*
– ಈಶ
Advertisement
ಪ್ರಧಾನಿ ನರೇಂದ್ರ ಮೋದಿ ಅವರು 2ನೇ ಬಾರಿ ಆಡಳಿತಕ್ಕೆ ಬಂದ ಬಳಿಕ ಕೇಂದ್ರೀಯ ತನಿಖಾ ಸಂಸ್ಥೆಗಳು ವ್ಯಾಪಕ ದಾಳಿಗಳನ್ನು ಸಂಘಟಿಸುತ್ತಿವೆ. ತನಿಖೆಗಳನ್ನು ಕೈಗೊಳ್ಳುತ್ತಿವೆ. ಇದು ವಿಪಕ್ಷಗಳ ಕೆಂಗಣ್ಣಿಗೂ ಗುರಿಯಾಗಿದ್ದು, ವಿಪಕ್ಷಗಳ ನೇತಾರರೇ ಬಂಧನ ಭೀತಿ, ತನಿಖೆಯ ಉರುಳಿಗೆ ಸಿಕ್ಕಿಬಿದ್ದಿದ್ದಾರೆ. ಮೋದಿ ಅವರು ಈ ಸಂಸ್ಥೆಗಳ ಮೂಲಕ ವಿಪಕ್ಷಗಳ ಬಾಯಿ ಮುಚ್ಚಿಲಸು ಪ್ರಯತ್ನಿಸುತ್ತಿದ್ದಾರೆ ಎಂಬುದು ಕೇಳಿಬರುತ್ತಿರುವ ಆರೋಪ. ವಿಚಿತ್ರವೆಂದರೆ ಜಾರಿ ನಿರ್ದೇಶನಾಲಯ ಮತ್ತು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಹಲವು ದಾಳಿ, ತನಿಖೆಗಳನ್ನು ಸಂಘಟಿಸಿ ಹಲವರನ್ನು ಬಂಧಿಸಿವೆ. ಮೋದಿ ಅವರು 2014ರಲ್ಲಿ ಆಡಳಿತಕ್ಕೆ ಬಂದ ಬಳಿಕ ಸಿಬಿಐ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ವಿರುದ್ಧ ದಾಳಿ ನಡೆಸಿದ್ದು, ತದನಂತರದಿಂದ ಕೇಂದ್ರ ಸರಕಾರ ತನಿಖಾ ಸಂಸ್ಥೆಗಳಿಂದ ವಿಪಕ್ಷ ನಾಯಕರಿಗೆ ನಿದ್ದೆ ಇಲ್ಲದಾಗಿದೆ ಎಂಬ ಆರೋಪ ವ್ಯಕ್ತವಾಗಿತ್ತು.
ಕೇಂದ್ರದ ಮಾಜಿ ಗೃಹಸಚಿವ ಪಿ. ಚಿದಂಬರಂ ಅವರು ಇತ್ತೀಚಿನ ದಿನಗಳಲ್ಲಿ ಬಂಧನಕ್ಕೊಳಗಾದ ಅತಿ ದೊಡ್ಡ ರಾಜಕಾರಣಿ. ಐಎನ್‌ಎಕ್ಸ್ ಹಗರಣದಲ್ಲಿ ಅವರ ಹೆಸರು ತಳುಕು ಹಾಕಿಕೊಂಡಿದೆ. 2007ರಲ್ಲಿ ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದಾಗ ಐಎನ್‌ಎಕ್ಸ್ ಮೀಡಿಯಾಕ್ಕೆ 305 ಕೋಟಿ ರೂ. ವಿದೇಶಿ ದೇಣಿಗೆ ಪಡೆಯಲು ಅಕ್ರಮ ಅನುಮತಿ ನೀಡಿದ್ದರು ಎನ್ನುವುದು ಅವರ ಮೇಲಿನ ಆರೋಪ. ಈ ಕುರಿತಂತೆ ಅವರು ಸಿಬಿಐ, ಇಡಿ ಎರಡಕ್ಕೂ ಬೇಕಾದವರಾಗಿದ್ದರು. ಎರಡನೆಯದಾಗಿ ರಾಜ್ಯದ ಮಾಜಿ ಸಚಿವ ಡಿ.ಕೆ.ಶಿವಕುಮಾರ್. ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ ಅವರ ವಿರುದ್ಧ ಕೇಸು ದಾಖಲಾಗಿದ್ದು, ಇತ್ತೀಚಿಗೆ ಇ.ಡಿ. ಅವರನ್ನು ಬಂಧಿಸಿದೆ. ಈ ಪ್ರಕರಣ 2017ರದ್ದಾದರೂ ಆ ಹೊತ್ತಿನಲ್ಲಿ ತೆರಿಗೆ ಇಲಾಖೆ ಅಧಿಕಾಗಳು ಮೊದಲ ಬಾರಿಗೆ ವಿವಿಧೆಡೆ ಅವರ ನಿವಾಸ ಕಚೇರಿಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದರು. 2018 ಸೆಪ್ಟೆಂಬರ್‌ನಲ್ಲಿ ಇ.ಡಿ. ಕೇಸು ದಾಖಲಿಸಿದ್ದು, ಬಳಿಕ ತನಿಖೆ ಪ್ರಗತಿಯಲ್ಲಿತ್ತು. 2019 ಸೆ.3ರಂದು ಅಕ್ರಮ ಹಣ ವರ್ಗಾವಣೆ ಮತ್ತು ಆದಾಯ ತೆರಿಗೆ ಪ್ರಕರಣದ ಅನ್ವಯ ಅವರನ್ನು ದಿಲ್ಲಿಯಲ್ಲಿ ಬಂಧಿಸಲಾಗಿದೆ.
Related Articles
Advertisement
ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‌ನಾಥ್ ಅವರ ಅಳಿಯ ರತುಲ್ ಪುರಿ ವಿರುದ್ಧದ ವಿಚಾರಣೆಯೂ ತೀವ್ರಗೊಂಡಿದೆ. ಇತ್ತೀಚಿಗೆ ಅವರನ್ನು ಇ.ಡಿ. ಬಂಧಿಸಿದೆ. ಬ್ಯಾಂಕ್‌ಗೆ 354 ಕೋಟಿ ರೂ. ವಂಚನೆ ಎಸಗಿದ ಆರೋಪ ಅವರ ಮೇಲಿದೆ. ಕಳೆದ ಲೋಕಸಭೆ ಚುನಾವಣೆಗೆ ಮುನ್ನ ಅವರ ಮನೆಗೆ ಆದಾಯ ತೆರಿಗೆ ಇಲಾಖೆ ದಾಳಿ ಕೂಡ ನಡೆಸಿತ್ತು.
ಇದರೊಂದಿಗೆ ದೇಶಾದ್ಯಂತ ಹಲವು ವಂಚನೆ ಪ್ರಕರಣಗಳನ್ನು ಇ.ಡಿ. ದಾಖಲಿಸಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ 2018ರ ಒಂದೇ ವರ್ಷದಲ್ಲಿ ಅದು ಅತಿ ಹೆಚ್ಚು ಅಂದರೆ 881 ಅಕ್ರಮ ಹಣಕಾಸು ವರ್ಗಾವಣೆ ಕುರಿತ ಪ್ರಕರಣಗಳನ್ನು ದಾಖಲಿಸಿಕೊಂಡಿತ್ತು. ಇದೇ ವೇಳೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 29468.31 ಕೋಟಿ ರೂ. ಮೌಲ್ಯದ 973 ಆಸ್ತಿಗಳನ್ನು ಅದು ಮುಟ್ಟುಗೋಲು ಹಾಕಿಕೊಂಡಿತ್ತು.
ಹಾಗೆಯೇ ಇದೇ ಅವಧಿಯಲ್ಲಿ ವಿದೇಶಿ ದೇಣಿಗೆಯಲ್ಲಿ ನಡೆಸಿದ ವಂಚನೆ ಕುರಿತಾಗಿ 6275ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ದಾಖಲಾಗಿರುವ ಕೇಸುಗಳ ಈ ಪ್ರಮಾಣ ಕಳೆದ 14 ವರ್ಷಗಳಲ್ಲೇ ಅತ್ಯಧಿಕವಾಗಿದೆ. ಇ.ಡಿ ಯ ಈ ಕ್ಷಿಪ್ರಗತಿ ಕೊಂಚ ವಿವಾದಕ್ಕೀಡಾಗಿದೆ. ಇಲ್ಲಿಯವರೆಗೆ ಏನು ನಿದ್ರೆ ಮಾಡುತಿತ್ತಾ ಎಂಬ ಅಭಿಪ್ರಾಯವೂ ಕೇಳಿಬಂದಿರುವುದು ಸ್ಪಷ್ಟ.