ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಸಚಿವ ಸತ್ಯೇಂದ್ರ ಜೈನ್ ಅವರಿಗೆ ಸೇರಿದ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ ವೇಳೆ 2.85 ಕೋಟಿ ರೂಪಾಯಿ ನಗದು ಮತ್ತು 133 ಚಿನ್ನದ ನಾಣ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇ.ಡಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 593 ಅಂಕ ಇಳಿಕೆ; ಜೂ.7ರಂದು ಲಾಭ, ನಷ್ಟ ಕಂಡ ಷೇರು ಯಾವುದು?
ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಸೋಮವಾರ ಜೈನ್ ಅವರಿಗೆ ಸಂಬಂಧಿಸಿದ ಆಸ್ತಿ-ಪಾಸ್ತಿಗಳ ಮೇಲೆ ದಾಳಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ರಹಸ್ಯ ಸ್ಥಳದಲ್ಲಿ ಅಡಗಿಸಿಟ್ಟಿದ್ದ ಕೋಟ್ಯಂತರ ರೂಪಾಯಿ ನಗದು ಮತ್ತು ಚಿನ್ನದ ನಾಣ್ಯಗಳು ಪತ್ತೆಯಾಗಿರುವುದಾಗಿ ಜಾರಿ ನಿರ್ದೇಶನಾಲಯ ಪ್ರಕಟಣೆಯಲ್ಲಿ ವಿವರಿಸಿದೆ.
ಅಕ್ರಮ ಹಣ ವರ್ಗಾವಣೆ ನಿಗ್ರಹ (ಪಿಎಂಎಲ್ ಎ) ಕಾಯ್ದೆಯಡಿ ಸತ್ಯೇಂದ್ರ ಜೈನ್ ಅವರನ್ನು ಮೇ 30ರಂದು ಬಂಧಿಸಲಾಗಿತ್ತು. ಜೈನ್ ಗೆ ಕೋರ್ಟ್ ಜೂನ್ 9ರವರೆಗೆ ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಿತ್ತು.
ಸೋಮವಾರ ಜಾರಿ ನಿರ್ದೇಶನಾಲಯ ದೆಹಲಿ ಹಾಗೂ ಇತರ ಏಳು ಸ್ಥಳಗಳಲ್ಲಿ ದಾಳಿ ನಡೆಸಿ, ಪರಿಶೀಲನೆ ನಡೆಸಿತ್ತು. ಹವಾಲಾ ಪ್ರಕರಣದಲ್ಲಿ ಜೈನ್ ಅವರನ್ನು ಜಾರಿ ನಿರ್ದೇಶನಾಲಯ ತನಿಖೆಗೊಳಪಡಿಸಿತ್ತು ಎಂದು ವರದಿ ತಿಳಿಸಿದೆ.