ಕೋಲ್ಕತಾ: ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸತತ 27 ಗಂಟೆಗಳ ವಿಚಾರಣೆ ನಂತರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶನಿವಾರ (ಜುಲೈ 23) ಬೆಳಗ್ಗೆ ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿಯನ್ನು ಬಂಧಿಸಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂಕಷ್ಟಕ್ಕೆ ಸಿಲುಕಿದಂತಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ನಾನೂ ಸಿಎಂ ಆಗ್ಬೇಕು.. .; ಕಾಂಗ್ರೆಸ್ ಗೆ ತುಟ್ಟಿಯಾಗುತ್ತಿದೆಯೇ ಸಿಎಂ ಆಕಾಂಕ್ಷಿಗಳ ಪಟ್ಟಿ
ಶುಕ್ರವಾರ ಬೆಳಗ್ಗೆ 10-30ಕ್ಕೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಚಟರ್ಜಿಯನ್ನು ಹಗಲು, ರಾತ್ರಿ ವಿಚಾರಣೆಗೊಳಪಡಿಸಿದ ನಂತರ ಶನಿವಾರ ಬೆಳಗ್ಗೆ 10ಗಂಟೆಗೆ ಬಂಧಿಸಿರುವುದಾಗಿ ಮೂಲಗಳು ಹೇಳಿವೆ.
ಸಚಿವ ಪಾರ್ಥ ಚಟರ್ಜಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ತಮ್ಮ ವಶಕ್ಕೆ ನೀಡುವಂತೆ ಜಾರಿ ನಿರ್ದೇಶನಾಲಯ ಮನವಿ ಮಾಡಿಕೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಜಿ ಶಿಕ್ಷಣ ಸಚಿವರಾಗಿದ್ದ ಪಾರ್ಥ ಹಾಲಿ ಕೈಗಾರಿಕಾ ಸಚಿವರಾಗಿದ್ದಾರೆ.
ವಿಚಾರಣೆ ಸಂದರ್ಭದಲ್ಲಿ ಪಾರ್ಥ ಚಟರ್ಜಿ ತಮ್ಮ ಅಧಿಕಾರಿಗಳಿಗೆ ಸಹಕರಿಸದೇ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆರೋಪಿಸಿದ್ದಾರೆ. ಈಗಾಗಲೇ ಸಚಿವ ಪಾರ್ಥ ಚಟರ್ಜಿ ಅವರ ನಿಕಟವರ್ತಿ ಅರ್ಪಿತಾ ಮುಖರ್ಜಿ ಮನೆಯಲ್ಲಿ 20 ಕೋಟಿ ರೂಪಾಯಿ ಹಣವನ್ನು ಇ.ಡಿ ವಶಪಡಿಸಿಕೊಂಡಿದ್ದು, ಮುಖರ್ಜಿಯನ್ನು ಬಂಧಿಸಿತ್ತು.