Advertisement

ಕರಾವಳಿಯಲ್ಲಿ ಎಜುಟೂರಿಸಂ ಚುರುಕು: ಚುನಾವಣೆ ಕಾವಿನ ನಡುವೆಯೂ ಶೈಕ್ಷಣಿಕ ಹಬ್‌ನತ್ತ ಜನರು

11:41 PM May 05, 2023 | Team Udayavani |

ಮಂಗಳೂರು: ರಾಜ್ಯದಲ್ಲಿ ಈ ಬಾರಿ ಚುನಾವಣೆಯ ಅಬ್ಬರದ ನಡುವೆಯೇ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳು ನಡೆದಿವೆ. ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಎಸೆಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಫಲಿತಾಂಶದ ನೀರಿಕ್ಷೆಯಲ್ಲಿದ್ದಾರೆ. ಇನ್ನೊಂದೆಡೆ ಮಕ್ಕಳನ್ನು ಶಾಲೆ, ಕಾಲೇಜಿಗೆ ಸೇರಿಸುವ ವಿಚಾರವಾಗಿ ಪಾಲಕರು ಚಿಂತನೆ ನಡೆಸುತ್ತಿದ್ದಾರೆ. ಶೈಕ್ಷಣಿಕ ಹಬ್‌ ಎಂದು ಪ್ರಸಿದ್ಧಿ ಪಡೆದಿರುವ ಕರಾವಳಿ ಜಿಲ್ಲೆಯಲ್ಲಿರುವ ಶಿಕ್ಷಣ ಸಂಸ್ಥೆಗಳನ್ನು ಅರಸಿಕೊಂಡು ರಾಜ್ಯದ ವಿವಿಧ ಕಡೆಗಳಿಂದ ಬಹುತೇಕರು ಬರುತ್ತಿದ್ದು, ಇದರಿಂದ ಜಿಲ್ಲೆಯಲ್ಲಿ ಶೈಕ್ಷಣಿಕ ಟೂರಿಸಂ ಕ್ಷೇತ್ರವೂ ಚುರುಕು ಪಡೆಯುತ್ತಿದೆ.

Advertisement

ಪಿಯುಸಿ, ಎಂಜಿನಿಯರಿಂಗ್‌, ವೈದ್ಯಕೀಯ, ನರ್ಸಿಂಗ್‌ ಶಿಕ್ಷಣಕ್ಕೆ ಹೆಸರು ಪಡೆದಿದ್ದು, ಜತೆಗೆ ಶಾಲಾ ಶಿಕ್ಷಣ (ಎಸೆಸೆಲ್ಸಿ)ದಲ್ಲೂ ಕರಾವಳಿ ಪ್ರದೇಶ ರಾಜ್ಯದಲ್ಲಿ ಉತ್ತಮ ಸಾಧನೆ ತೋರಿಸುತ್ತಿದೆ. ಈ ಕಾರಣಕ್ಕಾಗಿ ತಮ್ಮ ಮಕ್ಕಳನ್ನು ಇಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ಸೇರಿಸಲು ಹೊರ ಜಿಲ್ಲೆಗಳ, ರಾಜ್ಯಗಳ ಮಂದಿ ಪ್ರತಿವರ್ಷ ಮಂಗಳೂರು, ಉಡುಪಿ, ಮೂಡುಬಿದಿರೆ, ಪುತ್ತೂರು ಮೊದಲಾದೆಡೆಗೆ ಬರುತ್ತಾರೆ. ಅದೇ ರೀತಿ ಈ ಬಾರಿಯೂ ಚುನಾವಣೆಯ ಬಿಸಿಯ ನಡುವೆಯೂ ಶಾಲಾ ಕಾಲೇಜುಗಳ ದಾಖಲಾತಿ ನಡೆಯುತ್ತಿದ್ದು ಎಸೆಸೆಲ್ಸಿ ಫಲಿತಾಂಶ ಪ್ರಕಟವಾದ ತತ್‌ಕ್ಷಣ ಎಜು ಟೂರಿಸಂಗೆ ಇನ್ನಷ್ಟು ಬೂಸ್ಟ್‌ ದೊರೆಯುವ ನಿರೀಕ್ಷೆಯಿದೆ.

ಗರಿಗೆದರಿದ ಪ್ರವಾಸೋದ್ಯಮ ಕ್ಷೇತ್ರ
ಶಿಕ್ಷಣದ ಉದ್ದೇಶಕ್ಕಾಗಿ ಬರುವವರು ಕೇವಲ ಶಿಕ್ಷಣ ಸಂಸ್ಥೆ ಭೇಟಿಗೆಂದೇ ಬರುವುದಿಲ್ಲ. ಜತೆಗೆ ದೇವಸ್ಥಾನ – ಬೀಚ್‌, ಪ್ರವಾಸಿ ತಾಣಗಳಿಗೂ ಭೇಟಿ ನೀಡುತ್ತಾರೆ. ಉಳಿದುಕೊಳ್ಳಲು, ಲಾಡ್ಜ್,
ಊಟ ತಿಂಡಿಗೆ ಹೊಟೇಲ್‌, ಓಡಾಟಕ್ಕೆ ಬಾಡಿಗೆ ವಾಹನಗಳು ಹೀಗೆ ಒಟ್ಟು ಪ್ರವಾಸೋದ್ಯಮ ಕ್ಷೇತ್ರವೇ ಇದರಿಂದ ಚುರುಕು ಪಡೆಯುತ್ತದೆ. ಉರಿ ಬೇಸಗೆಯ ಕಾರಣಕ್ಕಾಗಿ ಸ್ವಲ್ಪ ಮಂಕಾಗಿದ್ದ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರ ಚುನಾವಣೆಯ ನಡುವೆಯೂ ಗರಿಗೆದರಿದೆ ಎನ್ನುತ್ತಾರೆ ಆತಿಥ್ಯ ಕ್ಷೇತ್ರದಲ್ಲಿ ಹೆಸರು ಪಡೆದಿರುವ ನಗರದ ಹೊಟೇಲೊಂದರ ಪ್ರಮುಖರು.

ಪ್ರವಾಸಿ ತಾಣಗಳಲ್ಲಿ ರಷ್‌
ಮಕ್ಕಳ ದಾಖಲಾತಿಗೆ ಬರುವವರು ಕುಟುಂಬ ಸಮೇತರಾಗಿ ಬರುವುದರಿಂದ ಇಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿಕೊಂಡೇ ಹೋಗುತ್ತಿದ್ದಾರೆ. ಜತೆಗೆ ಶಾಲೆಗಳಿಗೆ ರಜೆ ಇರುವುದರಿಂದ ಪ್ರವಾಸಿಗರ ಸಂಖ್ಯೆಯೂ ಕರಾವಳಿಯಲ್ಲಿ ಹೆಚ್ಚಾಗಿದೆ. ಪ್ರವಾಸಿ ಸ್ಥಳಗಳಲ್ಲಿ ಕಂಡು ಬರುವ ಪ್ರತಿ 10 ವಾಹನಗಳ‌ ಪೈಕಿ ಆರು ವಾಹನಗಳು ಹೊರ ಜಿಲ್ಲೆಗಳ ಪ್ರವಾಸಿಗರದ್ದಾಗಿರುತ್ತದೆ. ವಾರಾಂತ್ಯಗಳಂತೂ ಈ ಪ್ರಮಾಣ ಹೆಚ್ಚಾಗುತ್ತದೆ. ಸದ್ಯ ಧಾರ್ಮಿಕ ಕೇಂದ್ರಗಳು, ಬೀಚ್‌, ಪ್ರೇಕ್ಷಣೀಯ ಸ್ಥಳಗಳಲ್ಲಿ ಹೆಚ್ಚಾಗಿದೆ ಎನ್ನುತ್ತಾರೆ ಪ್ರವಾಸೋದ್ಯಮ ಸಂಸ್ಥೆಯೊಂದರ ಮುಖ್ಯಸ್ಥರು.

ಚುನಾವಣೆ ಇದ್ದರೂ ಪ್ರವಾಸೋದ್ಯಮ ಕ್ಷೇತ್ರಕ್ಕೆ ಅದರಿಂದ ಯಾವುದೇ ಪರಿಣಾಮ ಉಂಟಾಗಿಲ್ಲ. ಮಕ್ಕಳಿಗೆ ರಜೆ ಇರುವುದರಿಂದ ಬೀಚ್‌, ದೇವಸ್ಥಾನಗಳಲ್ಲಿ ಹಿಂದಿನ ವರ್ಷಗಳಲ್ಲಿ ಇದ್ದಂತೆ ಜನ ಕಂಡು ಬರುತ್ತಿದ್ದಾರೆ. ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಹೊರ ಜಿಲ್ಲೆಗಳಿಂದ ಬರುವವರ ಸಂಖ್ಯೆಯೂ ಹೆಚ್ಚಾಗಿದೆ.
– ಮಾಣಿಕ್ಯ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರು, ದ.ಕ

Advertisement

– ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next