ಮುದ್ದೇಬಿಹಾಳ: ಬಾಲ್ಯ ವಿವಾಹದ ದುಷ್ಪರಿಣಾಮದಿಂದ ಹೆಣ್ಣು ಮಕ್ಕಳನ್ನು ರಕ್ಷಿಸಬೇಕು. ತಾಳ್ಮೆ, ಬುದ್ಧಿವಂತಿಕೆ, ಸಹನೆಗೆ ಹೆಸರಾಗಿರುವ ಹೆಣ್ಣು ಮಕ್ಕಳನ್ನು ಉಳಿಸಿ, ವಿದ್ಯಾವಂತರನ್ನಾಗಿ ಮಾಡಿ ಬೆಳೆಸುವ ಅವಶ್ಯಕತೆ ಎಂದಿಗಿಂತ ಇಂದು ಹೆಚ್ಚಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಡಿ.ಗಾಂಜಿ ಹೇಳಿದರು.
ಇಲ್ಲಿನ ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಜಯಪುರ ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆಣ್ಣು ಮಗುವಿನ ಸಪ್ತಾಹ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂಗನವಾಡಿ ಮೂಲ ಶಿಕ್ಷಣಕ್ಕೆ ರಹದಾರಿಯಾಗಿದ್ದು ಇಲ್ಲಿಗೆ ಕಲಿಯಲು ಬರುವ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಿದಲ್ಲಿ ಅವರ ಭವಿಷ್ಯ ಉಜ್ವಲವಾಗುತ್ತದೆ ಎನ್ನುವುದನ್ನು ಪ್ರತಿಯೊಬ್ಬರೂ ಅರಿಯಬೇಕು. ಹೆಣ್ಣು ಮಕ್ಕಳಲ್ಲಿ ಬೆರಳೆಣಿಕೆಯಷ್ಟು ಜನ ತಪ್ಪು ದಾರಿ ಹಿಡಿದರೂ ದೇಶದ ಭವಿಷ್ಯವೇ ಬುಡಮೇಲಾಗುವುದರಲ್ಲಿ ಸಂದೇಹವಿಲ್ಲ ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗೀತಾ ಗುತ್ತರಗಿಮಠ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಹೆಣ್ಣು ಮಕ್ಕಳಿಗೆ ಹೆಚ್ಚಿನ ಸೌಲಭ್ಯ, ಸೌಕರ್ಯ ಕಲ್ಪಿಸಿದ್ದು ಎಲ್ಲರೂ ಪ್ರಯೋಜನ ಪಡೆದುಕೊಳ್ಳಬೇಕು. ಹೆಣ್ಣು ಭ್ರೂಣ ಹತ್ಯೆ ನಿಲ್ಲಿಸಲು, ಹೆಣ್ಣು ಶಿಶುವನ್ನು ಉಳಿಸಲು ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಂಡಿದೆ. ತಾಯಂದಿರು ಹೆಣ್ಣು ಮಕ್ಕಳನ್ನು ರಕ್ಷಿಸುವಲ್ಲಿ ಮುಂದಾಗಬೇಕು. ಹೆಣ್ಣು ಮಕ್ಕಳಿಗೆ ಉತ್ತಮ ವಿದ್ಯೆ ನೀಡಿ ಅವರಿಗಾಗಿ ಆಸ್ತಿ ಮಾಡದೆ ಅವರನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದರು.
ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಬಿ. ಚಲವಾದಿ, ತಾಲೂಕು ಆರೋಗ್ಯ ಇಲಾಖೆ ಪ್ರತಿನಿಧಿ ಎಸ್.ಎ. ರುದ್ರವಾಡಿ, ಅಂಗನವಾಡಿ ಮೇಲ್ವಿಚಾರಕಿಯರು ವೇದಿಕೆಯಲ್ಲಿದ್ದರು. ಇದೇ ವೇಳೆ ಬಾಲಕಿಯರಾದ ತಸ್ಲೀಮಾ ಹಳ್ಳೂರ ಮತ್ತು ದೀಪ್ತಿ ಮುರಾಳ ಇವರ ಜನ್ಮದಿನವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿನಿಯರಾದ ಸುಮತಿ ಹಿರೇಮನಿ, ಅನುಸೂಯಾ ಹಿರೇಮಠ ಅವರನ್ನು ಸನ್ಮಾನಿಸಲಾಯಿತು.
ತುಳಸಿ ಸಂಗಡಿಗರು ಪ್ರಾರ್ಥಿಸಿದರು. ಮೇಲ್ವಿಚಾರಕಿ ಸುಮಿತ್ರಾ ಹಗರಗೊಂಡ ಸ್ವಾಗತಿಸಿದರು. ಟಿ.ಡಿ. ಲಮಾಣಿ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ಸಿಡಿಪಿಒ ಕಚೇರಿಯಿಂದ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ ಮಾರ್ಗವಾಗಿ ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿವರೆಗೆ ಮಕ್ಕಳ ಜಾಥಾ ನಡೆಸಲಾಯಿತು.