Advertisement

ಆನ್‌ಲೈನ್‌ನಲ್ಲಿ ಮೋಸ ಹೋಗುತ್ತಿರುವವರಲ್ಲಿ ಶಿಕ್ಷಿತರೇ ಹೆಚ್ಚು

12:17 PM Mar 21, 2023 | Team Udayavani |

ನೆಲಮಂಗಲ: ಮೊಬೈಲ್‌ ಹಾಗೂ ಫೇಸ್‌ಬುಕ್‌ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಿತರಾದವರೊಂದಿಗೆ ಸಲುಗೆ ಒಳ್ಳೆಯದಲ್ಲ, ಹಾಗೂ ಅವರೊಂದಿಗಿನ ವ್ಯವಹಾರ ಮತ್ತಿತರ ವಿಶ್ವಾಸಗಳಿಂದ ಮೋಸ ಹೋಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಈ ನಿಟ್ಟಿನಲ್ಲಿ ಮೋಸಕ್ಕೆ ಒಳಗಾಗುತ್ತಿರುವವರಲ್ಲಿ ವಿದ್ಯಾವಂತರೆ ಹೆಚ್ಚು ಎಂದು ನಗರ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಎಸ್‌.ಡಿ.ಶಶಿಧರ್‌ ಅಭಿಪ್ರಾಯಪಟ್ಟರು.

Advertisement

ನಗರದ ವಿಜಯನಗರ ಬಡಾವಣೆಯಲ್ಲಿ ನಗರ ಪೊಲೀಸ್‌ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ 5ನೇ ಬೀಟ್‌ ಸಭೆಯನ್ನುದ್ದೇಶಿಸಿ ಮಾತನಾಡಿ, ಹಾದಿಬೀದಿ ಹಾಗೂ ರಸ್ತೆಬದಿಗಳಲ್ಲಿ ಸಿಮ್‌ ಕಾರ್ಡ್‌ಗಳನ್ನು ಮಾರಾಟ ಮಾಡುತ್ತಿರುವ ಕಾರಣದಿಂದಾಗಿ ಆನ್‌ ಲೈನ್‌ಗಳಲ್ಲಿ ಮೋಸದ ಪ್ರಕರಣಗಳು ಹೆಚ್ಚಾಗುತ್ತಿದೆ. ಮಿಲಿಟರಿ ಅಧಿಕಾರಿಗಳ ಸೋಗಿನಲ್ಲಿ ಹಾಗೂ ಹೊರದೇಶಗಳಿಗೆ ಹೋಗುತ್ತಿದ್ದೇವೆಂಬ ನೆಪಗಳನ್ನು ಹೇಳಿಕೊಂಡು ಬೆಲೆ ಬಾಳುವ ವಸ್ತುಗಳನ್ನು ಮಾರಾಟ ಮಾಡು ವುದಾಗಿ ಹೇಳಿ ನಂಬಿಸಿ ಆನ್‌ಲೈನ್‌ನಲ್ಲಿ ಮೋಸ ಮಾಡುತ್ತಿದ್ದಾರೆ. ಅವರುಗಳಿಗೆ ಮಾರುಹೋಗುತ್ತಿರುವವರಲ್ಲಿ ವಿದ್ಯಾವಂತರೆ ಹೆಚ್ಚಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೊಡೆದಾಟ, ಬಡಿದಾಟ ಹಾಗೂ ರೌಡಿಸಂಗಳಿಗಿಂತಲೂ ಹೆಚ್ಚಾಗಿ ಆನ್‌ಲೈನ್‌ ಮೋಸದ ಪ್ರಕರಣಗಳೇ ಬೆಳಕಿಗೆ ಬರುತ್ತಿರುವುದು ಬೇಸರದ ಸಂಗತಿ, ಇಂತಹ ಸಂದರ್ಭದಲ್ಲಿ ಯಾರೂ ಸಹ ಅಂಜಿಕೆ ಪಟ್ಟುಕೊಳ್ಳದೆ ಸಮೀಪದ ಪೊಲೀಸ್‌ ಠಾಣೆ ಅಥವಾ ಸೈಬರ್‌ ಕ್ರೈಂ ಪೊಲೀಸರಿಗೆ ದೂರು ನೀಡಬೇಕು, ತಮ್ಮ ನೆರೆಹೊರೆಯಲ್ಲಿ ಸಮಸ್ಯೆಗಳು ಎದುರಾದಾಗ ಅಥವಾ ಸಮಾಜದಲ್ಲಿ ಗಲಾಟೆ, ಗದ್ದಲಗಳು ನಡೆಯುತ್ತಿದ್ದರೆ 112ಗೆ ಕರೆಮಾಡಿ ಮಾಹಿತಿ ನೀಡಿ, ಬೀಟ್‌ ವ್ಯವಸ್ಥೆಯನ್ನು ಜನಸ್ನೇಹಿ ಪೊಲೀಸ್‌ ವ್ಯವಸ್ಥೆಗಾಗಿ ಜಾರಿಗೆ ತರಲಾಗಿದೆ ಎಂದರು.

ಅಕ್ರಮ ಚಟುವಟಿಕೆ ಕಂಡರೆ ಪೊಲೀಸರಿಗೆ ಮಾಹಿತಿ ನೀಡಿ: ಪೊಲೀಸರು ಎಂದ ಕೂಡಲೆ ದೂರಹೋಗುವ ಬದಲಿಗೆ ಅವರೊಂದಿಗೆ ಮಾಹಿತಿಗಳನ್ನು ಹಂಚಿಕೊಂಡಾಗ ಮಾತ್ರ ತಮ್ಮ ನೆರೆಹೊರೆ ಶಾಂತಿಯುತವಾಗಿರಲು ಸಾಧ್ಯವಾಗುತ್ತದೆ. ಪೋಷಕರು ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ದ್ವಿಚಕ್ರ ಹಾಗೂ ಮತ್ತಿತರ ವಾಹನಗಳನ್ನು ಚಲಾಯಿಸಲು ವಾಹನಗಳನ್ನು ನೀಡಿದರೆ ವಾಹನ ಚಲಾಯಿಸುವ ಮಕ್ಕಳ ಪೋಷಕರು ಅಥವಾ ವಾಹನ ಮಾಲಿಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ಆದ್ದರಿಂದ ಎದುರಾಗುವ ಅಪಘಾತಗಳನ್ನು ತಡೆಹಿಡಿಯುವ ಸಲುವಾಗಿ ಕಾಳಜಿಯನ್ನು ವಹಿಸಬೇಕು, ಪ್ರಸ್ತುತ ಚುನಾವಣೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು, ಪರಸ್ಪರರಲ್ಲಿ ಪ್ರೀತಿ ಸೌಹಾರ್ಧತೆ ಇದ್ದರೆ ಮಾತ್ರ ಸಮಾಜ ಶಾಂತಿಯುತವಾಗಿರಲು ಸಾಧ್ಯ. ತಮ್ಮ ನೆರೆಹೊರೆಯಲ್ಲಿ ಅಕ್ರಮ ಚಟುವಟಿಕೆಗಳು ಕಂಡು ಬಂದರೆ ಪೊಲೀಸರಿಗೆ ಮಾಹಿತಿ ನೀಡಿ ಎಂದು ಕರೆ ನೀಡಿದರು.

ನಾಗರಿಕರ ಪ್ರಶ್ನೆಗೆ ಇನ್ಸ್‌ಪೆಕ್ಟರ್‌ ಶಶಿಧರ್‌ ಉತ್ತರಿಸಿ, ಈಗಾಗಲೆ ಒಂದು ತಿಂಗಳಲ್ಲಿ 21 ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಕಾನೂನು ಕ್ರಮ ಜರುಗಿಸಲಾಗಿದೆ, ಪಾರ್ಕ್‌ಗಳಿರುವ ಕಡೆಗೆ ಪೊಲೀಸ್‌ ಬೀಟ್‌ ವ್ಯವಸ್ಥೆಯನ್ನು ಹೆಚ್ಚು ಮಾಡುವ ಮೂಲಕ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಶಮಂತ್‌ ಗೌಡ, ವರಲಕ್ಷ್ಮೀ, ಯೋಜನಾಪ್ರಾಧಿಕಾರದ ಮಾಜಿ ಅಧ್ಯಕ್ಷ ಎನ್‌.ಪಿ.ಹೇಮಂತ್‌ಕುಮಾರ್‌, ನಗರಸಭೆ ಸದಸ್ಯ ಚೇತನ್‌ಕುಮಾರ್‌, ವಿಜಯನಗರ ಸೇವಾ ಸಮಿತಿ ಅಧ್ಯಕ್ಷ ರಮೇಶ್‌, ಮುಖಂಡರಾದ ಎಸ್‌ ಎಂಟಿ ಪ್ರಕಾಶ್‌,ವೀರಪ್ಪಾಜಿ, ರಾಮು, ಬೀಟ್‌ ಪೊಲೀಸ್‌ ಹನುಮಂತ ಹಿಪ್ಪರಗಿ, ಬೆಟ್ಟಸ್ವಾಮಿಗೌಡ ಮತ್ತಿರರು ಉಪಸ್ಥಿತರಿದ್ದರು.

Advertisement

ಪಾರ್ಕ್‌ ಸಮಸ್ಯೆ : ಸಭೆಯಲ್ಲಿ ಹಾಜರಿದ್ದ ನಾಗರಿಕರು 5ನೇ ಬೀಟ್‌ನಲ್ಲಿ ಉದ್ಯಾನವನಗಳು ಹೆಚ್ಚಾಗಿದ್ದು, ಇಲ್ಲಿ ಅಪ್ರಾಪ್ತ ಯುವಕ ಯುವತಿಯರು ಶಾಲಾ ಕಾಲೇಜುಗಳಿಗೆ ಹೋಗದೆ ವಿನ ಕಾರಣ ಕುಳಿತು ಕಾಲ ಕಳೆಯುತ್ತಾರೆ, ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುವುದನ್ನು ಹಿರಿಯ ನಾಗರಿಕರು ಕಣ್ಣಲ್ಲಿ ನೋಡಲು ಸಾಧ್ಯವಾಗುವುದಿಲ್ಲ, ಯಾರಾದರೂ ಪ್ರಶ್ನೆ ಮಾಡಿದರೆ ನೀವು ಯಾರು ಕೇಳ್ಳೋಕೆ ಅಂತಾರೆ, ಗಾಂಜಾ ಮತ್ತು ಮಾದಕ ವ್ಯಸನಿಗಳು ಸಹ ದುವರ್ತನೆಗಳಲ್ಲಿ ತೊಡಗಿದ್ದಾರೆ. ಕೂಡಲೇ ಸಂಬಂಧಪಟ್ಟವರು ಸೂಕ್ತ ಕ್ರಮವಹಿಸಬೇಕೆಂದು ಮನವಿ ಮಾಡಿದರು.

ಸಾರ್ವಜನಿಕರು ಜನಸ್ನೇಹಿ ಪೊಲೀಸ್‌ ವ್ಯವಸ್ಥೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು, ನಮ್ಮ ನೆರೆಹೊರೆಯ ಅಕ್ರಗಳ ಕುರಿತಾಗಿ ನಾವುಗಳೆ ಮಾಹಿತಿ ನೀಡಬೇಕು, ನಾಗರಿಕರು ಪ್ರತಿಯೊಂದು ಸಮಸ್ಯೆಯನ್ನು ಪೊಲೀಸರಿಗೆ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕು – ಎನ್‌.ಪಿ.ರಘುನಾಥ್‌, ವಕೀಲ

Advertisement

Udayavani is now on Telegram. Click here to join our channel and stay updated with the latest news.

Next