Advertisement

ಎಸ್‌ಎಸ್‌ಸಿ ಹಗರಣ: ಬಗೆದಷ್ಟೂ ಸಿಗುತ್ತಿದೆ ಸಂಪತ್ತು

08:24 PM Jul 29, 2022 | Team Udayavani |

ಕೋಲ್ಕತಾ: ಶಿಕ್ಷಕರ ನೇಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಟಿಎಂಸಿ ಮುಖಂಡ ಪಾರ್ಥ ಚಟರ್ಜಿಯ ನಿಕಟವರ್ತಿ ಅರ್ಪಿತಾ ಮುಖರ್ಜಿಯ ಮತ್ತೂಂದು ಅಪಾರ್ಟ್‌ಮೆಂಟ್‌ ಮೇಲೆ ದಾಳಿ ನಡೆಸಿದೆ. ಅಲ್ಲಿಯೂ ಕೂಡ 28 ಕೋಟಿ ರೂ.ನಗದು, ದಾಖಲೆಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement

ಫ್ಲಾಟ್‌ನ ಬಾಗಿಲಿಗೆ ಬೀಗ ಹಾಕಿದ್ದರಿಂದ ಹಾಗೂ ಅದರ ಕೀಲಿ ಕೈ ಸಿಗದೇ ಇದ್ದುದರಿಂದ ಕೇಂದ್ರ ಸರ್ಕಾರದ ಅಧಿಕಾರಿಗಳ ಸಮ್ಮುಖದಲ್ಲಿ ಬಾಗಿಲು ಒಡೆದು ಒಳ ಪ್ರವೇಶಿಸಿದ್ದಾರೆ.

ಕೋಲ್ಕತಾದ ಚಿನಾರ್‌ ಪಾರ್ಕ್‌ ಎಂಬಲ್ಲಿ ಈ ಫ್ಲಾಟ್‌ ಇದೆ. ಗುರುವಾರ ರಾತ್ರಿಯೇ ದಾಳಿ ಮತ್ತು ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಇ.ಡಿ. ಅಧಿಕಾರಿಗಳು ಹೇಳಿದ್ದಾರೆ.

ನಾನು ಬಲಿಪಶು:
ಈ ನಡುವೆ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಟಿಎಂಸಿ ಮುಖಂಡ ಪಾರ್ಥ ಚಟರ್ಜಿ ಪ್ರತಿಕ್ರಿಯೆ ನೀಡಿದ್ದಾರೆ. ಒಟ್ಟಾರೆ ಪ್ರಕರಣದಲ್ಲಿ ನನ್ನನ್ನು ಬಲಿಪಶು ಮಾಡಲಾಗಿದೆ. ವೈದ್ಯಕೀಯ ಪರೀಕ್ಷೆಯ ಬಳಿಕ ಮಾತನಾಡಿದ ಅವರು, “ಟಿಎಂಸಿ ನನ್ನ ವಿರುದ್ಧ ಕೈಗೊಂಡ ಕ್ರಮ ಸರಿಯೋ ತಪ್ಪೋ ಎನ್ನುವುದನ್ನು ಸಮಯವೇ ನಿರ್ಧರಿಸಲಿದೆ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇ.ಡಿ.ತನಿಖೆ ಶುರು
ಅರ್ಪಿತಾ ಮುಖರ್ಜಿಗೆ ಸೇರಿದ ಮೂರು ಕಂಪನಿಗಳು ಮತ್ತು ಅವುಗಳ ಮೂಲಕ ನಡೆಸಲಾಗಿದೆ ಎಂದು ಹೇಳಲಾಗಿರುವ ವಹಿವಾಟಿನ ಬಗ್ಗೆ ಇ.ಡಿ.ತನಿಖೆ ಶುರು ಮಾಡಿದೆ. ಅರ್ಪಿತಾ ಮುಖರ್ಜಿಯನ್ನು 2011ರ ಮಾ.21ರಂದು ಕಂಪನಿಯ ನಿರ್ದೇಶಕಿಯನ್ನಾಗಿ ನೇಮಕ ಮಾಡಲಾಗಿತ್ತು. ಅದೇ ವರ್ಷದ ಜು.1ರಂದು ನಟಿಯ ಸಹೋದರನನ್ನೂ ನಿರ್ದೇಶಕ ಸ್ಥಾನಕ್ಕೆ ನೇಮಕ ಮಾಡಲಾಗಿತ್ತು. ದಾಖಲೆಗಳಲ್ಲಿ ಉಲ್ಲೇಖಗೊಂಡ ಮಾಹಿತಿಯಂತೆ ಆ ಕಂಪನಿ ವಿವಿಧ ರೀತಿಯ ಸರಕುಗಳ ಮಾರಾಟದಲ್ಲಿ ತೊಡಗಿಸಿಕೊಂಡಿದೆ.

Advertisement

ಬಲವಂತದಿಂದ ವೈದ್ಯಕೀಯ ಪರೀಕ್ಷೆ
ಟಿಎಂಸಿ ಶಾಸಕ ಪಾರ್ಥ ಚಟರ್ಜಿ ನಿಕಟವರ್ತಿ ಅರ್ಪಿತಾ ಮುಖರ್ಜಿ ಕೋರ್ಟ್‌ ಆದೇಶದಂತೆ ವೈದ್ಯಕೀಯ ಪರೀಕ್ಷೆಗೆ ಒಳಗಾಗಲು ನಿರಾಕರಿದ ಘಟನೆ ನಡೆದಿದೆ. ಕೋಲ್ಕತಾದ ಜೋಕಾ ಎಂಬಲ್ಲಿರುವ ಆಸ್ಪತೆಗೆ ಕಾರ್‌ನಲ್ಲಿ ಮುಖರ್ಜಿಯನ್ನು ಇ.ಡಿ.ಅಧಿಕಾರಿಗಳು ಕರೆ ತಂದಾಗ ಇಳಿಯಲು ನಿರಾಕರಿಸಿದರು. ಎಷ್ಟೇ ಮನವೊಲಿಸಿದರೂ, ಆಕೆ ಅತ್ತು ರಂಪ ಮಾಡಿ, ಕಾರಿನಲ್ಲೇ ಕೈ ಕಾಲುಗಳನ್ನು ಬಡಿದಿದ್ದಾರೆ. ಭದ್ರತಾ ಸಿಬ್ಬಂದಿ ಎತ್ತಿಕೊಂಡು ಹೋಗಲು ಪ್ರಯತ್ನಿಸಿದಾಗ ಆಕೆ ರಸ್ತೆಯಲ್ಲೇ ಕುಳಿತಳು. ಇದರ ಹೊರತಾಗಿಯೂ ಕೋರ್ಟ್‌ ಆದೇಶ ಪಾಲನೆ ಮಾಡುವ ನಿಟ್ಟಿನಲ್ಲಿ ಮುಖರ್ಜಿಯನ್ನು ಬಲವಂತವಾಗಿ ಆಸ್ಪತ್ರೆಯ ಒಳಕ್ಕೆ ಕರೆದುಕೊಂಡು ಹೋಗಿ ವೈದ್ಯಕೀಯ ತಪಾಸಣೆ ನಡೆಸಲಾಗಿದೆ.

ಈವರೆಗೆ ರೈಡ್‌ನ‌ಲ್ಲಿ ಸಿಕ್ಕಿದ್ದೇನು?
ಮೊದಲ ದಾಳಿ- 21.90 ಕೋಟಿ ರೂ. (56 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ, 76 ಲಕ್ಷ ರೂ. ಮೌಲ್ಯದ ಚಿನ್ನ) ಒಟ್ಟು 23.22 ಕೋಟಿ ರೂ.
ಎರಡನೇ ದಾಳಿ- 27.9 ಕೋಟಿ ರೂ. 5 ಕೆಜಿ ಚಿನ್ನ (4.3 ಕೋಟಿ ರೂ. ಮೌಲ್ಯ)
ಮೂರನೇ ದಾಳಿ – 28 ಕೋಟಿ ರೂ. ಪತ್ತೆ.

Advertisement

Udayavani is now on Telegram. Click here to join our channel and stay updated with the latest news.

Next