ಹೊಸದಿಲ್ಲಿ : ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ಶನಿವಾರ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ಮೀಸಾ ಭಾರ್ತಿ ಅವರ ದಿಲ್ಲಿಯ ಸೈನಿಕ್ ಫಾರ್ಮ್ ನಲ್ಲಿನ ನಿವಾಸದ ಮೇಲೆ, ಭ್ರಷ್ಟಾಚಾರ ಪ್ರಕರಣದ ಸಂಬಂಧವಾಗಿ, ದಾಳಿ ನಡೆಸಿದರು.
ಜಾರಿ ನಿರ್ದೇಶನಾಲಯದವರು ಈ ಹಿಂದೆ ಮೀಸಾ ಭಾರ್ತಿ ಅವರ ಚಾರ್ಟ್‌ರ್ಡ್ ಅಕೌಂಟೆಂಟ್ ಅನ್ನು ಬಂಧಿಸಿದ್ದರು.
ಕಪ್ಪು ಹಣ ಜಾಲದಲ್ಲಿ ತೊಡಗಿಕೊಂಡ ಆರೋಪದ ಮೇಲೆ ರಾಜೇಶ್ ಅಗ್ರವಾಲ್ ಎಂಬವರನ್ನು ದಿಲ್ಲಿಯಲ್ಲಿ ಕಳೆದ ಸೋಮವಾರ ಬಂಧಿಸಲಾಗಿತ್ತು.
ಅಗ್ರವಾಲ್ ಅವರು ಜೈನ್ ಬ್ರದರ್ಸ್ ಎಂದೇ ತಿಳಿಯಲ್ಪಟ್ಟಿರುವ ಸುರೇಂದ್ರ ಕುಮಾರ್ ಜೈನ್ ಮತ್ತು ವೀರೇಂದ್ರ ಜೈನ್ ಅವರ ನೆರವಿನೊಂದಿಗೆ ಕಪ್ಪು ಹಣವನ್ನು ಕಾನೂನು ರೀತ್ಯ ಆದಾಯ ಮೂಲವಾಗಿ ಪರಿವರ್ತಿಸಿರುವ ಆರೋಪ ಅಗ್ರವಾಲ್ ಮೇಲಿದೆ. ಜಾರಿ ನಿರ್ದೇಶನಾಲಯದವರು ಕಳೆದ ಮಾರ್ಚ್ 20ರಂದು ಜೈನ್ ಸಹೋದರರನ್ನು ಬಂಧಿಸಿದ್ದರು.
ನಿನ್ನೆ ಶುಕ್ರವಾರವಷ್ಟೇ ಸಿಬಿಐ ಆರ್ ಜೆ ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪತ್ನಿ ರಾಬ್ರಿ ದೇವಿ ಮತ್ತು ಪುತ್ರ ತೇಜಸ್ವಿ ಅವರಿಗೆ ಸೇರಿದ ನಾಲ್ಕು ನಗರಗಳಲ್ಲಿನ ಆಸ್ತಿಪಾಸ್ತಿಗಳ ಮೇಲೆ ದಾಳಿ ನಡೆಸಿತ್ತು ಆ ಮೂಲಕ ಲಾಲುಗೆ ಶಾಕ್ ನೀಡಿತ್ತು.