Advertisement

ಸಂಪಾದಕೀಯ : ರಾಜಕೀಯ ಪಕ್ಷಗಳ ಇಬ್ಬಂದಿತನ –ಪ್ರಬುದ್ಧತೆ ಅಲ್ಲ

12:23 AM Mar 25, 2023 | Team Udayavani |

ಕ್ರಿಮಿನಲ್‌ ಮಾನಹಾನಿ ಪ್ರಕರಣವೊಂದಕ್ಕೆ ಸಂಬಂಧಿಸಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಸೂರತ್‌ನ ನ್ಯಾಯಾಲಯ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಬೆನ್ನಲ್ಲೇ ಅವರನ್ನು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಿ ಲೋಕಸಭಾ ಸಚಿವಾಲಯದ ಮಹಾಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಈ ವಿಷಯವಾಗಿ ಕೇಂದ್ರದಲ್ಲಿನ ಬಿಜೆಪಿ ಸರಕಾರದ ವಿರುದ್ಧ ವಿಪಕ್ಷಗಳು ಮುಗಿಬಿದ್ದಿವೆ.

Advertisement

ಕೇಂದ್ರ ಸರಕಾರದ ಒತ್ತಡದ ಮೇಲೆಯೇ ಲೋಕಸಭೆ ಕಾರ್ಯದರ್ಶಿಗಳು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಆರೋಪಿಸಿವೆ. ಇದಕ್ಕೆ ತಿರುಗೇಟು ನೀಡಿರುವ ಆಡಳಿತಾರೂಢ ಬಿಜೆಪಿ, ಜನತಾ ಪ್ರಾತಿನಿಧ್ಯ ಕಾಯ್ದೆಯ ನಿಯಮಾವಳಿಗಳಿಗೆ ಅ‌ನುಸಾರವಾಗಿಯೇ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. 2013ರಲ್ಲಿ ಸುಪ್ರೀಂ ಕೋರ್ಟ್‌ ಇದೇ ಅಭಿಪ್ರಾಯ ವ್ಯಕ್ತಪಡಿಸಿದಾಗ ಸ್ವತಃ ರಾಹುಲ್‌ ಗಾಂಧಿ ಕೂಡ ಸುಪ್ರೀಂ ಆದೇಶದ ಪರ ಬ್ಯಾಟ್‌ ಬೀಸಿದ್ದರು ಎಂಬುದನ್ನು ಬಿಜೆಪಿ ನಾಯಕರು ಜ್ಞಾಪಿಸಿದ್ದಾರೆ.

ರಾಹುಲ್‌ರನ್ನು ಸಂಸತ್‌ ಸದಸ್ಯತ್ವದಿಂದ ಅನರ್ಹಗೊಳಿಸಿದ ಕ್ರಮದ ವಿರುದ್ಧ ಕೇಂದ್ರದಲ್ಲಿನ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಹೊರಗಿರುವ ಎಲ್ಲ ವಿಪಕ್ಷಗಳೂ ದನಿ ಎತ್ತಿದ್ದು, ರಾಹುಲ್‌ ಅವರಿಗೆ ಬೆಂಬಲವನ್ನು ಸಾರಿವೆ. ಕಾಂಗ್ರೆಸ್‌ ಮತ್ತು ಬಿಜೆಪಿ ಎರಡರಿಂದಲೂ ಅಂತರ ಕಾಯ್ದುಕೊಳ್ಳುತ್ತಲೇ ಬಂದಿದ್ದ ಕೆಲವೊಂದು ಪಕ್ಷಗಳು ಕೂಡ ಇದೀಗ ರಾಹುಲ್‌ರ ಬೆನ್ನಿಗೆ ನಿಂತಿವೆ. ಶುಕ್ರವಾರದ ಈ ಎಲ್ಲ ಬೆಳವಣಿಗೆಗಳು ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಪೂರ್ವಭಾವಿಯಾಗಿ ದೇಶದಲ್ಲಿ ಸದ್ಯ ನಡೆಯುತ್ತಿರುವ ರಾಜಕೀಯ ಸಂಘರ್ಷವನ್ನು ಮತ್ತೂಂದು ಮಜಲಿಗೆ ಕೊಂಡೊಯ್ದಿವೆ.

ಇದೇ ವೇಳೆ ಈ ಹಿಂದಿನಿಂದಲೂ ಕಾಂಗ್ರೆಸ್‌ ಸಹಿತ ಬಹುತೇಕ ವಿಪಕ್ಷಗಳು ಕಳೆದ ಹಲವಾರು ವರ್ಷಗಳಿಂದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ತನ್ನ ವಿರೋಧಿಗಳನ್ನು ಮಟ್ಟಹಾಕಲು ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿ ಕೊಳ್ಳುತ್ತಿದೆ ಎಂದು ಆರೋಪಿಸುತ್ತಲೇ ಬಂದಿವೆ. ಸಿಬಿಐ, ಜಾರಿ ನಿರ್ದೇಶನಾಲಯ ದಂತಹ ಸ್ವಾಯತ್ತ ತನಿಖಾ ಸಂಸ್ಥೆಗಳನ್ನು ವಿಪಕ್ಷಗಳ ನಾಯಕರ ವಿರುದ್ಧ ಛೂ ಬಿಟ್ಟು ಅವರೆಲ್ಲರನ್ನೂ ಹಣಿಯುವ ಕಾರ್ಯದಲ್ಲಿ ಸರಕಾರ ನಿರತವಾಗಿದೆ ಎಂಬ ಗಂಭೀರ ಆರೋಪ ವಿಪಕ್ಷಗಳದ್ದಾಗಿದೆ. ಕೇಂದ್ರದ ವಿರುದ್ಧದ ಈ ಆರೋಪವನ್ನು ಮುಂದಿಟ್ಟು 14 ವಿಪಕ್ಷಗಳು ಶುಕ್ರವಾರ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿವೆ. ತನಿಖಾ ಸಂಸ್ಥೆಗಳು ಕೇಂದ್ರ ಸರಕಾರದ ಕೈಗೊಂಬೆಗಳಾಗಿ ಮಾರ್ಪಟ್ಟಿದ್ದು ಬಿಜೆಪಿ ವಿರೋಧಿಗಳನ್ನೇ ಗುರಿಯಾಗಿಸಿಕೊಂಡಿವೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಈ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿರುವ ಶೇ. 95ರಷ್ಟು ಪ್ರಕರಣಗಳು ವಿಪಕ್ಷ ನಾಯಕರ ವಿರುದ್ಧವಾದವುಗಳಾಗಿವೆ. ಯಾವುದೇ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಕೇಂದ್ರ ತನಿಖಾ ಸಂಸ್ಥೆಗಳು ಬಂಧನದಪೂರ್ವ ಮತ್ತು ಬಂಧನದ ಬಳಿಕ ಅನುಸರಿಸಬೇಕಾದ ಯಾವುದೇ ಮಾರ್ಗಸೂಚಿಗಳನ್ನು ಸ್ಪಷ್ಟಪಡಿಸುವಂತೆ ಅರ್ಜಿಯಲ್ಲಿ ಆಗ್ರಹಿಸಲಾಗಿದೆ. ಆದರೆ ವಿಪಕ್ಷಗಳ ಈ ಆರೋಪವನ್ನು ಬಿಜೆಪಿ ತಳ್ಳಿಹಾಕಿದ್ದು ಇದರಲ್ಲಿ ಹುರುಳಿಲ್ಲ ಎಂದು ವಾದಿಸಿದೆ. ವಿಪಕ್ಷಗಳು ಸಲ್ಲಿಸಿರುವ ಅರ್ಜಿಯನ್ನು ಎ. 5ರಂದು ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್‌ ತಿಳಿಸಿದೆ. ಈ ಬೆಳವಣಿಗೆ ಆಡಳಿತ ಮತ್ತು ವಿಪಕ್ಷಗಳ ನಡುವಣ ಗುದ್ದಾಟಕ್ಕೆ ಮತ್ತೂಂದು ತಿರುವು ನೀಡಿದೆ.

Advertisement

ಪ್ರಸಕ್ತ ವರ್ಷ ದೇಶದ ವಿವಿಧ ರಾಜ್ಯಗಳ ವಿಧಾನಸಭೆಗಳಿಗೆ ಮತ್ತು ಮುಂದಿನ ವರ್ಷ ಲೋಕಸಭೆಗೆ ಚುನಾವಣೆ ನಡೆಯಲಿರುವುದರಿಂದ ಎಲ್ಲ ಪಕ್ಷಗಳೂ ಯುದ್ಧಭೂಮಿಯನ್ನು ಹದಗೊಳಿಸುವ ಕಾರ್ಯದಲ್ಲಿ ನಿರತವಾಗಿವೆ. ಪಕ್ಷಗಳು ತಮ್ಮ ತಂತ್ರಗಾರಿಕೆಯನ್ನು ಕೇವಲ ಚುನಾವಣೆಗಷ್ಟೇ ಸೀಮಿತಗೊಳಿಸದೆ ಅದನ್ನು ರಾಜಕೀಯ ಸಂಘರ್ಷದ ಸ್ಥಿತಿಗೆ ಕೊಂಡೊಯ್ಯುತ್ತಿರುವುದು ಆತಂಕಕಾರಿ ಬೆಳವಣಿಗೆ.

ಯಾವುದೇ ಪಕ್ಷವಿರಬಹುದು; ವಿಪಕ್ಷದಲ್ಲಿದ್ದಾಗ ಒಂದು ನಡೆ, ಆಡಳಿತದಲ್ಲಿದ್ದಾಗ ಇನ್ನೊಂದು ನಡೆಯಾದರೆ ಇಂತಹ ಸನ್ನಿವೇಶ ನಿರ್ಮಾಣ ವಾಗುತ್ತದೆ. ವಿಪಕ್ಷದಲ್ಲಿದ್ದಾಗ ಆಡಳಿತ ಪಕ್ಷದ ತಪ್ಪುಗಳನ್ನು ಎತ್ತಿತೋರಿಸಿ, ಆಡಳಿತಕ್ಕೆ ಬಂದಾಗ ಅದೇ ತಪ್ಪು, ತಂತ್ರಗಾರಿಕೆ ಅನುಸರಿಸುವುದೇ ಅಲ್ಲದೆ ಅದನ್ನು ಸಮರ್ಥಿ ಸಿಕೊಳ್ಳುವ ಇಬ್ಬಂದಿತನ ಪ್ರದರ್ಶಿಸಿದರೆ ಅದೆಂದೂ ಪ್ರಬುದ್ಧ ಮತ್ತು ಪಕ್ವ ರಾಜಕಾರಣ ಎಂದೆನಿಸಲಾರದು. ಇದನ್ನು ಆಡಳಿತ ಮತ್ತು ವಿಪಕ್ಷಗಳೆರಡೂ ಮೊದಲು ಅರ್ಥೈಸಿಕೊಳ್ಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next