Advertisement

ಮೀನುಗಾರರ ಮಕ್ಕಳಿಗೂ ವಿದ್ಯಾನಿಧಿ: ಸಿಎಂ ಬೊಮ್ಮಾಯಿ

01:08 AM Nov 08, 2022 | Team Udayavani |

ಕುಂದಾಪುರ: ಕರಾವಳಿ ಭಾಗದ ಆರ್ಥಿಕತೆಯ ಮೂಲವಾದ ಮೀನುಗಾರರ ಮಕ್ಕಳಿಗೂ ರೈತ ಮಕ್ಕಳಿಗೆ ಇರುವಂತೆ ವಿದ್ಯಾನಿಧಿ ಯೋಜನೆ ವಿಸ್ತರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

Advertisement

ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುಳ್ಳಿಕಟ್ಟೆಯ ನಗುಸಿಟಿಯಲ್ಲಿ ಸೋಮವಾರ 1,337.31 ಕೋ.ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಹಾಗೂ 254.46 ಕೋ.ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದ ಅವರು, ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯ ಆದೇಶ ಪತ್ರವನ್ನು ಹಸ್ತಾಂತರಿಸಿ ಮಾತನಾಡಿದರು.

ಈ ಯೋಜನೆಯಿಂದ 2 ಲಕ್ಷ ಮಂದಿ ಮೀನುಗಾರರ ಮಕ್ಕಳಿಗೆ ಅನುಕೂಲವಾಗಲಿದೆ. ಇವರೂ ವಿದ್ಯಾವಂತರಾಗಿ ಮುಖ್ಯವಾಹಿನಿಗೆ ಬರಲಿದ್ದಾರೆ. ದುಡಿಯುವ ವರ್ಗವನ್ನೂ ಮುಖ್ಯವಾಹಿನಿಗೆ ತರುವುದೇ ಸರಕಾರದ ಸದುದ್ದೇಶ ಎಂದು ಅವರು ಹೇಳಿದರು.

ಬೈಂದೂರಿನ 43 ಗ್ರಾ.ಪಂ.ಗಳ 848 ಜನವಸತಿ ಪ್ರದೇಶಗಳ 3 ಲಕ್ಷ ಮನೆ ಬಾಗಿಲಿಗೆ ಕುಡಿಯುವ ನೀರು ಪೂರೈಸುವ ನಬಾರ್ಡ್‌- ಜಲಜೀವನ್‌ ಮಿಷನ್‌ನಡಿ 784.60 ಕೋ.ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಯಿತು.

ನಮ್ಮದು ಜನರಿಗೆ ಸ್ಪಂದಿಸುವ ಸರಕಾರ. ರೈತರಿಗೆ 10 ಎಚ್‌ಪಿ ಉಚಿತ ವಿದ್ಯುತ್‌, ಎಸ್ಸಿ-ಎಸ್ಟಿಯವರಿಗೆ 75 ಯುನಿಟ್‌
ಉಚಿತ ವಿದ್ಯುತ್‌, ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ನೀಡಲಾಗಿದೆ. 75 ವರ್ಷಗಳಿಂದ ಬೆಳಕು ಕಾಣದ ಮನೆಗಳು ಬೆಳಗಿವೆ. ಸಾಮಾಜಿಕ ನ್ಯಾಯದಡಿ 28 ಸಾವಿರ ಕೋ.ರೂ. ಎಸ್ಸಿ-ಎಸ್ಟಿ ಅಭಿವೃದ್ಧಿಗೆ ನೀಡಿದೆ.

Advertisement

ರಾಜ್ಯಾದ್ಯಂತ 100 ಅಂಬೇಡ್ಕರ್‌ ಹಾಸ್ಟೆಲ್‌, 50 ಕನಕದಾಸ ಹಾಸ್ಟೆಲ್‌, 1 ಸಾವಿರ ವಿದ್ಯಾರ್ಥಿಗಳಿಗೆ ಮಂಗಳೂರಿನಲ್ಲಿ ಹಾಸ್ಟೆಲ್‌, ನಾರಾಯಣ ಗುರು ಹೆಸರಲ್ಲಿ 4 ವಸತಿ ಶಾಲೆಗೂ ಅಡಿಗಲ್ಲು ಹಾಕಲಾಗಿದೆ. ಆ ಮೂಲಕ ರಾಜ್ಯದಲ್ಲಿ ಸರಕಾರವು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡಿದೆ ಎಂದು ಸಿಎಂ ಹೇಳಿದರು.

ಗಂಗೊಳ್ಳಿ ಬಂದರಿಗೆ ಅನುದಾನ
ಶಾಸಕರು, ಸಂಸದರ ಮನವಿ ಯಂತೆ ಗಂಗೊಳ್ಳಿ ಮೀನುಗಾರಿಕೆ ಬಂದರಿನ ಅಭಿವೃದ್ಧಿಗೆ ಅನುದಾನ ಒದಗಿಸಲು ಸರಕಾರ ಬದ್ಧವಿದೆ. ಮುಂದಿನ ಬಜೆಟ್‌ನಲ್ಲಿ ಬಂದರಿನ ಸಮಗ್ರ ಅಭಿವೃದ್ಧಿಗೆ ಹೆಚ್ಚು ಅನುದಾನ ಘೋಷಿಸಲಾಗುವುದು ಎಂದರು.

ಬಿ.ಎಸ್‌. ಯಡಿಯೂರಪ್ಪ ಮಾತನಾಡಿ, ಡಿಸಿಎಂ, ಸಿಎಂ, ಸಂಸದನಾಗಿ ಅನೇಕ ವರ್ಷಗಳಿಂದ ಈ ಕ್ಷೇತ್ರದ ಅಭಿ ವೃದ್ಧಿ ಯಲ್ಲಿ ತೊಡಗಿಸಿ ಕೊಂಡಿದ್ದು, ಬೈಂದೂರಿನ ಇತಿಹಾಸ ದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡ ಬೇಕಾದ ದಿನ. ಸಂಸದರು, ಶಾಸಕರ ಜುಗಲ್ಬಂದಿಯಲ್ಲಿ ಮಾದರಿ ಕ್ಷೇತ್ರ ವಾಗಿ ರೂಪುಗೊಳ್ಳುತ್ತಿದೆ ಎಂದರು.

ಎಲೆಚುಕ್ಕಿ ರೋಗ: 10 ಕೋ.ರೂ. ಬಿಡುಗಡೆ
ಕರಾವಳಿ ಹಾಗೂ ಮಲೆನಾಡು ಭಾಗದ ಅಡಿಕೆಗೆ ವ್ಯಾಪಕವಾಗಿ ಆವರಿಸಿರುವ ಎಲೆಚುಕ್ಕಿ ರೋಗದ ಬಗ್ಗೆ ಕೇಂದ್ರದ ಗಮನಕ್ಕೆ ತರಲಾಗಿದ್ದು, ಔಷಧ ಕಂಡುಹಿಡಿಯುವಂತೆ ಸಂಶೋಧನೆಗೂ ಸೂಚಿಸಲಾಗಿದೆ. ತುರ್ತಾಗಿ ಇನ್ನಷ್ಟು ಹರಡದಂತೆ ತಡೆಗಟ್ಟಲು ಔಷಧ ಸಿಂಪಡಣೆಗೆ 10 ಕೋ.ರೂ. ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ತಿಳಿಸಿದರು.

ಬೈಂದೂರಿನಲ್ಲಿ ಅಭಿವೃದ್ಧಿಯ ಶಕೆ
ಬೈಂದೂರಿನಲ್ಲಿ ಅಭಿವೃದ್ಧಿ ಶಕೆ ಆರಂಭಗೊಂಡಿದೆ. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಬೇಡಿಕೆಗಳು ಈಗ ಈಡೇರುತ್ತಿವೆ. ಇಲ್ಲಿನ ಅಭಿವೃದ್ಧಿ ಚಕ್ರ ನಿರಂತರವಾಗಿ ನಡೆಯ ಲಿದೆ. ನಮ್ಮಲ್ಲಿ ರಾಜ್ಯ-ಕೇಂದ್ರದ ಮೂಲಕ ಡಬಲ್‌ ಎಂಜಿನ್‌ ಸರಕಾರವಾಗಿದ್ದು, ಅದೇ ರೀತಿ ಸ್ಥಳೀಯವಾಗಿಯೂ ಬೈಂದೂರಲ್ಲಿ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಡಬಲ್‌ ಎಂಜಿನ್‌ಗಳಂತೆ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ ಎಂದು ಬೊಮ್ಮಾಯಿ ಶ್ಲಾಘಿಸಿದರು.

94 ಸಿ, ಸಿಸಿಯಡಿ ಶೀಘ್ರ ಹಕ್ಕುಪತ್ರ
ರಾಜ್ಯದಲ್ಲಿ 9 ಲಕ್ಷ ಮೀಸಲು ಅರಣ್ಯದ ಪೈಕಿ 6 ಲಕ್ಷ ಹೆಕ್ಟೇರ್‌ ಪ್ರದೇಶವನ್ನು ಕಂದಾಯ ಭೂಮಿಯಾಗಿಸಿದ್ದು, ಕಾಡಂಚಿನ ರೈತರಿಗೆ, ನೆಲೆಸಿ ರುವವರಿಗೆ ಅನುಕೂಲ ವಾಗಲಿದೆ. 94ಸಿ, 94ಸಿಸಿ ಅಡಿ ಶೀಘ್ರ ಹಕ್ಕುಪತ್ರ ವಿತರಣೆಗೆ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಸಿಎಂ ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ಗಂಗೊಳ್ಳಿ ಬಂದರು, ಮೆಡಿಕಲ್‌ ಕಾಲೇಜು, ವಿಮಾನ ನಿಲ್ದಾಣ ಬೇಡಿಕೆ, ದೇಗುಲ ಜೀರ್ಣೋದ್ಧಾರ ಕುರಿತು ಸಿಎಂಗೆ ಅಹವಾಲು ಸಲ್ಲಿಸಿದರು. ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ಮಾತನಾಡಿದರು.

ಉಸ್ತುವಾರಿ ಸಚಿವ ಎಸ್‌. ಅಂಗಾರ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಸುನಿಲ್‌ ಕುಮಾರ್‌, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ರಘುಪತಿ ಭಟ್‌, ಲಾಲಾಜಿ ಆರ್‌. ಮೆಂಡನ್‌, ವಿಧಾನಪರಿಷತ್‌ ಸದಸ್ಯ ರವಿಕುಮಾರ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ದಿ ಮೈಸೂರು ಎಲೆಕ್ಟ್ರಿಕಲ್‌ ಇಂಡಸ್ಟ್ರೀಸ್‌ನ ಅಧ್ಯಕ್ಷ ಉದಯ್‌ ಕುಮಾರ್‌ ಶೆಟ್ಟಿ, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್‌ ಕುಮಾರ್‌ ಕೊಡ್ಗಿ, ಖಾದಿ ಗ್ರಾಮೋದ್ಯೋಗ ಮಂಡಳಿ ನಿರ್ದೇಶಕ ಮಿಥುನ್‌ ಆರ್‌. ಹೆಗ್ಡೆ, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ಎಸ್‌ಪಿ ಹಾಕೆ ಅಕ್ಷಯ್‌ ಮಚ್ಚಿಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ಮಂಡಲದ ಅಧ್ಯಕ್ಷ ದೀಪಕ್‌ ಕುಮಾರ್‌ ಶೆಟ್ಟಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ 20 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.

ಸಂಸದ ಬಿ.ವೈ. ರಾಘವೇಂದ್ರ ಪ್ರಸ್ತಾವಿಸಿ, ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಎಂ. ಸ್ವಾಗತಿಸಿದರು. ಕೆ.ಸಿ. ರಾಜೇಶ್‌ ನಿರೂಪಿಸಿ, ಜಿ.ಪಂ. ಸಿಇಒ ಪ್ರಸನ್ನ ಎಚ್‌. ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next