Advertisement

ಅನಕ್ಷರಸ್ಥರಿಗೂ ವಿದ್ಯಾಭ್ಯಾಸ ಅತ್ಯಗತ್ಯ; ಜಿಲ್ಲಾಧಿಕಾರಿ ನಾಗರಾಜ್‌

06:19 PM Sep 20, 2022 | Team Udayavani |

ಚಿಕ್ಕಬಳ್ಳಾಪುರ: 2022ನೇ ಸಾಲಿಗೆ ಜಿಲ್ಲೆಯಲ್ಲಿ ಸಾಕ್ಷರತೆ ಪ್ರಮಾಣವು ಶೇ.. 83ರಷ್ಟಿದೆ. ಉಳಿದ ಶೇ. 17 ಅನಕ್ಷರಸ್ಥರಿಗೂ ವಿದ್ಯೆ ನೀಡಿ ಸಮಾಜದ ಮುಖ್ಯವಾಹಿನಿಗೆ ತರುವ ಗುರಿಯನ್ನು ಜಿಲ್ಲಾಡಳಿತವು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಎನ್‌.ಎಮ್‌.ನಾಗರಾಜ್‌ ತಿಳಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಲೋಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಸಾಕ್ಷರತಾ ದಿನದ ಅಂಗವಾಗಿ ಸೋಮವಾರ ಆಯೋಜಿಸಲಾಗಿದ್ದ ಸಾಕ್ಷರತಾ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 2022-23 ನೇ ಸಾಲಿನ ಲೋಕ ಶಿಕ್ಷಣ ನಿರ್ದೇಶನಾಲಯವು ಹಮ್ಮಿಕೊಂಡಿರುವ ಸಾಕ್ಷರತಾ ಕಾರ್ಯಕ್ರಮಗಳನ್ನು ಶಿಕ್ಷಣ ಇಲಾಖೆಯು ನಿರ್ವಹಿಸುತ್ತಿದೆ. ಮುಂದಿನ 2 ವರ್ಷಗಳಲ್ಲಿ ಸಾವಿರ
ಗ್ರಾಪಂಗಳನ್ನು ಸಂಪೂರ್ಣ ಸಾಕ್ಷರತಾ ಗ್ರಾಪಂಗಳನ್ನಾಗಿ ಮಾಡಲಾಗುವುದು. ಈ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ 14 ಗ್ರಾಪಂಗಳಲ್ಲಿನ ಅನಕ್ಷರಸ್ಥರಿಗೆ ಸಾಕ್ಷರತೆ
ನೀಡಿ ಸಂಪೂರ್ಣ ಸಾಕ್ಷರತಾ ಗ್ರಾಮಗಳನ್ನಾಗಿಸಲು ಯೋಜಿಸಲಾಗಿದೆ ಎಂದರು.

ಔಪಚಾರಿಕ ಶಿಕ್ಷಣವನ್ನು ಪಡೆಯದ, 15 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳನ್ನು ಗುರುತಿಸಿ ನವಸಾಕ್ಷರರನ್ನಾಗಿ ಮಾಡುವುದೇ ಈ ದಿನಾಚರಣೆ ಉದ್ದೇಶವಾಗಿದೆ. ಎಲ್ಲರನ್ನೂ ಸಾಕ್ಷರರನ್ನಾಗಿ ಅವರ ಜೀವನಮಟ್ಟವನ್ನು ಸುಧಾರಿಸುವ ಹಾಗೂ ಸಾಕ್ಷರತೆಯ ಕುರಿತು ಪ್ರತಿಯೊಂದು ಗ್ರಾಮ, ಶಾಲೆಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಶಿಕ್ಷಣದ ಮಹತ್ವವನ್ನು ಅರಿವು ಮೂಡಿಸಬೇಕು. ಮುಂದಿನ ದಿನಗಳಲ್ಲಿ ಚಿಕ್ಕಬಳ್ಳಾಪುರವನ್ನು ಸಂಪೂರ್ಣ ಸಾಕ್ಷರತಾ ಜಿಲ್ಲೆಯನ್ನಾಗಿಸಬೇಕು ಎಂದು ಕೋರಿದರು.

ಜಿಲ್ಲಾ ಕಸಾಪ ಅಧ್ಯಕ್ಷರಾದ ಕೋಡಿರಂಗಪ್ಪ ಮಾತನಾಡಿದರು. ಸಾಕ್ಷರತಾ ದಿನಾಚರಣೆಯ ಸಾಕ್ಷರತೆಯ ಕಲಿಕೆಯ ಸ್ಥಳಗಳನ್ನು ಪರಿವರ್ತಿಸುವುದು ಎಂಬ ಈ ವರ್ಷದ ಘೋಷವಾಕ್ಯವಾಗಿದೆ. ಕಲಿಕೆ ಬಲಗೊಳಿಸಿ ಉಳಿಸಬೇಕಾಗಿದೆ ಎಂಬ ಆಶಯದೊಂದಿಗೆ ಸಾಕ್ಷರತೆ ದಿನಾಚರಣೆಯನ್ನು
ಆಚರಿಸಲಾಗುತ್ತಿದೆ ಎಂದರು.

ಭಾರತ ರತ್ನ ಪುರಸ್ಕೃತರಾದ ಸರ್‌ ಎಂ.ವಿಶ್ವೇಶ್ವರಯ್ಯ, ಸಿ.ಎನ್‌.ರಾವ್‌ ಹಾಗೂ ಶಿಕ್ಷಣ ತಜ್ಞ ಎಚ್‌.ನರಸಿಂಹಯ್ಯ ಇವರುಗಳು ಶಿಕ್ಷಣದಿಂದ ಅಪಾರ ಸಾಧನೆಗೈದಿದ್ದಾರೆ. ಇವರ ಮಾರ್ಗದರ್ಶನದಲ್ಲಿ ತಾವೆಲ್ಲರೂ ನಡೆಯಬೇಕು. ಸಾಕ್ಷರತೆಯನ್ನು ಹೆಚ್ಚಿಸಲು ಜಿಲ್ಲಾಡಳಿತವು ಉತ್ತಮ ಸಹಕಾರ ನೀಡುತ್ತಿದೆ. ಪ್ರತಿಯೊಬ್ಬರು ಪುಸ್ತಕ ಹಾಗೂ ದಿನಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಎಲ್ಲಾ ಅಧಿಕಾರಿಗಳು ಸಾಕ್ಷರತಾ ಪ್ರತಿಜ್ಞಾವಿಧಿ ಬೋಧಿಸಿ ಪ್ರತಿಜ್ಞೆ ಮಾಡಿದರು. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಮುನಿಕೆಂಚೇಗೌಡ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಆಂಜನೇಯ ಇತರರಿದ್ದರು.

Advertisement

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಕರೆತನ್ನಿ
ಆಧುನಿಕ ಕಾಲದಲ್ಲಿಯೂ ನಾನಾ ರೀತಿ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಯಾವುದೇ ಮಕ್ಕಳು ಶಾಲೆಯಿಂದ ಹೊರಗುಳಿಯಬಾರದು. ಪ್ರತಿಯೊಬ್ಬರಿಗೂ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯ ದೊರೆಯಬೇಕಾಗಿದೆ. ಗ್ರಾಪಂ ಹಾಗೂ ನಗರದ ವಾರ್ಡ್‌ಗಳ ಮಟ್ಟದಲ್ಲಿ ಘಟಕಗಳನ್ನಾಗಿ ವಿಭಜಿಸಿಕೊಂಡು ಸಣ್ಣ ಗುರಿಗಳ ಮೂಲಕ ಶಿಕ್ಷಣದಿಂದ ಹೊರಗುಳಿದವರನ್ನು ಗುರ್ತಿಸಿ ಶಾಲೆಗೆ ಕರೆತರುವ ಕೆಲಸ ಸಂಬಂಧಪಟ್ಟ ಅಧಿಕಾರಿಗಳು ಮಾಡಬೇಕು ಎಂದು ಜಿಲ್ಲಾಧಿಕಾರಿ ನಾಗರಾಜ್‌ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next