Advertisement

ಕರ್ನಾಟಕಕ್ಕೆ ಟೆಸ್ಲಾ: ಇವಿ ವಲಯದ ಕಿರೀಟಕ್ಕೆ ಇನ್ನೊಂದು ಗರಿ

04:20 PM Feb 15, 2021 | Team Udayavani |

ಐಷಾರಾಮಿ ಎಲೆಕ್ಟ್ರಿಕ್‌ ಕಾರುಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಟೆಸ್ಲಾ ಕಂಪನಿ ಕರ್ನಾಟಕದ ಹೆಬ್ಟಾಗಿಲಿನ ಮೂಲಕ ಭಾರತ
ಪ್ರವೇಶಿಸುತ್ತಿರುವುದು ಹೆಮ್ಮೆಯ ವಿಚಾರ. ಸ್ವತಃ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೇ ಈ ವಿಷಯವನ್ನು ಪ್ರಕಟಿಸಿದ್ದಾರೆ. ಈಗಾಗಲೇ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಮಾಡಿರುವ ಕರ್ನಾಟಕಕ್ಕೆ ಈಗ ಆಟೊಮೊಬೈಲ್‌ ಕ್ಷೇತ್ರದಲ್ಲಿ ನೆರೆಯ ರಾಜ್ಯಗಳೊಂದಿಗೆ ಪ್ರಬಲ ಸ್ಪರ್ಧೆ ಒಡ್ಡಲು ಇದೊಂದು ಮಹತ್ವದ ಅವಕಾಶ. ಅದರಲ್ಲೂ ವಿದ್ಯುತ್‌ಚಾಲಿತ ವಾಹನಗಳ (ಇವಿ) ಉತ್ಪಾದನೆ ಕ್ಷೇತ್ರದಲ್ಲಿ ದಾಪುಗಾಲಿಡಲು ಕರ್ನಾಟಕಕ್ಕೆ ಇದೊಂದು ಸುವರ್ಣಾವಕಾಶ.

Advertisement

ಈಗಾಗಲೇ ಟೆಸ್ಲಾ ಇಂಡಿಯಾ ಎಂಬ ಹೆಸರಿನ ಕಂಪೆನಿಯನ್ನು ರೂಪಿಸಿರುವ ಟೆಸ್ಲಾ ಕಂಪೆನಿ, ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿ ತನ್ನ ಕಚೇರಿ
ಆರಂಭಿಸಿದೆ. ಈ ಹಿಂದೆ ಟೆಸ್ಲಾ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರವನ್ನು ಬೆಂಗ ಳೂರಿನಲ್ಲಿ ಆರಂಭಿಸುವುದಾಗಿ ಪ್ರಕಟಿಸಿತ್ತು. ಇದೀಗ ಮುಖ್ಯಮಂತ್ರಿಗಳು ತಯಾರಿಕಾ ಘಟಕವನ್ನು ಕರ್ನಾಟಕದಲ್ಲಿ ಆರಂಭಿಸುವುದಾಗಿ ಪ್ರಕಟಿಸುವುದರಿಂದ ರಾಜ್ಯದ ತಯಾರಿಕಾ ವಲಯಕ್ಕೆ ಹೊಸ ಶಕ್ತಿ ಬಂದಿದೆ.

ಟೆಸ್ಲಾದಂಥ ಜಾಗತಿಕ ಕಂಪನಿ ಕರ್ನಾಟಕ ಪ್ರವೇಶಿಸುತ್ತಿರುವುದು ಸಹಜ ವಾಗಿಯೇ ಜಗತ್ತಿನ ಕಣ್ಣಲ್ಲಿ ನಮ್ಮ ರಾಜ್ಯದ ಮಹತ್ವವನ್ನು ಬಿಂಬಿಸುವಂಥದ್ದು. ಈ ಬಗ್ಗೆ ಹೆಮ್ಮೆ ಪಡುವುದರ ಜತೆಗೆ ರಾಜ್ಯ ಸರ್ಕಾರ ಔದ್ಯಮಿಕ ವಲಯಗಳ ನಿರೀಕ್ಷೆಯನ್ನು ಈಡೇರಿಸುವ ನಿಟ್ಟಿನಲ್ಲಿ ಧಾರಾಳಿತನದ ಹೆಜ್ಜೆ ಇಡಬೇಕಾಗಿದೆ. ಉದ್ಯಮ ಸ್ನೇಹಿ ವಾತಾವರಣ ಸೃಷ್ಟಿ ಮಾಡುವುದರ ಜತೆಗೆ ಸ್ಥಳೀಯರಿಗೆ ಉದ್ಯೋಗ ಅವಕಾಶ ಲಭಿಸುವ ಬಗ್ಗೆ ಸರ್ಕಾರ ಗಮನಹರಿಸಬೇಕಾಗಿದೆ.

ಈಚೆಗೆ ಬಿಡದಿಯ ಟೊಯೊಟಾ ಘಟಕ ಹಾಗೂ ಕೋಲಾರದ ವಿಸ್ತ್ರಾನ್‌ ಘಟಕಗಳಲ್ಲಿ ನಡೆದ ಬೆಳವಣಿಗೆಗಳು ಉದ್ಯಮ ವಲಯದಲ್ಲಿ ರಾಜ್ಯದ
ಹೆಸರಿಗೆ ಮಸಿ ಬಳಿದಿವೆ ಎನ್ನುವುದರಲ್ಲಿ ಅನುಮಾನವಿಲ್ಲ. ಉದ್ಯಮ ವಲಯದ ನಿರೀಕ್ಷೆ ಮತ್ತು ಸ್ಥಳೀಯರ ಬೇಡಿಕೆಗಳನ್ನು ಸಮತೋಲನದಿಂದ
ತೂಗಿಸಿಕೊಂಡು ಹೋದರೆ ಮಾತ್ರ ಕರ್ನಾಟಕ ಉದ್ಯಮ ಸ್ನೇಹಿ ಎಂಬ ತನ್ನ ಹೆಗ್ಗಳಿಕೆಯನ್ನು ಉಳಿಸಿಕೊಳ್ಳಬಹುದು ಮತ್ತು ವಿಸ್ತರಿಸಿಕೊಳ್ಳಬಹುದು.

ವಾಹನ ಉದ್ಯಮದಲ್ಲಿ ದೇಶದಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದ್ದು, ನೆರೆಯ ತಮಿಳುನಾಡು ಮತ್ತು ಆಂಧ್ರಪ್ರದೇಶ-ತೆಲಂಗಾಣ ಸರ್ಕಾರದ ಜತೆ ನಿರಂತರವಾಗಿ ಸ್ಪರ್ಧೆ ಒಡ್ಡುತ್ತಲೇ ಇದೆ. ಅದರಲ್ಲೂ ವಿದ್ಯುತ್‌ಚಾಲಿತ ವಾಹನಗಳ (ಇವಿ) ತಯಾರಿಕಾ ವಲಯದಲ್ಲಿ ಕರ್ನಾಟಕ ಹಿಂದಿನಿಂದಲೂ ತನ್ನ ಪ್ರಾಬಲ್ಯವನ್ನು ಪ್ರದರ್ಶಿಸಿಕೊಂಡೇ ಇದ್ದು, ರೇವಾ ಘಟಕ ರಾಜ್ಯದಲ್ಲಿ ಆರಂಭವಾಗಿದ್ದು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಈಗಲಂತೂ ವಿದ್ಯುತ್‌ ಚಾಲಿತ ವಾಹನಗಳು ಮತ್ತು ಅವುಗಳ ಬಿಡಿಭಾಗಗಳ ಉತ್ಪಾದನಾ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಮಹೀಂದ್ರಾ ಎಲೆಕ್ಟ್ರಿಕ್‌, ಏಥರ್‌, ಓಲಾ ಎಲೆಕ್ಟ್ರಿಕ್‌ ಮತ್ತು ಬೋಷ್‌ ಕಂಪನಿಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ. ಇದಕ್ಕೆ ಪ್ರಮುಖ ಉತ್ತೇಜನ ಎಂದರೆ ಸರ್ಕಾರದ ಮುಕ್ತ ನಿಲುವು. ಇಡೀ ದೇಶದಲ್ಲಿ ವಿದ್ಯುತ್‌ಚಾಲಿತ ವಾಹನಗಳ ವಲಯಕ್ಕೆ ಪ್ರತ್ಯೇಕ
ನೀತಿ ರೂಪಿಸಿದ ಮೊದಲ ರಾಜ್ಯ ಕರ್ನಾಟಕ. ಇವಿ ವಲಯದಲ್ಲಿ ಕರ್ನಾಟಕವನ್ನು ಕೇಂದ್ರ ಬಿಂದುವಾಗಿಸಬೇಕು ಎಂಬ ಸ್ಪಷ್ಟ ಆಶಯದೊಂದಿಗೆ ರೂಪಿತವಾಗಿರುವ ಈ ನೀತಿಯನ್ನು ಸಮಗ್ರವಾಗಿ ಹಾಗೂ ಪರಿಣಾಮ ಕಾರಿಯಾಗಿ ಜಾರಿಗೆ ತರುವ ಹೊಣೆ ಸರ್ಕಾರದ್ದಾಗಿದೆ. ಹಾಗಿದ್ದಾಗ ಮಾತ್ರ ನಾವು ನೆರೆಯ ರಾಜ್ಯಗಳ ಸ್ಪರ್ಧೆಯನ್ನು ಹಿಂದೂಡಿ, ಇವಿ ಕ್ಷೇತ್ರದಲ್ಲಿ ಕರ್ನಾಟಕವೇ ಮುಂದೆ ಎಂಬ ಕಿರೀಟವನ್ನು ನಮ್ಮದಾಗಿಸಿಕೊಳ್ಳಬಹುದು.

Advertisement

ಓದಿ : ಪ್ರತಿ ಹಳ್ಳಿಯಲ್ಲೂ ರೈತರು ರಚನಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next