Advertisement

ವಿಜ್ಞಾನ ವಿಸ್ಮಯ ಅರ್ಥೈಸಿಕೊಂಡರೆ ಸುಲಭ

06:42 PM Feb 14, 2017 | Karthik A |

ಬಹುತೇಕ ವಿದ್ಯಾರ್ಥಿಗಳು ಗಣಿತದಂತೆ ವಿಜ್ಞಾನ ವಿಷಯವೂ ಕಷ್ಟವೆಂದೇ ಭಾವಿಸುತ್ತಾರೆ. ಸರಿಯಾದ ಕ್ರಮದಲ್ಲಿ ಅಧ್ಯಯನ ಮಾಡಿದರೆ ವಿಜ್ಞಾನದಲ್ಲೂ ಹೆಚ್ಚು ಅಂಕಗಳನ್ನು ಗಳಿಸಬಹುದು. ಎಸೆಸೆಲ್ಸಿ ವಿದ್ಯಾರ್ಥಿಗಳು ವಿಜ್ಞಾನ ವಿಷಯದಲ್ಲಿ ಯಾಕೆ ಕಡಿಮೆ ಅಂಕ ಗಳಿಸುತ್ತಿದ್ದಾರೆ. ವಿಜ್ಞಾನದಲ್ಲಿ ಹೆಚ್ಚು ಅಂಕ ಗಳಿಸಲು ಏನು ಮಾಡಬೇಕು ಎಂಬುದರ ಕುರಿತು ಬಂದರು ಕಂದಕ ಬದ್ರಿಯಾ ಸಂಯುಕ್ತ ಪದವಿಪೂರ್ವ ಕಾಲೇಜಿನ (ಪ್ರೌಢಶಾಲಾ ವಿಭಾಗ) ವಿಜ್ಞಾನ ಅಧ್ಯಾಪಕ ಸುಬ್ರಹ್ಮಣ್ಯ ಶಾಸ್ತ್ರಿ ಕೆಲವೊಂದು ಟಿಪ್ಸ್‌ಗಳನ್ನು ನೀಡಿದ್ದಾರೆ. ಇವರು ಸುದೀರ್ಘ‌ 33 ವರ್ಷಗಳ ಸೇವಾನುಭವವನ್ನು ಹೊಂದಿದ್ದಾರೆ.

Advertisement

ವಿಜ್ಞಾನ ಕಠಿನ ಯಾಕೆ ?
ವಿಜ್ಞಾನ ಕಲಿಕೆಗೆ ಪೂರಕವಾದ ಹಾಗೂ ಪ್ರೋತ್ಸಾಹದಾಯಕ ವಾತಾವರಣದ ಕೊರತೆ.
ವಿಜ್ಞಾನವನ್ನು ಭಾಷಾ ಪಾಠಗಳ ಕಲಿಕಾ ಕ್ರಮದಲ್ಲಿ ಅಭ್ಯಾಸ ಮಾಡಲು ಯತ್ನಿಸುವುದು.
ಕೆಳಗಿನ ತರಗತಿಗಳಲ್ಲಿ ಕಲಿಕಾ ಚಟುವಟಿಕೆಗಳು ಮತ್ತು ಪ್ರಾಯೋಗಿಕ ಚಟುವಟಿಕೆಗಳ ಕೊರತೆ. 
ವಿಜ್ಞಾನದ ಪರಿಕಲ್ಪನೆಗಳನ್ನು ಅರ್ಥೈಸುವುದಕ್ಕೆ ಬದಲಾಗಿ ಕಂಠಪಾಠಕ್ಕೆ ಪ್ರಾಶಸ್ತ್ಯ ನೀಡುತ್ತಿರುವುದು. 
ಪ್ರಾಥಮಿಕ ಹಂತದ ಕಲಿಕೆಯಲ್ಲಿ ವಿಜ್ಞಾನ ಹಾಗೂ ಗಣಿತದ ಮೂಲ ಪರಿಕಲ್ಪನೆಗಳ ತಿಳಿವಳಿಕೆ ಸರಿಯಾದ ರೀತಿಯಲ್ಲಿ ಆಗದೇ ಇರುವುದು. 
ಪ್ರೌಢ ಶಿಕ್ಷಣದ ಬಳಿಕ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡದೇ ಇರುವ ನಿರ್ಧಾರವನ್ನು ಹೊಂದಿರುವುದು. 
ನಿರಂತರ ಹಾಗೂ ಪ್ರತಿನಿತ್ಯ ಅಗತ್ಯವಾದ ಅಭ್ಯಾಸದ ಕೊರತೆ. 
ಒಮ್ಮೆ ವಿಜ್ಞಾನದಲ್ಲಿ ಆಸಕ್ತಿ ಮೂಡಿದರೆ ಅದು ಸುಲಭ ಹಾಗೂ ನಿಮ್ಮಲ್ಲಿ ಅನ್ವೇಷಿಸುವ, ಅನ್ವಯಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದು ಉನ್ನತ ವಿದ್ಯಾಭ್ಯಾಸದ ಹಂತದಲ್ಲಿ ಯಾವುದೇ ವಿಭಾಗದಲ್ಲಿ ಕಲಿತರೂ ಆ ವಿಷಯಗಳಲ್ಲಿ ಮೇಲೆ ಹೇಳಿದ ಎಲ್ಲ ಅಂಶಗಳನ್ನು ತೊಡಗಿಸಿಕೊಳ್ಳಲು ಸಹಾಯಕ. ಸ್ವಲ್ಪ ಆಸಕ್ತಿ ವಹಿಸಿದಲ್ಲಿ ವಿಜ್ಞಾನದಲ್ಲಿ ಕೂಡ ಗಣಿತದಂತೆ ನೂರಕ್ಕೆ ನೂರು ಅಂಕಗಳನ್ನು ಗಳಿಸುವುದು ಕಷ್ಟವಲ್ಲ. 

ತಯಾರಿ ಹೇಗಿರಬೇಕು ?
1. ಉದ್ದಿಷ್ಠಾನುಸಾರ ಅಂಕ ಹಂಚಿಕೆಯನ್ನು ಗಮನಿಸಿ
ಜ್ಞಾನ           – 16 ಅಂಕಗಳು
ಅರ್ಥೈಸುವಿಕೆ – 32 ಅಂಕಗಳು
ಅನ್ವಯ        – 16 ಅಂಕಗಳು
ಕೌಶಲ         – 16 ಅಂಕಗಳು
ಒಟ್ಟು 80 ಅಂಕಗಳು

2. ಘಟಕಾನುಸಾರ ಅಂಕ ಹಂಚಿಕೆ
ಭೌತಶಾಸ್ತ್ರ         – 25 ಅಂಕಗಳು
ರಸಾಯನ ಶಾಸ್ತ್ರ – 27 ಅಂಕಗಳು
ಜೀವಶಾಸ್ತ್ರ         – 28 ಅಂಕಗಳು
ಒಟ್ಟು 80 ಅಂಕಗಳು

3. ವಿಜ್ಞಾನ ಪಾಠಗಳ ಯಾವುದೇ ಪರಿಕಲ್ಪನೆಯನ್ನು ಬಹು ಆಯ್ಕೆ ಹೊಂದಿಸಿ ಬರೆ, ಕಾರಣ ಕೊಡಿ, ವ್ಯತ್ಯಾಸ  ತಿಳಿ ಅಥವಾ ಅನ್ವಯಿಕ ಪ್ರಶ್ನೆಗಳ ರೂಪದಲ್ಲಿ ಕೇಳಬಹುದು. ಆದ್ದರಿಂದ ಎಲ್ಲ ಪರಿಕಲ್ಪನೆಗಳನ್ನು ಅರ್ಥೈಸಿಕೊಳ್ಳಬೇಕಾಗುತ್ತದೆ. ಪಠ್ಯಪುಸ್ತಕವನ್ನೇ ನಿಧಾನವಾಗಿ ಓದುತ್ತಾ ಮುಖ್ಯವಾದ ವಿಷಯಗಳನ್ನು ಗುರುತು ಹಾಕಿಕೊಳ್ಳಿ. 

Advertisement

4. ಹಳೆಯ ಪ್ರಶ್ನೆ ಪತ್ರಿಕೆಗಳಿಂದ ಪ್ರಶ್ನೆಗಳ ಪುನರಾವರ್ತನೆ ಸಾಧ್ಯತೆ ಯಾವತ್ತೂ ಕಡಿಮೆ. ಹೀಗಾಗಿ ಹೊಸ ರೀತಿಯ ಪ್ರಶ್ನೆಗಳಿಗೆ ಪ್ರಾಮುಖ್ಯ ನೀಡಿ.

5. ಹೊಂದಿಸಿ ಬರೆ ಪ್ರಶ್ನೆಗಳು 4 ಅಂಕಗಳನ್ನು ಹೊಂದಿದ್ದು, ಅವು ಅರ್ಥೈಸುವಿಕೆ ಸ್ವರೂಪದ್ದಾಗಿರುತ್ತವೆ. ಆದ್ದರಿಂದ 4 ಅಥವಾ ಹೆಚ್ಚು ಅಂಕಗಳು ಹಂಚಿಕೆಯಾದ ಹಸಿರು ಸಸ್ಯಗಳು, ಅಂಗಾಂಶಗಳು, ಉಷ್ಣ ಎಂಜಿನ್‌, ಕಾರ್ಬನ್‌ ಸಂಯುಕ್ತಗಳು, ಲೋಹಗಳು, ವಿದ್ಯುತ್‌ ಕಾಂತೀಯ ಪ್ರೇರಣೆ, ವ್ಯೋಮ – ವಿಜ್ಞಾನ ಪಾಠಗಳಿಗೆ ಹೆಚ್ಚಿನ ಗಮನ ನೀಡಿ.

6. ಒಟ್ಟು 16 ಅಂಕಗಳ ಕೌಶಲ ಪ್ರಶ್ನೆಗಳು ಚಿತ್ರಗಳಾಗಿದ್ದು, ಸುಲಭವಾಗಿ ಈ ಅಂಕಗಳನ್ನು ಗಳಿಸಬಹುದು. ಪ್ರತಿ ದಿನ ಒಂದೆರಡು ಚಿತ್ರಗಳ ಅಭ್ಯಾಸ ಮಾಡಿ ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಿ. ಚಿತ್ರಗಳ ಹೋಲಿಕೆ ಮತ್ತು ವ್ಯತ್ಯಾಸಗಳನ್ನು ನಿಖರವಾಗಿ ತಿಳಿದುಕೊಳ್ಳಿ. ತರಗತಿ ಕೋಣೆಗಳಲ್ಲಿ ಹಾಗೂ ಮನೆಯ ಓದುವ ಕೊಠಡಿಗಳಲ್ಲಿ ಚಿತ್ರಗಳನ್ನು ದೊಡ್ಡದಾಗಿ ಬಿಡಿಸಿ ನೇತುಹಾಕಿ.

7. ಚಲನೆ, ಉಷ್ಣ ಎಂಜಿನ್‌, ಶಬ್ದ ವಿದ್ಯುತ್‌ ಕಾಂತೀಯ ಪ್ರೇರಣೆ ಮತ್ತು ಅನಿಲಗಳ ವರ್ತನೆ ಪಾಠಗಳಲ್ಲಿ  ಸರಳ ಸೂತ್ರಗಳನ್ನು ಅನ್ವಯಿಸಿ ಬಿಡಿಸಬಹುದಾದ ಸಮಸ್ಯೆಗಳನ್ನು ಬಿಡಿಸಲು ಕಲಿತರೆ ಸುಲಭವಾಗಿ  4 ಅಂಕಗಳನ್ನು ಗಳಿಸಲು ಸಾಧ್ಯ.

8. ವಿವಿಧ ಪರಿಕಲ್ಪನೆಗಳು ಅವುಗಳ ಅನ್ವಯ ಸಾಧನಗಳಿಗೆ ಸಂಬಂಧಿಸಿ ಹೋಲಿಕೆ ಹಾಗೂ ವ್ಯತ್ಯಾಸಗಳ ಸ್ವರೂಪದ ಪ್ರಶ್ನೆಗಳು ಸಾಮಾನ್ಯವಾಗಿ ನಾಲ್ಕು ಅಂಕಗಳಿಗೆ ಇರುತ್ತವೆ. ಒಟ್ಟು 10ನೇ ತರಗತಿ ಪಠ್ಯದಲ್ಲಿರುವ ಸುಮಾರು 20ರಿಂದ 25 ವ್ಯತ್ಯಾಸ ತಿಳಿಸಿ ಪ್ರಶ್ನೆಗಳ ಗುಂಪನ್ನೇ ತಯಾರಿಸಿಕೊಳ್ಳಿ. ಇದು ಬಹು ಆಯ್ಕೆ, ಕಾರಣ ಕೊಡಿ ಸ್ವರೂಪದ ಪ್ರಶ್ನೆಗಳಿಗೆ ಕೂಡ ಉತ್ತರಿಸಲು ಸಹಾಯಕವಾಗುತ್ತದೆ. 

9. ಅದೇ ರೀತಿ ವಿವಿಧ ಘಟಕಗಳಿಗೆ ಸಂಬಂಧಿಸಿ ಕೇಳಬಹುದಾದ ಪ್ರಶ್ನೆಗಳನ್ನೂ ಒಟ್ಟು ಮಾಡಿಕೊಳ್ಳಿ. ಏಕೆಂದರೆ ಜ್ಞಾನ ಸಂಬಂಧಿ ನೇರ ಪ್ರಶ್ನೆಗಳು ಕೇವಲ 16 ಅಂಕಗಳಿಗೆ ಸೀಮಿತವಾಗಿದ್ದು, 32 ಅಂಕಗಳು ತಿಳಿವಳಿಕೆ ಸ್ವರೂಪದ ಪ್ರಶ್ನೆಗಳಾಗಿರುತ್ತವೆ. 

10. ವಿವಿಧ ಧಾತುಗಳ ಸಂಕೇತ ಹಾಗೂ ಸಂಯೋಗ ಸಾಮರ್ಥ್ಯ ತಿಳಿದಿದ್ದಲ್ಲಿ ಅವುಗಳ ಅಣುಸೂತ್ರ ಬರೆಯುವುದು ಸುಲಭ. ಅಣು ಸೂತ್ರ ತಿಳಿದಿದ್ದಲ್ಲಿ ರಾಸಾಯನಿಕ ಬದಲಾವಣೆಗಳ ಸಮೀಕರಣ ಬರೆದು ಸಮ ತೂಗಿಸಬಹುದು. ರಾಸಾಯನಿಕ ಬದಲಾವಣೆಗಳ ರಾಸಾಯನಿಕ ಸಮೀಕರಣ ಬರೆಯಲು ಕೇಳುವುದು ಸಾಮಾನ್ಯ. ಸ್ವಲ್ಪ ಅಭ್ಯಾಸ ಮಾಡಿದಲ್ಲಿ ಸರಳ ಸಮೀಕರಣಗಳನ್ನು ಬರೆಯಬಹುದು. 

11. ಹೆಚ್ಚಿನ ವಿದ್ಯಾರ್ಥಿಗಳಿಗೆ ಕಷ್ಟವಾಗುವುದು ಆನ್ವಯಿಕ ಸ್ವರೂಪದ ಪ್ರಶ್ನೆಗಳು. ಕಲಿತ ಪರಿಕಲ್ಪನೆಗಳ ಆಧಾರದಲ್ಲಿ ಹೊಸ ಸನ್ನಿವೇಶಗಳಿಗೆ ಆ ಪರಿಕಲ್ಪನೆಗಳನ್ನೇ ಅನ್ವಯಿಸುವ ಸಾಮರ್ಥ್ಯ ಪರೀಕ್ಷೆ ಇದು.

12. ಅನ್ವಯ ಪ್ರಶ್ನೆಗಳನ್ನು ನಿಧಾನವಾಗಿ ಓದಿ, ಅರ್ಥೈಸಿಕೊಳ್ಳಿ. ಯಾವ ಪರಿಕಲ್ಪನೆಯ ಆಧಾರದಲ್ಲಿ ಪ್ರಶ್ನೆಗಳನ್ನು ತಯಾರಿಸಲಾಗಿದೆ ಎಂಬುದನ್ನು ನಿರ್ಧರಿಸಿ ಬಳಿಕ ಆ ಪರಿಕಲ್ಪನೆಯ ಅಥವಾ ತತ್ವದ ಆಧಾರದಲ್ಲಿ ಸಕಾರಣವಾದ ಉತ್ತರ ನೀಡಿ, ನಿಮ್ಮ ಉತ್ತರವನ್ನು ಸಮರ್ಥಿಸಿ. 

13. ನೆನಪಿಡಿ 16 ಅಂಕಗಳಿರುವ ಆನ್ವಯಿಕ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟವಲ್ಲ. ಜ್ಞಾನ, ತಿಳಿವಳಿಕೆ ಹಾಗೂ ತರ್ಕಗಳ ಸಾಮರ್ಥ್ಯದಿಂದ ಸುಲಭವಾಗಿ ಅಂಕಗಳನ್ನು ಪಡೆಯಬಹುದು. 

14. ಪ್ರತಿನಿತ್ಯ ಕನಿಷ್ಠ 10ರಿಂದ 15 ಚಿಕ್ಕ ಚಿಕ್ಕ ಪ್ರಶ್ನೆಗಳನ್ನು ತಯಾರಿಸಿ ಉತ್ತರಗಳನ್ನು ಮನದಟ್ಟು ಮಾಡಿಕೊಳ್ಳಿ. 

15. ಪ್ರಶ್ನೆಗಳನ್ನು ಓದುವಾಗ ಗೊಂದಲ ಮಾಡಿಕೊಳ್ಳಬೇಡಿ. ಏಕೆಂದರೆ ಬಹಳ ಸೂಕ್ಷ್ಮ ವ್ಯತ್ಯಾಸಗಳಿರುವ ವಿಷಯಗಳು ವಿಜ್ಞಾನದಲ್ಲಿರುತ್ತವೆ. ಯಾವುದೋ ಪ್ರಶ್ನೆಗೆ ಬೇರಾವುದೋ ಉತ್ತರ ಬರೆಯುವ ಸಾಧ್ಯತೆ ಇದೆ. 

16. ಪ್ರಶ್ನೆಗಳು ಸರಿಯಾಗಿ ಅರ್ಥವಾಗಿದ್ದು, ಉತ್ತರ ಖಚಿತವಾಗಿ ಗೊತ್ತಿರುವ ಪ್ರಶ್ನೆಗಳು, ಚಿತ್ರಗಳು, ಸುಲಭ ಸಮಸ್ಯೆಗಳನ್ನು ಮೊದಲು ಪ್ರಯತ್ನಿಸಿ. 

17. ಬಹು ಆಯ್ಕೆ ಮತ್ತು ಹೊಂದಿಸಿ ಬರೆ ಪ್ರಶ್ನೆಗಳಲ್ಲಿ ಒಂದೆರಡಕ್ಕೆ ಉತ್ತರ ತಿಳಿಯದಿದ್ದರೂ ಕೊನೆಯಲ್ಲಿ ಯಾವುದಾದರೊಂದು ಆಯ್ಕೆಯನ್ನು ಖಂಡಿತವಾಗಿ ಬರೆಯಿರಿ. ಇನ್ನು ಪರೀಕ್ಷೆಗೆ ಕೆಲವೇ ದಿನಗಳಿದ್ದು, ಏಕಾಗ್ರತೆಯಿಂದ ದಿನಕ್ಕೊಂದು ಗಂಟೆಯಾದರೂ ವಿಜ್ಞಾನವನ್ನು ನಿಧಾನವಾಗಿ ಪರಿಕಲ್ಪನೆಗಳು ಅರ್ಥವಾಗುವಂತೆ ಅಭ್ಯಾಸ ಮಾಡಿ. ಬಳಿಕ ಕಲಿತ ವಿಷಯಗಳನ್ನು ಮೆಲುಕು ಹಾಕಿ ಅಥವಾ ಸಹಪಾಠಿಗಳೊಂದಿಗೆ ಚರ್ಚಿಸಿ. ಇದುವೇ ವಿಜ್ಞಾನವನ್ನು ಸುಲಭಗೊಳಿಸುವ ದಾರಿ.

ಸಂಗ್ರಹ – ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next