ಕೋಲ್ಕತಾ : ಐಪಿಎಲ್ ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಪಂದ್ಯಗಳಿಗೆ ಈಡನ್ ಗಾರ್ಡನ್ಸ್ ಕ್ರೀಡಾಂಗಣ ಸಜ್ಜಾಗಿದ್ದು, ಟಿಕೆಟ್ ಗಳಿಗೆ ಭಾರಿ ಬೇಡಿಕೆ ಕಂಡು ಬಂದಿದೆ.
ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಅವಿಶೇಕ್ ದಾಲ್ಮಿಯಾ ಅವರು ಎಎನ್ ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ, ನಾವು 3 ವರ್ಷಗಳ ನಂತರ ಐಪಿಎಲ್ ಪಂದ್ಯಗಳನ್ನು ಆಯೋಜಿಸುತ್ತಿದ್ದೇವೆ. ಐಪಿಎಲ್ ಪಂದ್ಯಗಳ ಟಿಕೆಟ್‌ಗೆ ಹೆಚ್ಚಿನ ಬೇಡಿಕೆಯಿದೆ. ಯಾವುದೇ ಕೋವಿಡ್ ನಿರ್ಬಂಧಗಳಿಲ್ಲ, ನಾವು ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಫುಲ್ ಹೌಸ್ ಗಾಗಿ ಎದುರು ನೋಡುತ್ತೇವೆ ಎಂದು ಹೇಳಿದ್ದಾರೆ.
ಕ್ರೀಡಾಂಗಣ ಸಿದ್ಧವಾಗಿಲ್ಲ ಎನ್ನುವುದು ಸರಿಯಲ್ಲ. ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ 2021 ರಲ್ಲಿ ನ್ಯೂಜಿಲ್ಯಾಂಡ್ ಮತ್ತು 2022 ರಲ್ಲಿ ವೆಸ್ಟ್ ಇಂಡೀಸ್ ಎದುರು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಾಗಿದೆ ಎಂದರು.
ಆಟಗಾರರಿಗೆ ಬಯೋ ಬಬಲ್ ಇರುತ್ತದೆ ಆದರೂ ಸರಕಾರ ಯಾವುದೇ ಕೋವಿಡ್ ನಿರ್ಬಂಧಗಳನ್ನು ವಿಧಿಸುತ್ತಿಲ್ಲ. ನಾವು ಪೂರ್ಣ ಪ್ರಮಾಣದ ಪ್ರೇಕ್ಷಕರನ್ನು ನೀರಿಕ್ಷಿಸುತ್ತಿದ್ದೇವೆ, ಅದಕ್ಕೆ ಯಾವುದೇ ನಿರ್ಬಂಧಗಳಿಲ್ಲ ಎಂದು ಹೇಳಿದರು.
ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಮೇ 24 ರಂದು ಕ್ವಾಲಿಫೈಯರ್ 1 ಮತ್ತು ಮೇ 25 ರಂದು ಎಲಿಮಿನೇಟರ್ ಪಂದ್ಯ ನಡೆಯಲಿವೆ.
ಅಹಮದಾಬಾದ್ ನಲ್ಲಿ ಮೇ 27 ರಂದು ಕ್ವಾಲಿಫೈಯರ್ 2 ಮತ್ತು ಮೇ 29 ರಂದು ಭರ್ಜರಿ ಫೈನಲ್ ಪಂದ್ಯ ನಡೆಯಲಿದೆ.