ರಾಮನಗರ: ನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೋವಿಡ್ ಮುಂಜಾಗ್ರತೆ ಪಾಠ ಮಾಡಿದರು.
ಕೋವಿಡ್ ಸೋಂಕಿನ ಬಗ್ಗೆ ಆತಂಕ ಬೇಡ, ಬ್ರಿಟನ್ ಕೋವಿಡ್ ಬಗ್ಗೆ ಹೆದರಿಕೆ ಬೇಡ. ಆದರೆ ಜಾಗ್ರತೆ ಇರಲಿ. ಸದಾ ಮಾಸ್ಕ್ ಹಾಕಿರಿ, ದೈಹಿಕ ಅಂತರ ಕಾಪಾಡಿಕೊಳ್ಳಿ, ಪದೇ ಪದೇ ಕೈ ತೊಳೆಯಿರಿ. ಕಣ್ಣು, ಮೂಗು, ಬಾಯಿಗೆ ಕೈ ಹಾಕಿಕೊಳ್ಳಬೇಡಿ. ಶಾಲೆಗೆ ಬರುವಾಗ ತಿಂಡಿ ತಿಂದುಬನ್ನಿ, ಮನೆಯಿಂದಲೇ ಸ್ವತ್ಛವಾದ ಕುಡಿಯುವನೀರು ತನ್ನಿ, ಪಾನಿಪೂರಿ ತಿನ್ನುವ ಆಸೆಇನ್ನೊಂದಷ್ಟು ದಿನ ಬೇಡ. ಮನೆಯಲ್ಲೇಮಾಡಿಕೊಂಡು ತಿನ್ನಿ. ಯಾವ ಕಾರಣಕ್ಕೂ ಕಲಿಕೆ ನಿಲ್ಲಿಸಬೇಡಿ ಎಂದು ಪಾಠ ಮಾಡಿದರು.
ಪರೀಕ್ಷೆ ಬರದೇ ಪಾಸಾಗ್ತೀವಿ: ಮಾರ್ಚ್‌ನಲ್ಲಿ ಪರೀಕ್ಷೆಗೆ ಸಿದ್ಧವೇಎಂದು ಸಚಿವರು ಕೇಳಿದ ಪ್ರಶ್ನೆಗೆವಿದ್ಯಾರ್ಥಿಗಳಿಂದ ಬೇಡ ಎಂಬ ಒಕ್ಕೊರಲಿನ ಉತ್ತರ ಬಂತು.ಜೂನ್‌ನಲ್ಲಿ ಪರೀಕ್ಷೆ ಇಡಿ ಸಿದ್ಧವಾಗ್ತಿàವಿ ಎಂದರು. ಪರೀಕ್ಷೆಯೇ ಇಲ್ಲದೆ ಪಾಸು ಮಾಡೋಣವೇ ಎಂದು ಸಚಿವರು ಕೇಳಿದ ಪ್ರಶ್ನೆಗೆ, ಪರೀಕ್ಷೆ ಬೇಕು ಎಂಬ ಉತ್ತರ ಕೇಳಿ ಬಂತು. ಪರೀಕ್ಷೆ ಏಕೆ ಬೇಕು ಎಂಬಸಚಿವರ ಮಗದೊಂದು ಪ್ರಶ್ನೆಗೆ ವಿದ್ಯಾರ್ಥಿನಿಯರುನಾವು ಪಾಠ ಕಲಿತಿದ್ದೇವೆ ಅನ್ನೋದು ಓರೆಗೆ ಹಚ್ಚೋದೆ ಪರೀಕ್ಷೆಗಳು ಎಂಬ ಉತ್ತರದಿಂದ ಸಚಿವರು ಸಂತಸಗೊಂಡರು. ಹೊರೆಯಾಗದಂತೆ ಪರೀಕ್ಷೆ ಇರಲಿದೆ ಎಂಬ ಭರವಸೆ ನೀಡಿದರು.
ಪತ್ರಿಕೆ ಓದುವ ಹವ್ಯಾಸ ಬೆಳಸಿಕೊಳ್ಳಿ: ವಿದ್ಯಾರ್ಥಿನಿಯಬ್ಬಳ ಬಳಿ ಇದ್ದ ದಿನ ಪತ್ರಿಕೆ ಗಮನಿಸಿದ ಸಚಿವರು. ಎಷ್ಟು ವಿದ್ಯಾರ್ಥಿಗಳು ದಿನನಿತ್ಯ ಪತ್ರಿಕೆ ಓದುತ್ತೀರಾ ಎಂಬ ಪ್ರಶ್ನೆಗೆ ಬೆರಳೆಣಿಕೆ ಮಂದಿ ಮಾತ್ರ ಕೈ ಎತ್ತಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಪತ್ರಿಕೆ ಓದುವ ಹವ್ಯಾಸವಿರಲಿ ಎಂದು ತಾಕೀತು ಮಾಡಿದರು.
ಶಾಲೆ ಉದ್ಘಾಟನೆಗೆ ನಾನೇ ಬರ್ತೀನಿ: ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿ ನಿರ್ಮಿಸಿರುವ ನೂತನ ಜಿ.ಕೆ.ಬಿ.ಎಂ.ಎಸ್ ಕಟ್ಟಡದ ಉದ್ಘಾಟನೆಗೆ ಖುದ್ದು ತಾವೇ ಬರುವುದಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶಾಲೆ ಮುಖ್ಯ ಶಿಕ್ಷಕ ಶ್ರೀನಿವಾಸ್‌ರಿಗೆ ತಿಳಿಸಿದರು. ಮೇಡಂ (ಶಾಸಕಿ ಅನಿತಾ ಕುಮಾರಸ್ವಾಮಿ)ಅವರ ಬಳಿ ಮಾತನಾಡಿ ದಿನಾಂಕ ಫಿಕ್ಸ್ ಮಾಡಿ ತಿಳಿಸಿ ನಾನೇ ಬರ್ತೀನಿ ಅಂದರು.
ಸಚಿವರ ರೌಂಡ್ಸ್: ಶನಿವಾರ ಸುರೇಶ್ ಕುಮಾರ್ ರಾಮನಗರ ಹಾಗೂ ಮಾಗಡಿ ತಾಲೂಕಿನ ಆಯ್ದ ಶಾಲೆಗಳಿಗೆ ಭೇಟಿ ನೀಡಿದರು. ಬಿಡದಿಯ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆ ಮತ್ತು ಬಸವೇಶ್ವರ ಶಾಲೆ, ರಾಮನಗರ ನಗರದ ಬಾಲಕಿಯರಸರ್ಕಾರಿ ಪ್ರೌಢ ಶಾಲೆ, ಶಾಂತಿನಿಕೇತನ ಶಾಲೆ, ಮಾಗಡಿ ತಾಲೂಕಿನ ವಿ.ಜಿ ದೊಡ್ಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹೊಸಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಾಚೇನಹಟ್ಟಿಯ ಸರ್ಕಾರಿ ಪ್ರೌಢಶಾಲೆಗಳಿಗೆ ಭೇಟಿ ನೀಡಿದ್ದರು.