Advertisement

ಚಿದು ಮನೆಯಲ್ಲಿತ್ತು ಸಿಬಿಐ ವರದಿ ಪ್ರತಿ?

08:15 AM Feb 09, 2018 | Team Udayavani |

ಹೊಸದಿಲ್ಲಿ: ಏರ್‌ಸೆಲ್‌-ಮ್ಯಾಕ್ಸಿಸ್‌ ಡೀಲ್‌ ಅವ್ಯವಹಾರ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಸಿಬಿಐ ಮಾಜಿ ವಿತ್ತ ಸಚಿವ ಚಿದಂಬರಂ ಮನೆಯ ಮೇಲೆ ಕಳೆದ ಜನವರಿ 13ರಂದು ದಾಳಿ ನಡೆಸಿದಾಗ ಅಚ್ಚರಿ ಕಾದಿತ್ತು. ತಾನೇ 2013ರಲ್ಲಿ ತಯಾರಿಸಿದ ಕರಡು ವರದಿಯೊಂದು ಚಿದಂಬರಂ ಮನೆಯಲ್ಲಿ ಸಿಬಿಐಗೆ ಸಿಕ್ಕಿದೆ. ಈ ಮಹತ್ವದ ದಾಖಲೆ ಚಿದಂಬರಂ ಮನೆಗೆ ಹೇಗೆ ಬಂತು ಎಂಬ ಬಗ್ಗೆ ಇದೀಗ ಸಿಬಿಐ ಆಂತರಿಕ ತನಿಖೆ ಆರಂಭಿಸಿದೆ.

Advertisement

ಜನವರಿ 13ರಂದು ಚಿದಂಬರಂ ಕುಟುಂಬ ವಾಸಿಸುತ್ತಿದ್ದ ನವದಿಲ್ಲಿಯ ಜೋರ್‌ ಬಾಘ…ನಲ್ಲಿರುವ ಮನೆಗೆ ದಾಳಿ ನಡೆಸಿ, ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಅಷ್ಟೇ ಅಲ್ಲ, ದಿಲ್ಲಿ ಹಾಗೂ ಚೆನ್ನೈನಲ್ಲಿ ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂ ಮನೆ ಮತ್ತು ಕಚೇರಿಯ ಮೇಲೂ ದಾಳಿ ನಡೆಸಿತ್ತು.

2013ರಲ್ಲಿ ಸಿಬಿಐ ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‌ಗೆ ಸಲ್ಲಿಸಿದ ಮಹತ್ವದ ದಾಖಲೆಗಳೇ ಚಿದಂಬರಂ ಮನೆಯಲ್ಲಿ ಸಿಕ್ಕಿವೆ. ಇದರಲ್ಲಿರುವ ಕೆಲವು ಪುಟಗಳಂತೂ ನಂತರ ಕೋರ್ಟ್‌ಗೆ ಬಹಿರಂಗವಾಗಿ ಸಲ್ಲಿಸಿದ ದಾಖಲೆಗಳಿಗೆ ಹೋಲಿಕೆಯಾಗುತ್ತಿವೆ. ಇವು ಏರ್‌ಸೆಲ್‌-ಮ್ಯಾಕ್ಸಿಸ್‌ ಡೀಲ್‌ಗೆ ಸಂಬಂಧಿಸಿದ್ದಾಗಿವೆ ಎಂದು ಸಿಬಿಐ ಮೂಲಗಳು ತಿಳಿಸಿವೆ. ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಚಿದಂಬರಂ ಹೇಳಿದ್ದಾರೆ. ಆದರೆ ಸಿಬಿಐ ಈ ಬಗ್ಗೆ ಪ್ರತಿಕ್ರಿಯೆಯನ್ನು ಕೇಳಿದರೆ ಚಿದಂಬರಂ ನೀಡಬೇಕಾಗುತ್ತದೆ. ಅಷ್ಟೇ ಅಲ್ಲ,  ಈ ಹಿಂದೆ ಸಿಬಿಐ ನಡೆಸಿದ ದಾಳಿಯನ್ನು ಚಿದಂಬರಂ ಖಂಡಿಸಿದ್ದು, ಸಿಬಿಐ ಅಧಿಕಾರಿಗಳಿಗೆ ಏನೂ ಸಿಗದೆ ಮುಜುಗರ ಅನುಭವಿಸಿದ್ದಾರೆ ಎಂದು ಹೇಳಿದ್ದರು.

ಇದೇ ವೇಳೆ, ಚಿದಂಬರಂ ಮನೆಯಲ್ಲಿ ಕರಡು ವರದಿ ಸಿಕ್ಕಿರುವ ಕುರಿತು ಅವರು ವಿವರಣೆ ನೀಡಬೇಕು ಎಂದು ರಾಜ್ಯಸಭೆಯಲ್ಲಿ ಬಿಜೆಪಿ ಒತ್ತಾಯಿಸಿದ ಘಟನೆಯೂ ಗುರುವಾರ ನಡೆದಿದೆ. ಆದರೆ, ಇದಕ್ಕೆ ಕಾಂಗ್ರೆಸ್‌ ಸದಸ್ಯರು ಯಾವುದೇ ಪ್ರತಿಕ್ರಿಯೆ ನೀಡದೇ, ಘೋಷಣೆಗಳನ್ನು ಕೂಗುತ್ತಾ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next