Advertisement

ಡ್ರಗ್ಸ್‌: ರಂಗಕ್ಕಿಳಿದ ಇ.ಡಿ.: ಆರೋಪಿಗಳ ವಿರುದ್ಧ ಎಫ್ಐಆರ್‌ ಮತ್ತೂಬ್ಬ ಸೆರೆ

11:35 PM Sep 12, 2020 | mahesh |

ಬೆಂಗಳೂರು: ಸ್ಯಾಂಡಲ್‌ವುಡ್‌ನ‌ ಮಾದಕ ವಸ್ತು ದಂಧೆಯಲ್ಲಿ ಬಂಧಿತರಾಗಿರುವವರ “ನಶೆ’ ಇಳಿಸಲು ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕೃತವಾಗಿ ರಂಗ ಪ್ರವೇಶ ಮಾಡಿದೆ.

Advertisement

ಡ್ರಗ್ಸ್‌ ದಂಧೆಯಲ್ಲಿ ಹವಾಲಾ ಹಣದ ಸುಳಿವು ಬಹಿರಂಗವಾದ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ಕಣಕ್ಕಿಳಿದಿದ್ದು, ಆರೋಪಿಗಳಿಗೆ ಇ.ಡಿ. ಕಾನೂನಿನ ಕುಣಿಕೆ ಸುತ್ತಿಕೊಳ್ಳಲಿದೆ. ಮಾದಕ ವಸ್ತು ದಂಧೆ ಬಗ್ಗೆ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು ಮತ್ತೂಬ್ಬ ಆರೋಪಿ ವೈಭವ್‌ ಜೈನ್‌ ಎಂಬಾತನನ್ನು ಬಂಧಿಸಿದ್ದಾರೆ.

ಕೇರಳದ ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಬಂಧಿತಳಾಗಿರುವ ಸ್ವಪ್ನಾ ಸುರೇಶ್‌ ಮತ್ತು ಇತರ ಆರೋಪಿಗಳಿಗೂ ಸ್ಯಾಂಡಲ್‌ವುಡ್‌ ಡ್ರಗ್ಸ್‌ ದಂಧೆಯ ಕೇಸಿನ ಆರೋಪಿಗಳಿಗೂ ಸಂಪರ್ಕವಿದ್ದ ಸಂಗತಿ ಬಯಲಾದ ಬೆನ್ನಲ್ಲೇ ಬೆಂಗಳೂರು ಇ.ಡಿ. ಘಟಕ ತನಿಖೆ ಚುರುಕುಗೊಳಿಸಿದೆ. ಅಲ್ಲದೆ ಡ್ರಗ್ಸ್‌ ದಂಧೆಯಲ್ಲಿ ನಡೆದಿರಬಹುದಾದ ಅಕ್ರಮ ಹಣ ವರ್ಗಾವಣೆ ಬಗ್ಗೆ ಜಾರಿ ನಿರ್ದೇಶನಾಲಯ ಎಫ್ಐಆರ್‌ ದಾಖಲಿಸಿಕೊಂಡಿದೆ.

ಆರೋಪಿಗಳ ಹಣಕಾಸು ವ್ಯವಹಾರ, ಅವರ ಬ್ಯಾಂಕ್‌ ಖಾತೆಗಳು, ಅವರ ಆಸ್ತಿಪಾಸ್ತಿ ಬಗ್ಗೆ ಹಂತ ಹಂತವಾಗಿ ತನಿಖೆ ನಡೆಯಲಿದೆ ಎಂದು ಇ.ಡಿ.ಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹಲವು ಆರೋಪಿಗಳು ಕಸ್ಟಡಿಯಲ್ಲಿದ್ದಾರೆ. ಅವರ ತನಿಖೆ ಪೂರ್ಣಗೊಂಡ ಬಳಿಕ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಬಗ್ಗೆ ತೀರ್ಮಾನಿ ಸಲಾಗುತ್ತದೆ. ಇಡೀ ರಾಜ್ಯದ ವ್ಯಾಪ್ತಿಯನ್ನು ತನಿಖೆಗೆ ಪರಿಗಣಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

Advertisement

ಇ.ಡಿ. ಅಧಿಕಾರಿಗಳು ಶುಕ್ರವಾರ ಸಿಸಿಬಿ ಕಚೇರಿಗೂ ಭೇಟಿ ನೀಡಿ ವೀರೇನ್‌ ಖನ್ನಾ, ನಿಯಾಜ್‌, ರವಿಶಂಕರ್‌ ಸಹಿತ ಹಲವರನ್ನು ವಿಚಾರಣೆ ನಡೆಸಿದ್ದಾರೆ. ಖನ್ನಾಗೆ ಸಂಬಂಧಿಸಿದ ಪಾಸ್‌ಪೋರ್ಟ್‌ ಮತ್ತು ಕೆಲವು ದಾಖಲೆಗಳನ್ನು ಸಂಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದಿಕ್ಕು ತಪ್ಪಿಸಿದ ಸಂಬರಗಿ?
ಡ್ರಗ್ಸ್‌ ದಂಧೆಯ ಬಗ್ಗೆ ಪತ್ರಿಕಾಗೋಷ್ಠಿಗಳನ್ನು ನಡೆಸಿ ಸುದ್ದಿಯಾಗಿದ್ದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರಗಿ ಸಿಸಿಬಿ ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಯಾವುದೇ ಮಾಹಿತಿ ಅಥವಾ ದಾಖಲೆ ಕೊಟ್ಟಿಲ್ಲ. ವಿಚಾರಣೆ ವೇಳೆ ತನಿಖೆಗೆ ಪೂರಕವಾಗುವಂತಹ ಯಾವುದೇ ಮಾಹಿತಿ ಅಥವಾ ದಾಖಲೆಯನ್ನು ನೀಡಿಲ್ಲ. ಹಳೆಯ ಕೆಲವು ವಿಚಾರಗಳನ್ನು ಮಾತ್ರವೇ ಹೇಳುತ್ತಾರೆ. ಅದರಲ್ಲಿ ತನಿಖೆಗೆ ಪೂರಕವಾಗುವ ಒಂದಂಶವೂ ಕಂಡುಬಂದಿಲ್ಲ. ಹೀಗಾಗಿ ಮತ್ತೂಮ್ಮೆ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದರಿಂದಾಗಿ ಸಂಬರಗಿ ಗಾಳಿಯಲ್ಲಿ ಗುಂಡು ಹಾರಿಸಿದಂತೆ ಪೊಲೀಸರ ದಿಕ್ಕು ತಪ್ಪಿಸಿದ್ದಾನೆ ಎಂಬ ಮಾತುಗಳು ಕೇಳಿಬರುತ್ತಿವೆ.

ನೋಟಿಸ್‌ ಹಿನ್ನೆಲೆಯಲ್ಲಿ ಶನಿವಾರ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದ ಸಂಬರಗಿಯನ್ನು ಎಸಿಪಿ ಗೌತಮ್‌, ಇನ್ಸ್‌ಪೆಕ್ಟರ್‌ ಮೊಹಮದ್‌ ಸಿರಾಜುದ್ದೀನ್‌ ಹಲವು ತಾಸುಗಳ ಕಾಲ ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಡ್ರಗ್ಸ್‌ ದಂಧೆ ಕೇಸ್‌ನ ಆರೋಪಿ ರಾಹುಲ್‌ ಜತೆಗಿನ ಪೋಟೋ ಆಧರಿಸಿ ಆತನ ಜತೆಗಿನ ನಂಟಿನ ಬಗ್ಗೆಯೂ ತನಿಖಾಧಿಕಾರಿಗಳು ಪ್ರಶ್ನಿಸಿದ್ದಾರೆ. ಇದಕ್ಕೆ ಸ್ನೇಹಿತರೊಬ್ಬರ ಮೂಲಕ ಕೆಲವು ವರ್ಷಗಳ ಹಿಂದೆ ರಾಹುಲ್‌ನನ್ನು ಭೇಟಿಯಾಗಿದ್ದೆ ಎಂದು ಹೇಳಿ ನುಣುಚಿಕೊಂಡಿದ್ದಾನೆ ಎನ್ನಲಾಗಿದೆ.

ವೈಭವ್‌ ಜೈನ್‌ ಬಂಧನ
ಡ್ರಗ್ಸ್‌ ದಂಧೆಯಲ್ಲಿ ರವಿಶಂಕರ್‌, ನಟಿಯರ ಬಂಧನ ಆಗುತ್ತಿದ್ದಂತೆ ತಲೆಮರೆಸಿ ಕೊಂಡಿದ್ದ ಆರೋಪಿ ವೈಭವ್‌ ಜೈನ್‌ ಸಿಸಿಬಿ ಬಲೆಗೆ ಬಿದ್ದಿದ್ದಾನೆ. ನ್ಯಾಯಾಲಯದ ಮುಂದೆ ಆತನನ್ನು ಹಾಜರುಪಡಿಸಿ ಐದು ದಿನಗಳ ಕಾಲ ಕಸ್ಟಡಿಗೆ ಪಡೆಯಲಾಗಿದೆ. ಆತನ ವಿಚಾರಣೆ ಮುಂದುವರಿಸಲಾಗಿದೆ ಎಂದು ಅಪರಾಧ ನಿಯಂತ್ರಣ ವಿಭಾಗ (ಸಿಸಿಬಿ) ಪೊಲೀಸರು ತಿಳಿಸಿದ್ದಾರೆ. ಸದ್ಯ ಬೆಂಗಳೂರು ನಿವಾಸಿಯಾಗಿರುವ ವೈಭವ್‌ ಜೈನ್‌ ಹಲವು ವರ್ಷಗಳಿಂದ ದಂಧೆಯಲ್ಲಿ ಸಕ್ರಿಯನಾಗಿದ್ದಾನೆ. ಆರೋಪಿ ರವಿಶಂಕರ್‌ ಜತೆಗೂ ಅವನಿಗೆ ಸಂಪರ್ಕವಿದೆ. ನೈಜೀರಿಯಾ ಪ್ರಜೆಗಳಿಂದ ಡ್ರಗ್ಸ್‌ ತರಿಸಿಕೊಳ್ಳುತ್ತಿದ್ದ ವೈಭವ್‌ ಅದನ್ನು ಹೈ ಪ್ರೊಫೈಲ್‌ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿದ್ದ. ಬೆಂಗಳೂರಿನಲ್ಲಿ ಡ್ರಗ್ಸ್‌ ಪೂರೈಕೆಯ ಪ್ರಮುಖ ಕಿಂಗ್‌ಪಿನ್‌ಗಳಲ್ಲಿ ಈತನೂ ಒಬ್ಬ. ವೈಭವ್‌ ಜೈನ್‌ ರವಿಶಂಕರ್‌ಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ, ಬಳಿಕ ಅದು ನಟಿಯರಿಗೂ ತಲುಪುತ್ತಿತ್ತು. ಆರೋಪಿಯ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೆತ್ತಗಾದ ನಟಿಯರು
ಮಹಿಳಾ ಸಾಂತ್ವನ ಕೇಂದ್ರದಲ್ಲಿರುವ ನಟಿಯರಾದ ರಾಗಿಣಿ ಮತ್ತು ಸಂಜನಾ ಅವರನ್ನು ತನಿಖಾಧಿಕಾರಿಗಳು ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. ತನಿಖೆಗೆ ಸಹಕರಿಸುವಂತೆ ನ್ಯಾಯಾಲಯ ಸೂಚಿಸಿದ್ದ ಹಿನ್ನೆಲೆಯಲ್ಲಿ ನಟಿಯರಿಬ್ಬರೂ ಅಧಿಕಾರಿಗಳ ಬಳಿ ಕೆಲವು ಮಾಹಿತಿ ಹಂಚಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಫೈಜಲ್‌ಗಾಗಿ ಹುಡುಕಾಟ
ಪ್ರಕರಣದ ಮತ್ತೂಬ್ಬ ಆರೋಪಿ, ಶಾಸಕರೊಬ್ಬರ ಆಪ್ತ ಎನ್ನಲಾದ ಶೇಖ್‌ ಫೈಜಲ್‌ ಬಂಧನಕ್ಕೆ ಸಿಸಿಬಿ ತನಿಖೆ ಚುರುಕುಗೊಳಿಸಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಶೇಖ್‌ ತಲೆಮರೆಸಿಕೊಂಡಿದ್ದು, ಆತನ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಆರೋಪಿ ಶೇಖ್‌ ದುಬಾೖಯಲ್ಲಿ ನಡೆದ ಕ್ರಿಕೆಟ್‌ ಲೀಗ್‌ನಲ್ಲಿ ಪಾಲ್ಗೊಂಡಿದ್ದ, ತಂಡವೊಂದರ ಪ್ರಾಯೋಜಕತ್ವದಲ್ಲಿ ಪಾಲು ಹೊಂದಿದ್ದ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next