Advertisement

ಪ್ರತಿಭಟನೆ ನಡುವೆ ಸೋನಿಯಾ ವಿಚಾರಣೆ: ದೇಶಾದ್ಯಂತ ಕಾಂಗ್ರೆಸ್‌ ಮುಖಂಡರ ಪ್ರತಿಭಟನೆ

08:39 PM Jul 27, 2022 | Team Udayavani |

ನವದೆಹಲಿ: ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿರುವಂತೆಯೇ ನವದೆಹಲಿಯಲ್ಲಿ ಬುಧವಾರ ಕೂಡ ಸೋನಿಯಾ ಗಾಂಧಿ ಅವರ ವಿಚಾರಣೆಯನ್ನು ಜಾರಿ ನಿರ್ದೇಶನಾಲಯ ನಡೆಸಿತು.

Advertisement

ಬೆಳಗ್ಗೆ 11 ಗಂಟೆಗೆ ಆಗಮಿಸಿದ ಸೋನಿಯಾ ಅವರಿಗೆ 11.15ರಿಂದ ಸತತ ಮೂರು ಗಂಟೆಗಳ ಕಾಲ ಇ.ಡಿ. ಅಧಿಕಾರಿಗಳು ಪ್ರಶ್ನೆಗಳನ್ನು ಕೇಳಿದರು.

ಪುತ್ರ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಜತೆಗೆ ಸೋನಿಯಾ ಆಗಮಿಸಿದ್ದರು. ವಿಚಾರಣೆ ಪ್ರಕ್ರಿಯೆ ಮುಕ್ತಾಯದ ಬಳಿಕ 2 ಗಂಟೆಗೆ ಅವರು ಕಚೇರಿಯಿಂದ ವಾಪಸಾಗಿದ್ದಾರೆ. ಮಂಗಳವಾರ ಒಟ್ಟು ಆರು ಗಂಟೆ ಮತ್ತು ಬುಧವಾರ 3 ಗಂಟೆ- ಹೀಗೆ ಒಟ್ಟು 9 ಗಂಟೆಗಳ ಕಾಲ ಕಾಂಗ್ರೆಸ್‌ ಅಧ್ಯಕ್ಷೆ ವಿಚಾರಣೆ ನಡೆಸಲಾಗಿದೆ.

ಸತ್ಯ ಮರೆಮಾಚಲು ಯತ್ನ: ಅನುರಾಗ್‌ ಠಾಕೂರ್‌
ಪ್ರತಿಭಟನೆ ನಡೆಸುವ ಮೂಲಕ ಕಾಂಗ್ರೆಸ್‌ನ ಮುಖಂಡರು ಮತ್ತು ಕಾರ್ಯಕರ್ತರು ಸತ್ಯವನ್ನು ಮರೆ ಮಾಚುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಆರೋಪಿಸಿದ್ದಾರೆ. ಸಂಸತ್‌ ಭವನದ ಆವರಣದಲ್ಲಿ ಮಾತನಾಡಿದ ಅವರು, ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ತಪ್ಪು ಮಾಡದೇ ಇದ್ದರೆ ಅಂಜಿಕೆ ಏಕೆ? ಗಾಂಧಿ ಕುಟುಂಬಕ್ಕಾಗಿ ಪ್ರತ್ಯೇಕವಾಗಿರುವ ಕಾನೂನು ಇರಬೇಕೇ? ಅವರು ತಪ್ಪೆಸಗಿದ್ದರೆ ತನಿಖೆಯಿಂದ ಹಿಂಜರಿಯುವುದರಿಂದಲೇ ಅವರ ಧೋರಣೆ ಗೊತ್ತಾಗುತ್ತದೆ ಎಂದು ಟೀಕಿಸಿದ್ದಾರೆ.

ಅವರದ್ದೇ ಪಕ್ಷ ಆಡಳಿತ ಇರುವ ರಾಜಸ್ಥಾನದಲ್ಲಿ ಅತ್ಯಾಚಾರ, ದರೋಡೆ ಸೇರಿದಂತೆ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌ ಆರೋಪಿಸಿದರು.

Advertisement

ಕಾನೂನಿಗಿಂತ ದೊಡ್ಡವರು ಎಂಬ ಭಾವನೆ:
ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ವಯನಾಡ್‌ ಸಂಸದ ರಾಹುಲ್‌ ಗಾಂಧಿ ಕಾನೂನಿಗಿಂತ ದೊಡ್ಡವರು ಎಂಬ ಭಾವನೆ ಆ ಪಕ್ಷದ ನಾಯಕರಲ್ಲಿ ಇದೆ. ಹೀಗಾಗಿಯೇ ಅವರು, ಇ.ಡಿ. ವಿಚಾರಣೆ ವಿಷಯದಲ್ಲಿ ಗಲಾಟೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಆರೋಪಿಸಿದ್ದಾರೆ. ಕಾಂಗ್ರೆಸ್‌ ನಾಯಕರ ಪ್ರತಿಭಟನೆ ಸತ್ಯವನ್ನು ಮರೆ ಮಾಚುವ ಪ್ರಯತ್ನದ ಒಂದು ಭಾಗ ಎಂದೂ ಅವರು ಬಣ್ಣಿಸಿದ್ದಾರೆ. ಗಾಂಧಿ ಕುಟುಂಬದ ಸದಸ್ಯರೇ ನೀವು ಇ.ಡಿ.ಕೇಳುವ ಪ್ರಶ್ನೆಗೆ ಉತ್ತರ ಹೇಳಬೇಕು ಎಂದು ನಡ್ಡಾ ತಾಕೀತು ಮಾಡಿದ್ದಾರೆ.

ಇ.ಡಿ. ಮೂಲಕ ಭಯ ಸೃಷ್ಟಿ:
ಸೋನಿಯಾ ಗಾಂಧಿ ವಿಚಾರಣೆ ಖಂಡಿಸಿ ಮಂಗಳವಾರ ಕೂಡ ಕಾಂಗ್ರೆಸ್‌ ನವದೆಹಲಿ ಸೇರಿದಂತೆ ದೇಶಾದ್ಯಂತ ಪ್ರತಿಭಟನೆ ಮುಂದುವರಿಸಿದೆ. ಕಾಂಗ್ರೆಸ್‌ ಮುಖಂಡರಾದಿರುವ ಸಚಿನ್‌ ಪೈಲೆಟ್‌, ಜೈರಾಮ್‌ ರಮೇಶ್‌, ಹರೀಶ್‌ ರಾವತ್‌ ಸೇರಿದಂತೆ ಹಲವು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಬಿಡುಗಡೆ ಮಾಡಿದ್ದಾರೆ.

ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯ (ಇ.ಡಿ) ಮೂಲಕ ಹೆದರಿಕೆಯನ್ನು ಸೃಷ್ಟಿಸುವ ಕೆಲಸ ಮಾಡುತ್ತಿದೆ. ಅಕ್ರಮ ಹಣ ವರ್ಗಾವಣೆ ಕಾಯ್ದೆಯನ್ನು ಆಯುಧವನ್ನಾಗಿ ಬಳಕೆ ಮಾಡುತ್ತಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹೊÉàಟ್‌ ಆರೋಪಿಸಿದ್ದಾರೆ. ನವದೆಹಲಿಯಲ್ಲಿ ಕಾಂಗ್ರೆಸ್‌ನ ಇತರ ಮುಖಂಡರಾಗಿರುವ ಗುಲಾಂ ನಬಿ ಆಜಾದ್‌, ಜೈರಾಮ್‌ ರಮೇಶ್‌ ಜತೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು

“ದೇಶದಲ್ಲಿ ಇ.ಡಿ. ಮೂಲಕ ನಾಟಕ ಮತ್ತು ಹೆದರಿಯನ್ನು ಉಂಟು ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಆರಂಭದಲ್ಲಿ ಅವರು ರಾಹುಲ್‌ ಗಾಂಧಿಯವರಿಗೆ ಸಮನ್ಸ್‌ ನೀಡಿ ಐದು ದಿನಗಳಲ್ಲಿ ಹಲವಾರು ಗಂಟೆಗಳ ಕಾಲ ವಿಚಾರಣೆ ನಡೆಸಿದರು. ಸೋನಿಯಾ ಅವರನ್ನು ಮೂರನೇ ಬಾರಿ ಕರೆದು ವಿಚಾರಣೆ ನಡೆಸಿದ್ದಾರೆ. ಎಷ್ಟು ದಿನಗಳ ವರೆಗೆ ಇದು ಮುಂದುವರಿಯಲಿದೆಯೋ ಗೊತ್ತಿಲ್ಲ.

ಸುಪ್ರೀಂಕೋರ್ಟ್‌ ಮಧ್ಯಪ್ರವೇಶ ಮಾಡಿ ಇ.ಡಿ. ಮೂಲಕ ಸೃಷ್ಟಿ ಮಾಡುವ ಬೆದರಿಕೆಗೆ ನಿಯಂತ್ರಣ ಹೇರಬೇಕು ಮತ್ತು ಕಾಲಮಿತಿಯಲ್ಲಿ ತನಿಖೆ ನಡೆದು ನಿರ್ಧಾರ ಹೊರಬೀಳುವಂತೆ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

ಇ.ಡಿ. ಮೂಲಕವೇ ಮಹಾರಾಷ್ಟ್ರ ಸರ್ಕಾರವನ್ನು ಪತನಗೊಳಿಸಲಾಯಿತು ಎಂದು ಆರೋಪಿಸಿದ ಗೆಹ್ಲೋಟ್, ಸರ್ಕಾರ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡುತ್ತಿದೆ ಎನ್ನುವುದಕ್ಕೆ ಇದೊಂದು ಉದಾಹರಣೆ ಎಂದರು.

ಶೇ.5 ಮಾತ್ರ ಯಶಸ್ಸು:
ಇತ್ತೀಚಿನ ದಿನಗಳಲ್ಲಿ ಸಿಬಿಐಗಿಂತ ಇ,ಡಿ. ಹೆಚ್ಚು ಪ್ರಚಾರ ಪಡೆಯುತ್ತಿದೆ. ಆದರೆ, ಆ ಸಂಸ್ಥೆ ನಡೆಸಿದ ತನಿಖೆಗಳಲ್ಲಿನ ಯಶಸ್ಸಿನ ಪ್ರಮಾಣ ಶೇ.5ಕ್ಕಿಂತ ಕಡಿಮೆ ಎಂದು ಕಾಂಗ್ರೆಸ್‌ ಮುಖಂಡ ಗುಲಾಂ ನಬಿ ಆಜಾದ್‌ ಆರೋಪಿಸಿದ್ದಾರೆ. ಯಾವ ಕಾರಣಕ್ಕಾಗಿ ಸೋನಿಯಾ ಅವರನ್ನು ಪದೇ ಪದೆ ಇ.ಡಿ. ವಿಚಾರಣೆ ನಡೆಸುತ್ತಿದೆ ಎಂದು ಗೊತ್ತಾಗುತ್ತಿಲ್ಲ ಎಂದರು.

ಅನಾರೋಗ್ಯ ಇದ್ದರೂ….:
ಹಲವು ವರ್ಷಗಳಿಂದ ಸೋನಿಯಾ ಗಾಂಧಿ ಅವರು ಆರೋಗ್ಯದ ಸಮಸ್ಯೆ ಎದುರಿಸುತ್ತಿದ್ದಾರೆ. ಇದರ ಹೊರತಾಗಿಯೂ ಕೂಡ ಕೇಂದ್ರ ಸರ್ಕಾರ ಅವರಿಗೆ ವಿಚಾರಣೆ ನೆಪದಲ್ಲಿ ಕಿರುಕುಳ ನೀಡುತ್ತಿದೆ ಎಂದು ಆಜಾದ್‌ ಆರೋಪಿಸಿದರು.

ಕಾಂಗ್ರೆಸ್‌ ನಡೆಸುತ್ತಿರುವುದು ಸತ್ಯಾಗ್ರಹವಲ್ಲ. ಸತ್ಯವನ್ನು ಅಡಗಿಸಲು ಮಾಡುತ್ತಿರುವ ತಂತ್ರ. ಗಾಂಧಿ ಕುಟುಂಬದವರು ತಮ್ಮನ್ನು ತಾವು ಕಾನೂನಿಗಿಂತ ಮೇಲ್ಪಟ್ಟವರು ಎಂದು ತಿಳಿದಿದ್ದಾರೆ.
– ಜೆ.ಪಿ. ನಡ್ಡಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next