ನವದೆಹಲಿ: “ಉದ್ಯೋಗಕ್ಕಾಗಿ ಜಮೀನು’ ಹಗರಣ ಸಂಬಂಧ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರ ಕುಟುಂಬ ಸದಸ್ಯರು ಹಾಗೂ ಪಕ್ಷದ ನಾಯಕರ ಮನೆಗಳಲ್ಲಿ ಶುಕ್ರವಾರ ಜಾರಿ ನಿರ್ದೇಶನಾಲಯ ಸರಣಿ ಶೋಧಕಾರ್ಯ ಕೈಗೊಂಡಿದೆ. ಬಿಹಾರದ ಹಲವು ಪ್ರದೇಶಗಳಲ್ಲಿ ಮಾತ್ರವಲ್ಲದೇ, ಇತರೆ ರಾಜ್ಯಗಳಲ್ಲೂ ಇ.ಡಿ ದಾಳಿ ನಡೆದಿದೆ.
ಬಿಹಾರ ಡಿಸಿಎಂ ತೇಜಸ್ವಿ ಯಾದವ್ ಅವರ ದೆಹಲಿಯ ನಿವಾಸ, ಲಾಲು ಪುತ್ರಿಯರಾದ ರಾಗಿಣಿ ಯಾದವ್, ಚಂದಾ ಯಾದವ್ ಮತ್ತು ಹೇಮಾ ಯಾದವ್ ಅವರಿಗೆ ಸಂಬಂಧಪಟ್ಟ ಮನೆಗಳು, ಆರ್‌ಜೆಡಿ ಮಾಜಿ ಶಾಸಕ ಅಬು ದೋಜಾನಾ ಅವರ ಮನೆ ಮಾತ್ರವಲ್ಲದೇ ಪಾಟ್ನಾ, ಪುಲ್ವಾರಿ ಷರೀಫ್, ದೆಹಲಿ-ಎನ್‌ಸಿಆರ್, ರಾಂಚಿ, ಮುಂಬೈ ಸೇರಿದಂತೆ ವಿವಿಧೆಡೆ ಇ.ಡಿ. ಅಧಿಕಾರಿಗಳು ಶೋಧಕಾರ್ಯ ನಡೆಸಿ, ಕಾಗದಪತ್ರಗಳನ್ನು ಪರಿಶೀಲಿಸಿದ್ದಾರೆ.
ದಾಳಿ ಬಗ್ಗೆ ಪ್ರತಿಕ್ರಿಯಿಸಿದ ತೇಜಸ್ವಿ ಯಾದವ್, “ನಾವು ಫ್ಯಾಸಿಸ್ಟ್‌ಗಳು, ಗಲಭೆಕೋರರ ಮುಂದೆ ಮಂಡಿಯೂರಲಿಲ್ಲ ಎಂಬ ಏಕೈಕ ಕಾರಣ ನಮ್ಮ ಕುಟುಂಬವನ್ನು ಹಿಂಸಿಸಲಾಗುತ್ತಿದೆ. ನನ್ನ ಪತ್ನಿ ತುಂಬು ಗರ್ಭಿಣಿ. ಈ ಸಮಯದಲ್ಲಿ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ’ ಎಂದಿದ್ದಾರೆ.