ಹೊಸದಿಲ್ಲಿ: ಜಾರಿ ನಿರ್ದೇಶನಾಲಯವು (ಇಡಿ) ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ನಾಲ್ಕನೇ ಸಮನ್ಸ್ ಕಳುಹಿಸಿದ್ದು, ಜನವರಿ 18 ರಂದು ಕೇಂದ್ರ ತನಿಖಾ ಸಂಸ್ಥೆಯ ಮುಂದೆ ಹಾಜರಾಗುವಂತೆ ಕೇಳಿದೆ ಎಂದು ಮೂಲಗಳು ತಿಳಿಸಿವೆ.
ದೆಹಲಿಯ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿ ಸಮನ್ಸ್ ನೀಡಲಾಗಿದೆ. ಮದ್ಯದ ವ್ಯಾಪಾರದಲ್ಲಿ ಭ್ರಷ್ಟಾಚಾರ ಮತ್ತು ಮನಿ ಲಾಂಡರಿಂಗ್ ಆರೋಪಗಳನ್ನು ಒಳಗೊಂಡಿದೆ.
ಈ ಪ್ರಕರಣದಲ್ಲಿ ಇಡಿ ನಾಲ್ಕನೇ ಬಾರಿಗೆ ಕೇಜ್ರಿವಾಲ್ ಅವರಿಗೆ ಸಮನ್ಸ್ ನೀಡಿದೆ. ಕಾನೂನು ಮತ್ತು ಕಾರ್ಯವಿಧಾನದ ಸಮಸ್ಯೆಗಳನ್ನು ಉಲ್ಲೇಖಿಸಿ ದೆಹಲಿ ಸಿಎಂ ಹಿಂದಿನ ಮೂರು ಸಮನ್ಸ್ ಗಳನ್ನು ಪಾಲಿಸಿಲ್ಲ. ಇ.ಡಿ ಪಕ್ಷಪಾತಿಯಾಗಿದೆ ಮತ್ತು ರಾಜಕೀಯ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
ಕಳೆದ ವರ್ಷ ನವೆಂಬರ್ 2 ರಂದು ಇ.ಡಿ ಮೊದಲ ಬಾರಿಗೆ ಕೇಜ್ರಿವಾಲ್ ಅವರಿಗೆ ಸಮನ್ಸ್ ನೀಡಿತ್ತು, ಆದರೆ ಅವರು ಹಾಜರಾಗಲಿಲ್ಲ. ನಂತರ ಡಿಸೆಂಬರ್ 18 ರಂದು ಎರಡನೇ ಸಮನ್ಸ್ ನೀಡಿತ್ತು, ಡಿಸೆಂಬರ್ 21 ರಂದು ತನಿಖೆಗೆ ಬರುವಂತೆ ಕೇಳಿಕೊಂಡಿತು.
ಡಿಸೆಂಬರ್ 22 ರಂದು ಇ.ಡಿ ಮೂರನೇ ಸಮನ್ಸ್ ಜಾರಿ ಮಾಡಿದ್ದು, ಕೇಜ್ರಿವಾಲ್ ಈ ವರ್ಷದ ಜನವರಿ 3 ರಂದು ಏಜೆನ್ಸಿಯ ಮುಂದೆ ಹಾಜರಾಗುವಂತೆ ಸೂಚಿಸಿತ್ತು.