Advertisement

ಶೈಕ್ಷಣಿಕ ಚಟುವಟಿಕೆ ಗಟ್ಟಿಗೊಳಿಸಲು ಸಹಭಾಗಿತ್ವ ಮುಖ್ಯ

02:08 AM Jan 29, 2021 | Team Udayavani |

ಕೊರೊನಾ ತೀವ್ರತೆ ಇಳಿಮುಖವಾಗುತ್ತಿದ್ದಂತೆ ರಾಜ್ಯದಲ್ಲಿ ಶೈಕ್ಷಣಿಕ ಚಟುವಟಿಕೆಗಳು ಚುರುಕುಗೊಳ್ಳುತ್ತಿವೆ. ಈಗಾಗಲೇ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸಿರುವ ರಾಜ್ಯ ಸರಕಾರ. ಫೆಬ್ರವರಿ 1ರಿಂದ 9 ಮತ್ತು 11ನೇ ತರಗತಿಗಳನ್ನು ಶುರುಮಾಡಲಿದೆ. ಅಲ್ಲದೆ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ಕಾರ್ಯಕ್ರಮ ಮುಂದುವರಿಯಲಿದೆ. ಉಳಿದ ತರಗತಿಗಳನ್ನು ಆರಂಭಿಸುವ ಅಥವಾ ಅವುಗಳಿಗೂ ವಿದ್ಯಾಗಮ ನಡೆಸುವ ಬಗ್ಗೆ ಶೀಘ್ರವೇ ಕೋವಿಡ್‌ ಸಲಹಾ ಸಮಿತಿಯ ಸಲಹೆಗಳನ್ನು ಸರಕಾರ ಪಡೆಯಲಿದೆ.

Advertisement

ಹಾಗೆಯೇ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯ ದಿನಾಂಕವೂ ನಿಗದಿ ಯಾಗಿದೆ. ರಾಜ್ಯ ಸರಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿ ಹಾಗೂ ಭವಿಷ್ಯ ವನ್ನು ಗಮನದಲ್ಲಿಟ್ಟುಕೊಂಡು ತರಗತಿ ಹಾಗೂ ವಿದ್ಯಾಗಮ ಕಾರ್ಯಕ್ರಮಗಳನ್ನು ಆರಂಭಿಸಿದೆ. ಅಷ್ಟು ಮಾತ್ರವಲ್ಲದೆ ಕೋವಿಡ್‌ ತಾಂತ್ರಿಕ ನಿರ್ವಹಣ ಸಮಿತಿಯ ಮಾರ್ಗದರ್ಶನದಂತೆ ನಿರ್ದಿಷ್ಟ ಕಾರ್ಯಚರಣ ವಿಧಾನ (ಎಸ್‌ಒಪಿ) ಕೂಡ ಪ್ರಕಟಿಸಿದೆ. ಒಟ್ಟಾರೆಯಾಗಿ ಅತ್ಯಂತ ಸುರಕ್ಷಿತ ವಲಯದಲ್ಲಿ ವಿದ್ಯಾರ್ಥಿಗಳ ಶಿಕ್ಷಣ ಮುಂದುವರಿ ಯುತ್ತಿದೆ. ಈಗ ಪಾಲಕ, ಪೋಷಕರ ಹಾಗೂ ಶಿಕ್ಷಕ ಮತ್ತು ಸಮುದಾ ಯದ ಜವಾಬ್ದಾರಿ ಹೆಚ್ಚಿದೆ. ನೇರ ತರಗತಿ, ಆಫ್ಲೈನ್‌ ಅಥವಾ ಆನ್‌ಲೈನ್‌ ತರಗತಿಗೆ ಅವಕಾಶವನ್ನು ಸರಕಾರ ಮಾಡಿಕೊಟ್ಟಿದೆ. ಕನಿಷ್ಠ ಹಾಜರಾತಿ ಮಿತಿಯ ವಿನಾಯಿತಿಯನ್ನೂ ನೀಡಿದೆ. ಇಲ್ಲಲ್ಲದರ ಸದುಪಯೋಗ ಮಕ್ಕಳ ಶಿಕ್ಷಣ, ಶೈಕ್ಷಣಿಕ ಬೆಳವಣಿಗೆಯಲ್ಲಿ ಕಾಣಬೇಕು.

ಇದು ಅತ್ಯಂತ ವಿಶಿಷ್ಟವಾದ ಶೈಕ್ಷಣಿಕ ವರ್ಷ. ಶಾಲೆಗಳು ವಿಳಂಬ ವಾಗಿ ಆರಂಭವಾಗಿವೆೆ. ತಂತ್ರಜ್ಞಾನ ಬಳಕೆಯೂ ಹೆಚ್ಚಿದೆ ಮತ್ತು ವಾರ್ಷಿಕ ಪರೀಕ್ಷೆಗೆ ಕಾಲಮಿತಿಯೂ ಕಡಿಮೆಯಿದೆ. ಹೀಗಾಗಿ ಈವರೆಗೂ ಮಕ್ಕಳನ್ನೂ ಶಾಲೆಗೆ ದಾಖಲು ಮಾಡದ ಪಾಲಕ, ಪೋಷಕರು ಮೊದಲು ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸುವ ಬಗ್ಗೆ ಯೋಚಿಸಬೇಕಿದೆ. ನೇರ ತರಗತಿಗೆ ಕಳುಹಿಸುವ ಅಥವಾ ಆನ್‌ಲೈನ್‌ ಓದಿಸುವ ಆಯ್ಕೆ ಪೋಷಕರಿಗೇ ಬಿಟ್ಟಿರುವುದರಿಂದ ಮಕ್ಕಳ ಶೈಕ್ಷಣಿಕ ಭವಿಷ್ಯ ಯೋಚಿಸಿ ನಿರ್ಧರಿಸಿ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಮಕ್ಕಳನ್ನು ಸಜ್ಜುಗೊಳಿಸಲು ಮನೆಯಲ್ಲೇ ಸಕಾ ರಾತ್ಮಕ ಭಾವನೆ ಬೆಳೆಸಬೇಕಾಗಿದೆ.
ಶಿಕ್ಷಕ, ಉಪನ್ಯಾಸಕರು ಇನ್ನು ವಿಶೇಷ ತರಗತಿ, ವಿಶಿಷ್ಟ ಬೋಧನಾ ವಿಧಾನದ ಮೂಲಕ ಮಕ್ಕಳನ್ನು ಪರೀಕ್ಷೆಗೆ ಸಜ್ಜಾಗಿಸಬೇಕು. ಸಮುದಾ ಯವೂ ಈ ಕಾರ್ಯಕ್ಕೆ ಸರಕಾರ ಮತ್ತು ಶಿಕ್ಷಣ ಇಲಾಖೆಯ ಜತೆಗೆ ಕೈಜೋಡಿಸಬೇಕು. ಶೈಕ್ಷಣಿಕ ವಿಚಾರವಾಗಿ ಶಿಕ್ಷಣ ಇಲಾಖೆ ಎಲ್ಲ ರೀತಿ ಯಲ್ಲೂ ಸನ್ನದ್ಧವಾಗಿದೆ. ಇಂದಿನ ಅಗತ್ಯಕ್ಕೆ ಅನುಗುಣವಾಗಿ ಭೌತಿಕ ಸೌಲಭ್ಯಗಳಾದ ಮಾಸ್ಕ್, ಸ್ಯಾನಿಟೈಸರ್‌, ಸ್ಕ್ರೀನಿಂಗ್‌ ಮೆಷಿನ್‌, ಕುಡಿಯಲು ಬಿಸಿನೀರಿನ ವ್ಯವಸ್ಥೆ ಹೀಗೆ ಶಾಲಾ ಮಕ್ಕಳ ಪರಿಸರ ಶುಚಿತ್ವ ಕಾಪಾಡುವ ಕಾರ್ಯ ಸ್ಥಳೀಯವಾಗಿ ಸಮುದಾಯದ ಪಾಲ್ಗೊಳ್ಳುವಿಕೆಯಿಂದ ನಡೆಯಬೇಕಿದೆ.

ಒಟ್ಟಾರೆಯಾಗಿ ರಾಜ್ಯ ಸರಕಾರ ಕೊರೊನಾ ಬಿಕ್ಕಟ್ಟಿನ ನಡುವೆ ಶೈಕ್ಷಣಿಕ ಚಟುವಟಿಕೆ ಚುರುಕುಗೊಳಿಸುವ ಎಲ್ಲ ಕಾರ್ಯ ಸಮರ್ಪಕವಾಗಿ ಮಾಡುತ್ತಿದೆ. ಇದನ್ನು ಇನ್ನಷ್ಟು ಗಟ್ಟಿಗೊಳಿಸಿ, ಮಕ್ಕಳ ಶೈಕ್ಷಣಿಕ ಭವಿಷ್ಯ ಉಜ್ವಲಗೊಳಿಸುವ ಮಹತ್ತರ ಜವಾಬ್ದಾರಿ ಶಿಕ್ಷಣ ಇಲಾಖೆ, ಶಿಕ್ಷಕರು, ಪಾಲಕ, ಪೋಷಕರು ಹಾಗೂ ಸಮುದಾಯದ ಮೇಲಿದೆ.

Advertisement

Udayavani is now on Telegram. Click here to join our channel and stay updated with the latest news.

Next