರಲೇ ಇಲ್ಲ. ಹಾಗೆಯೇ ಶೇ.38ರಷ್ಟು ಮಕ್ಕಳಿಗೆ ಮನೆಯಲ್ಲೇ ಕುಳಿತು ಆನ್‌ಲೈನ್‌ ಮೂಲಕ ಕಲಿಯಲೂ ಸಾಧ್ಯವಾಗಿಲ್ಲ. ಜತೆಗೆ, ಶೇ. 80ರಷ್ಟು ಮಕ್ಕಳು ಆನ್‌ಲೈನ್‌ ತರಗತಿಗಿಂತ ಶಾಲೆಯೇ ಕಲಿಕೆಗೆ ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಸಮೀಕ್ಷೆಯಲ್ಲಿ ಭಾಷೆ, ಗಣಿತ, ವಿಜ್ಞಾನ, ಪರಿಸರ ವಿಜ್ಞಾನ ಮತ್ತು ಸಮಾಜಶಾಸ್ತ್ರಗಳ ಕುರಿತಂತೆ ಮಾಡಲಾಗಿತ್ತು. ವಿಶೇಷವೆಂದರೆ ನಗರ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಮಕ್ಕಳ ಕಲಿಕೆ ಚೆನ್ನಾಗಿರುವುದು ಕೊಂಚ ಭರವಸೆ ಮೂಡುವ ಅಂಶ.

ಇವೆಲ್ಲದಕ್ಕಿಂತ ಮಿಗಿಲಾಗಿ, ಕೊರೊನಾ ಆರಂಭದಿಂದ ಹಿಡಿದು ಇಲ್ಲಿವರೆಗೆ ಮಕ್ಕಳು ಸರಿಯಾಗಿ ಕಲಿತಿಲ್ಲ ಎಂಬುದು ಕೇಂದ್ರದ ಈ ಸಮೀಕ್ಷೆ ವರದಿಯೇ ಹೇಳುತ್ತಿದೆ. ಈ ಶೈಕ್ಷಣಿಕ ವರ್ಷವೂ ಸೇರಿ ಮುಂದಿನ ದಿನಗಳಲ್ಲಿ ಮಕ್ಕಳ ಮೇಲೆ ಹೆಚ್ಚಿನ ನಿಗಾ ವಹಿಸಿ ಅವರ ಕಲಿಕಾ ಸಾಮರ್ಥ್ಯ ಹೆಚ್ಚುವಂಥ ಮಾಡುವುದು ಸರಕಾರ ಮತ್ತು ಶಾಲೆಗಳ ಜವಾಬ್ದಾರಿ. ಹಾಗೆಯೇ ಈ ವಿಚಾರದಲ್ಲಿ ಪೋಷಕರೂ ಶಾಲೆಗಳ ಜತೆ ಕೈಜೋಡಿಸಲೇಬೇಕಾಗುತ್ತದೆ. ಈಗ ಉಂಟಾಗಿರುವ ಕಲಿಕಾ ಅಂತರ ಮುಂದಿನ ದಿನಗಳಲ್ಲಿ ಹೆಚ್ಚಿನ ಸಮಸ್ಯೆಯಾಗಿ ಕಾಡುವುದು ನಿಶ್ಚಿತ. ಇದಾಗದಂತೆ ನೋಡಿಕೊಳ್ಳಬೇಕಾದದ್ದು ಎಲ್ಲರ ಕರ್ತವ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next