Advertisement

ಬದಲಾವಣೆಯ ನಿರೀಕ್ಷೆಯಲ್ಲಿ…ಶಿಕ್ಷಣ ವ್ಯವಸ್ಥೆ

04:31 PM Aug 07, 2022 | Team Udayavani |

ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿಯ ಮೂಲಕ ಮುಂದಾಗಿದೆ. ಆದರೆ ನಮ್ಮ ಪೂರ್ವಜರ ಗುರುಕುಲ ಪದ್ಧತಿ ಅತೀ ಸೂಕ್ತ ಮತ್ತು ಅದೇ ನಿಜವಾದ ಶಿಕ್ಷಣ ಎನ್ನುವುದು ಹಲವರ ವಾದ. ಹಾಗಿದ್ದರೇ ಜಗತ್ತಿನ ಇತರ ರಾಷ್ಟ್ರಗಳ ಶಿಕ್ಷಣ ವ್ಯವಸ್ಥೆ ಉತ್ತಮವಾಗಿದೆಯೇ ? ಯಾವ ದೇಶ ಅತ್ಯುನ್ನತ ಶಿಕ್ಷಣ ವ್ಯವಸ್ಥೆಗಾಗಿ ಹೆಸರು ಮಾಡಿದೆ ಎಂದು ಕೇಳಿದರೆ ಹಲವರ ಉತ್ತರ ಅದು ನಮ್ಮ ಭಾರತ. ಕಾರಣ ಒಂದು ದೇಶಾಭಿಮಾನ ಮತ್ತು ಈ ಹಿಂದೆ ಪೂರ್ವಜರು ಪಡೆದಿದ್ದ ಶಿಕ್ಷಣಗಳ ಬಗೆಗೆ ಕೇಳಿದ ಅರಿವು. ವಿಶ್ವ ಗುರು ಎಂದೆನಿಸಿಕೊಂಡಿದೆ ಎಂದು ನಾವು ಹೆಮ್ಮೆ ಪಡುವ ಕೀರ್ತಿಯಲ್ಲಿ ನಮ್ಮ ಪುರಾಣ, ಇತಿಹಾಸ ಮತ್ತು ಹಿರಿಯರ ತಾಂತ್ರಿಕ ಮತ್ತು ವೈಜ್ಷಾನಿಕ ಜ್ಞಾನದ ಪಾಲು ಬಹಳ ದೊಡ್ಡದು.

Advertisement

ಇವತ್ತು ಈ ಆಧುನಿಕ ಜಗತ್ತಿನಲ್ಲಿ ಅತ್ಯುತ್ತಮ ಶಿಕ್ಷಣ ವ್ಯವಸ್ಥೆ ಹೊಂದಿರುವ ದೇಶ ಫಿನ್ ಲ್ಯಾಂಡ್ . ಇಲ್ಲಿ ಮಗುವನ್ನು 7 ನೇ ವಯಸ್ಸಿಗೆ ಶಾಲೆಗೆ ಸೇರಿಸಲಾಗುವುದು. ಅಲ್ಲಿಯವರೆಗೆ ಪಠ್ಯ ಶಿಕ್ಷಣದ ವ್ಯವಸ್ಥೆಯಲ್ಲಿ ಬಂಧಿಸುವುದು ಬೇಡ ಎನ್ನುವುದು ಅಲ್ಲಿನ ಜನ ಮತ್ತು ಸಂವಿಧಾನದ ನಿಲುವು. 7 ರಿಂದ 16 ವಯಸ್ಸಿನ ವರೆಗೆ ಅಲ್ಲಿನ ಮಕ್ಕಳಿಗೆ ಕಡ್ಡಾಯ ಮತ್ತು ಉಚಿತ ಶಿಕ್ಷಣವನ್ನು ನೀಡಲಾಗುತ್ತದೆ.

ಅದರಲ್ಲೂ ನಾವು ಗಮನಿಸಬೇಕಾದದ್ದು ಭಾರತದ ಶಿಕ್ಷಣ ವ್ಯವಸ್ಥೆಯಂತೆ ವಿಪರೀತ ಪಠ್ಯ ಪುಸ್ತಕಗಳು, ‘ಹೋಮ್ ವರ್ಕ್’ ಮುಂತಾದ ಒತ್ತಡಗಳು ಇರುವುದಿಲ್ಲ. ಅಲ್ಲಿ ವಾರ್ಷಿಕ ಪರೀಕ್ಷೆಗಳ ಪರಿಕಲ್ಪನೆಯಿಲ್ಲ, ಅಂಕಗಳಿಗಾಗಿಯೇ ಎಂಬಂತೆ ಮಕ್ಕಳನ್ನು ಓದಿಸುವುದಿಲ್ಲ ಬದಲಾಗಿ ಸೃಜನಾತ್ಮಕ ಕಲಿಕೆ ಮತ್ತು ದೈಹಿಕ ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತದೆ. ಇನ್ನು ಹದಿನಾರರ ನಂತರ ಅಲ್ಲಿನ ಮಕ್ಕಳಿಗೆ ವೃತ್ತಿ ಶಿಕ್ಷಣದ ಆಯ್ಕೆಯ ಅವಕಾಶ ಒದಗಿಸಲಾಗುತ್ತದೆ.

ಇನ್ನು ಚೀನಾದ ಶಿಕ್ಷಣ ವ್ಯವಸ್ಥೆಯನ್ನು ಗಮನಿಸಿದರೆ, 1949ರಲ್ಲಿ ಚೀನಾದಲ್ಲಿ ಕಮ್ಯೂನಿಷ್ಟ್ ಸರ್ಕಾರದ ಆಡಳಿತ ಬರೋ ಮೊದಲು ಅಲ್ಲಿ ಕಿಂಗ್ ಸಾಮ್ರಾಜ್ಯದ ಅವಧಿಯಲ್ಲಿ ಚೀನಾದಾದ್ಯಂತ ಉತ್ತಮ ಶಿಕ್ಷಣ ಪದ್ಧತಿಯನ್ನು ಹೊಂದಿತ್ತು. ಈ ಸಾಮ್ರಾಜ್ಯ ತಮ್ಮ ಸಾಂಪ್ರದಾಯಿಕ ಶಿಕ್ಷಣ ಮಾತ್ರವಲ್ಲದೆ ಪಾಶ್ಚಿಮಾತ್ಯ ಶಿಕ್ಷಣ ಪದ್ಧತಿಗಳನ್ನೂ ಅಳವಡಿಸಿಕೊಳ್ಳಲು ಅವಕಾಶ ನೀಡುತ್ತಿತ್ತು, ಅದರೆ ಮಾವೊ ಝಡಾಂಗ್ ಆಡಳಿತ ಶುರುವಾದ ಮೇಲೆ ಶಿಕ್ಷಣ ಪದ್ಧತಿಯಲ್ಲಿ ಬಹಳಷ್ಟು ಬದಲಾವಣೆಯಾಯಿತು. ಅಲ್ಲಿನ ಹಿಂದಿನ ವಿದ್ಯಾವಂತರನ್ನು ಕಮ್ಯುನಿಷ್ಟ್ ಸರ್ಕಾರ ವಿರೋಧಿಗಳಂತೆ ಕಂಡಿತ್ತು. ಕಾರಣ ಅವತ್ತಿಗೆ ಅವರಿಗೆ ಬೇಕಾಗಿದ್ದದ್ದು ಬರೀ ಕಾರ್ಮಿಕರಷ್ಟೆ.

ನಮ್ಮಲ್ಲಿ ಅಂಕಗಳು ಶೈಕ್ಷಣಿಕ ಗುಣಮಟ್ಟ ನಿರ್ಧರಿಸುವ ಮಾನದಂಡಗಳು ಎನ್ನುವುದು ತಪ್ಪಲ್ಲ, ಆದರೆ, ಮಕ್ಕಳು Rank ಬರೋದರಿಂದ ಮಾತ್ರ ಬುದ್ದಿವಂತರಾಗುತ್ತಿದ್ದಾರೆ ಎನ್ನುವ ಬಾವನೆ ಆಳವಾಗಿ ಹಲವು ಮಂದಿ ಪೋಷಕರಲ್ಲಿ ಬೇರೂರಿದಂತಿದೆ. ಇನ್ನು ಇತ್ತೀಚೆಗೆ ನಡೆಯುತ್ತಿರುವ ಪಠ್ಯಕ್ಕೆ ಏನು ಸೇರಿಸಬೇಕು ಏನು ಪಠ್ಯದಿಂದ ತೆಗೆಯಬೇಕು ಎನ್ನುವುದು ರಾಜಕೀಯ ಮತ್ತು ಮತಗಳ ನಡುವಿನ ಪ್ರತಿಷ್ಠೆಯ ಪ್ರಶ್ನೆಯಾಗಿ ಉಳಿದಿರುವುದು ದುರದೃಷ್ಟಕರ.

Advertisement

ನಮ್ಮಲ್ಲೇ ಸಾಂಪ್ರದಾಯಿಕವಾಗಿ ಬೆಳೆದು, ಇಲ್ಲಿಯದ್ದೇ ಮೂಲಬೆಳೆಯಾದ ಅರಶಿನವನ್ನು ನಾವು ಬಳಸಿದ್ದೇವೇ ಹೊರತು ಅದರ ಹಕ್ಕು ಸ್ವಾಮ್ಯತೆ ಪಡೆಯುವ ಕಡೆ ಗಮನ ನೀಡಲಿಲ್ಲ. ಅದಕ್ಕಾಗಿ ಕಾನೂನು ಹೋರಾಟ ಮಾಡಿ ಅನ್ಯ ದೇಶದ ಹಿಡಿತದಿಂದ ನಮ್ಮ ತೆಕ್ಕೆಗೆ ಪಡೆಯುವಂತಾಯ್ತು. ಅಂತಹ ಅರಿವು ಇದ್ದರೂ ನಮ್ಮ ಶಿಕ್ಷಣ ವ್ಯವಸ್ಥೆ ಅದನ್ನು ಎಚ್ಚರಿಸಲಿಲ್ಲ. ಇನ್ನಾದರೂ ಹೊಸ ಶಿಕ್ಷಣ ನೀತಿ ಹೊಸ ಭಾರತದ ಭವಿಷ್ಯಕ್ಕೆ ದಾರಿ ದೀಪವಾಗಲಿ, ಬಾಳು ಬೆಳಗಲಿ ಎನ್ನುವುದು ಭಾರತೀಯರ ಆಶಯ.

                 – ದಿನೇಶ ಎಂ

Advertisement

Udayavani is now on Telegram. Click here to join our channel and stay updated with the latest news.

Next