ಮಾಲೂರು/ಚಿಂತಾಮಣಿ: ಕಾಂಗ್ರೆಸ್ ಶಾಸಕ, ಕೋಚಿಮುಲ್ ಅಧ್ಯಕ್ಷರಾದ ಕೆ.ವೈ. ನಂಜೇಗೌಡ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಂ.ಸಿ. ಸುಧಾಕರ್ ಅವರ ಆಪ್ತರಾದ ಕೋಚಿಮುಲ್ ನಿರ್ದೇಶಕ ವೈ.ಬಿ. ಅಶ್ವತ್ಥನಾರಾಯಣ ಬಾಬು ಸೇರಿ ಹಲವರಿಗೆ ಸೋಮವಾರ ಇ.ಡಿ. ಆಘಾತ ನೀಡಿದೆ.
ಕೋಲಾರದ ಕೋಚಿಮುಲ್‌ನಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದ ಆರೋಪದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ನಂಜೇಗೌಡರ ಮನೆ, ಜಲ್ಲಿ ಕ್ರಷರ್ ಹಾಗೂ ಆಪ್ತರ ಮನೆಗಳ ಮೇಲೆ ಸೋಮವಾರ ನಸುಕಿನಲ್ಲೇ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಾಸಕರ ಸ್ವಗ್ರಾಮ ಟೇಕಲ್‌ನ ಕೊಮ್ಮನಹಳ್ಳಿ ಮನೆಗೆ ಸೋಮವಾರ ಮುಂಜಾನೆ 5.30ಕ್ಕೆ ಸುಮಾರು 70ಕ್ಕೂ ಹೆಚ್ಚು ಅಧಿಕಾರಿಗಳಿದ್ದ ಇ.ಡಿ. ತಂಡ ದಾಳಿ ನಡೆಸಿದ್ದು, ಅಧಿಕಾರಿಗಳು ಮನೆಯೊಳಗೆ ಪ್ರವೇಶಿಸಿ ಶೋಧ ಕಾರ್ಯ ನಡೆಸಿದ್ದಾರೆ. ಏಕಕಾಲಕ್ಕೆ ತಾಲೂಕಿನಲ್ಲಿ 8 ಕಡೆ ಹಾಗೂ ಜಿಲ್ಲೆಯ ಕೆಲವು ಕಡೆ ದಾಳಿ ನಡೆದಿದೆ.
ಕ್ರಷರ್ ಪರಿಶೀಲನೆ
ಶಾಸಕರ ಮಗ ಕೆ.ಎನ್. ಹರೀಶ್‌ಗೌಡ ಆವರ ಒಡೆತನದ ಶ್ರೀ ನಂಜುಂಡೇಶ್ವರ ಸ್ಟೋನ್ ಕ್ರಷರ್ ಬಳಿ ಸುಮಾರು ಆರು ಮಂದಿ ಅಧಿಕಾರಿಗಳು ತೆರಳಿ ವಿವಿಧ ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದು, ಇದೇ ವೇಳೆ ಹರೀಶ್ ಗೌಡರನ್ನು ಮನೆಯಿಂದ ಕ್ರಷರ್‌ಗೆ ಕರೆಸಿ ಮಾಹಿತಿ ಸಂಗ್ರಹಿಸಿದ್ದಾರೆ.
ದೊಡ್ಡಮಲ್ಲೇ ಗ್ರಾಮದ ಶಾಸಕರ ಆಪ್ತ ಕಾರ್ಯದರ್ಶಿ ಹರೀಶ್ ಮನೆ ಮೇಲೆಯೂ ದಾಳಿ ನಡೆದಿದೆ. ಶಾಸಕರ ಇನ್ನೊಬ್ಬ ಆಪ್ತ ಕಾರ್ಯದರ್ಶಿ ಗುರುವಗೊಲ್ಲಹಳ್ಳಿ ಮಂಜುನಾಥ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.