ನಾಗ್ಪುರ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರ ನಾಗ್ಪುರ ನಿವಾಸಕ್ಕೆ ಇಂದು ಬೆಳಗ್ಗೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸಿದ್ದಾರೆ.
ಈ ವರ್ಷದ ಮಾರ್ಚ್‌ನಲ್ಲಿ ಅನಿಲ್ ದೇಶ್ ಮುಖ್ ವಿರುದ್ಧ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್ ಅವರು ಭ್ರಷ್ಟಾಚಾರದ ಆರೋಪಗಳನ್ನು ನಡೆಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಇಡಿ ದಾಳಿಯಾಗಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬರೆದ ಪತ್ರದಲ್ಲಿ ಪರಂಬೀರ್ ಸಿಂಗ್ ಅನಿಲ್ ದೇಶ್ ಮುಖ್ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದರು. ಅದಲ್ಲದೆ ದೇಶ್ ಮುಖ್ ಅವರು ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರ., ದೇಶ್ ಮುಖ್ ಅವರು ಮಾಜಿ ಸಹಾಯಕ ಇನ್ಸ್‌ಪೆಕ್ಟರ್ ಸಚಿನ್ ವಾಜೆ ಅವರಿಗೆ ತಿಂಗಳಿಗೆ ಸುಮಾರು 100 ಕೋಟಿ ರೂ.ಗಳನ್ನು ಸುಲಿಗೆ ಮಾಡುವಂತೆ ಗುರಿ ನೀಡಿದ್ದರು. ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ಗುರಿಯಾಗಿಸಿಕೊಂಡು ಹೆಚ್ಚಿನ ಹಣ ಸಂಗ್ರಹ ಮಾಡಬೇಕು ಎಂದು ದೇಶ್ ಮುಖ್ ಸೂಚಿಸಿದ್ದರು ಎಂದು ಆರೋಪಿಸಿದ್ದರು.
ಇದರ ಬೆನ್ನಲ್ಲೇ ಕೇಂದ್ರ ತನಿಖಾ ದಳ (ಸಿಬಿಐ) ಪ್ರಾಥಮಿಕ ವಿಚಾರಣೆ ನಡೆಸಿ ಅನಿಲ್ ದೇಶ್ ಮುಖ್ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ನಂತರ ದೇಶ್ ಮುಖ್ ಮತ್ತು ಅವರ ಆಪ್ತರ ನಿವಾಸಗಳಲ್ಲಿ ಹುಡುಕಾಟಗಳನ್ನು ನಡೆಸಲಾಗಿತ್ತು.
ನಂತರ ಇಡಿ ಅವರ ವಿರುದ್ಧ ಮನಿ ಲಾಂಡರಿಂಗ್ ಪ್ರಕರಣ ದಾಖಲಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಿತ್ತು. ಹೀಗಾಗಿ ಗೃಹ ಸಚಿವ ಸ್ಥಾನಕ್ಕೆ ಅನಿಲ್ ದೇಶ್ ಮುಖ್ ರಾಜೀನಾಮೆ ನೀಡಿದ್ದರು.
“ನ್ಯಾಯಾಲಯದ ಆದೇಶದ ನಂತರ ನನಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ. ನಾನು ಹುದ್ದೆ ತ್ಯಜಿಸಲು ನಿರ್ಧರಿಸಿದ್ದೇನೆ. ದಯವಿಟ್ಟು ನನ್ನ ಹುದ್ದೆಯಿಂದ ನನ್ನನ್ನು ಮುಕ್ತಗೊಳಿಸಿ” ಎಂದು ದೇಶಮುಖ್ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದರು.