Advertisement

ಶಿಕ್ಷಣ ಸಚಿವರ ಪ್ರತಿಕೃತಿ ದಹನ

01:06 PM Nov 23, 2019 | Team Udayavani |

ಜಮಖಂಡಿ: ಸಂವಿಧಾನ ಶಿಲ್ಪಿ ಡಾ| ಅಂಬೇಡ್ಕರರ ಇತಿಹಾಸವನ್ನು ಅಳಿಸಿ ಹಾಕಲು ಹೊರಟಿರುವ ರಾಜ್ಯ ಸರ್ಕಾರದ ಶಿಕ್ಷಣ ಸಚಿವ ಸುರೇಶಕುಮಾರ ಅವರ ರಾಜೀನಾಮೆ ಪಡೆದು ಪಕ್ಷದಿಂದ ಹೊರಹಾಕಬೇಕೆಂದು ಆಗ್ರಹಿಸಿ ನಗರದ ಎ.ಜಿ. ದೇಸಾಯಿ ವೃತ್ತದಲ್ಲಿ ಮಾನವ ಸರಪಳಿ ಮುಖಾಂತರ ರಸ್ತೆತಡೆ ನಡೆಸಲಾಯಿತು.

Advertisement

ಜತೆಗೆ ಶಿಕ್ಷಣ ಸಚಿವ ಸುರೇಶಕುಮಾರ ಅವರ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ರಾಜು ಮೇಲಿನಕೇರಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕೋಮುವಾದಿ ಕೆಲಸ ಮಾಡುತ್ತಿದೆ. ಟಿಪ್ಪು ಸುಲ್ತಾನ್‌ ಜಯಂತಿ ರದ್ದು ಪಡಿಸುವ ಹುನ್ನಾರ ಮಾಡುತ್ತಿದೆ. ಡಾ| ಅಂಬೇಡ್ಕರ ಬರೆದಿರುವ ಸಂವಿಧಾನವನ್ನು ಒಬ್ಬರೇ ಬರೆದಿಲ್ಲ ಎಂದು ಕೈಪಿಡಿಯಲ್ಲಿ ಬರೆಯುವ ಅಗತ್ಯ ಇರಲಿಲ್ಲ. ಅಂಬೇಡ್ಕರ ಅವರ ಪಾತ್ರವನ್ನು ಗೌಪ್ಯವಾಗಿಡುವುದೇ ಹುನ್ನಾರವಾಗಿದೆ. ರಾಜ್ಯ ಸರ್ಕಾರ ಶಿಕ್ಷಣದಲ್ಲಿ ತನ್ನ ಗುಪ್ತ ಅಜೆಂಡಾವನ್ನು ಜಾರಿಗೊಳಿಸಲು ಹೊರಟಿದೆ. ಈ ರಾಜ್ಯದಲ್ಲಿ ಬುದ್ದ, ಬಸವ, ಅಂಬೇಡ್ಕರರವರ ತತ್ವ-ಸಿದ್ಧಾಂತದಿಂದ ದಲಿತರು ಬದುಕುತ್ತಿದ್ದು, ಅಂಬೇಡ್ಕರ್‌ ಅವರ ವಿರುದ್ಧ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು.

ಸಂವಿಧಾನ ತಿದ್ಧುಪಡಿ ಮಾಡುತ್ತೇವೆಂದು ಉಡಾಫೆ ಹೇಳಿಕೆ ನೀಡಿದರೆ ರಕ್ತ ಪಾತವಾಗುತ್ತದೆ. ಮಾಜಿ ಸಚಿವ ಶ್ರೀನಿವಾಸ ಪ್ರಸಾದ ಅವರ ನಡೆಯನ್ನು ವಿರೋ ಧಿಸಲಾಗುತ್ತದೆ. ತಾಲೂಕಿನಲ್ಲಿ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ದಲಿತರು, ಅಲ್ಪಸಂಖ್ಯಾತರು ಸೇರಿಕೊಂಡು ಕಪ್ಪುಬಟ್ಟೆ ಧರಿಸಿ ಹೋರಾಟ ನಡೆಸಲಾಗುತ್ತದೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ದಲಿತ ಧುರೀಣರಾದ ರವಿ ಬಬಲೇಶ್ವರ, ಶಶಿಕಾಂತ ದೊಡಮನಿ, ಎನ್‌.ಬಿ. ಗಸ್ತಿ, ಶಶಿಕಾಂತ ದೊಡಮನಿ, ಅಡಿವೆಪ್ಪ ಮಾದರ, ಪುಂಡಲಿಕ ಕಾಂಬಳೆ, ಸದಾಶಿವ ದೊಡಮನಿ, ಸಂಗಮೇಶ ಕಾಂಬಳೆ ಸಹಿತ ವಿವಿಧ ದಲಿತ ಸಂಘಟನೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next