ಬೆಂಗಳೂರು: ಕರ್ನಾಟಕವು ದೇಶದಲ್ಲೇ ಅತ್ಯಂತ ಉತ್ತಮ ಆರ್ಥಿಕತೆ ನಿರ್ವಹಣೆಯ ರಾಜ್ಯ ಎನ್ನುವ ಮೂಲಕ ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರ್ಥಿಕ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅಂಬೇಡ್ಕರ್ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರು ಡಾ.ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಶೈಕ್ಷಣಿಕ ಚಟುವಟಿಕೆಗೆ ಚಾಲನೆ ನೀಡಿ ಮಾತನಾಡಿದ ಅವರು, ಯುಪಿಎ ಸರ್ಕಾರದ ಆಡಳಿತದಲ್ಲಿ 72 ಸಾವಿರ ಕೋಟಿ ರೂ.ನಷ್ಟು ರೈತರ ಸಾಲ ಮನ್ನಾ ಮಾಡಲಾಗಿತ್ತು ಇದರಿಂದ ರೈತರಿಗೆ ಸಹಾಯವಾಗಿತ್ತು. ರಾಜ್ಯ ಸರ್ಕಾರ ಇತ್ತೀಚೆಗೆ 8165 ಕೋಟಿ ರೂ.ಗಳ ರೈತರ ಸಾಲ ಮನ್ನಾ ಮಾಡಿದೆ. ಇಷ್ಟಾಗಿಯೂ ಆರ್ಥಿಕ ಶಿಸ್ತು ಕಳೆದುಕೊಂಡಿಲ್ಲ. ಸಿದ್ದರಾಮಯ್ಯ ಅವರು ಅತ್ಯುತ್ತಮವಾಗಿ ಆರ್ಥಿಕತೆಯ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಶೈಕ್ಷಣಿಕ ಅಭಿವೃದ್ಧಿ: ಭಾರತೀಯ ವಿಜ್ಞಾನ ಸಂಸ್ಥೆ, ರಾಷ್ಟ್ರೀಯ ಕಾನೂನು ಶಾಲೆ, ಭಾರತೀಯ ನಿರ್ವಹಣಾ ಸಂಸ್ಥೆ ಇತ್ಯಾದಿ ಬೆಂಗಳೂರು ಉನ್ನತ ಶಿಕ್ಷಣದ ಗುಣಮಟ್ಟವನ್ನು ಜಾಗತಿಕ ಮಟ್ಟದಲ್ಲಿ ಬಿಂಬಿಸುತ್ತಿವೆ. ಜಗತ್ತಿನ ವಿವಿಧ ಭಾಗದ 45 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾರತದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಅದರಲ್ಲಿ 13,600 ವಿದ್ಯಾರ್ಥಿಗಳು ಕರ್ನಾಟಕದಲ್ಲೇ ಇದ್ದಾರೆ. ಆರ್ಥಿಕತೆ, ಸಾಮಾಜಿಕ ವಿಜ್ಞಾನ ಮತ್ತು ಆರ್ಥಿಕ ಸಮಸ್ಯೆಯ ಸಮಗ್ರ ಅಧ್ಯಯನಕ್ಕಾಗಿ ರಾಜ್ಯ ಹಾಗೂ ದೇಶದ ಅಭಿವೃದ್ಧಿಗೂ ಈ ಬೆಳವಣಿಗೆ ಪೂರಕ ಎಂದು ಹೇಳಿದರು.
ಆರ್ಥಿಕತೆ ಬದಲಾಗುತ್ತಿದೆ: ಆರ್‌ಬಿಐ ಮಾಜಿ ಗವರ್ನರ್ ಡಾ.ಸಿ.ರಂಗರಾಜನ್ ಮಾತನಾಡಿ, ಈ ಸಂಸ್ಥೆಯಲ್ಲಿ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ದೇಶ, ವಿದೇಶದಲ್ಲಿ ಆರ್ಥಿಕತೆ ಓದುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಇದೆ. 50-60 ವರ್ಷಗಳ ಹಿಂದೆ ಸೂಕ್ಷ್ಮ ಮತ್ತು ಅತಿಸೂಕ್ಷ್ಮಆರ್ಥಿಕತೆ, ಸಾರ್ವಜನಿಕ ಹಣಕಾಸು, ವಿದೇಶಿ ಹಣಕಾಸು ಮಾತ್ರ ಇತ್ತು. ಇಂದು ಅರ್ಥಿಕತೆಯಲ್ಲಿ ಅನೇಕ ಶಾಖೆಗಳು ಹುಟ್ಟಿಕೊಂಡಿದೆ. ಜತೆಗೆ ಸಮಸ್ಯೆಯೂ ಸೃಷ್ಟಿಯಾಗುತ್ತಿದೆ. ಆರ್ಥಿಕತೆ ಅಪ್ಲಿಕೇಷನ್ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಸೇವೆ ಸಲ್ಲಿಸಬೇಕು ಎಂದರು.
ಪರೀಕ್ಷಾ ವಿಧಾನ ಬದಲಾಗಬೇಕು: ಸಂಶೋಧನೆಯ ಆಧಾರದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಉನ್ನತೀಕರಿಸಬೇಕು. ಪರೀಕ್ಷಾ ಪದ್ಧತಿ ಹಾಗೂ ಮೌಲ್ಯಮಾಪನ ವಿಧಾನ ಬದಲಾದರೆ, ವಿದ್ಯಾರ್ಥಿಗಳು, ಶಿಕ್ಷಕರು ಬದಲಾಗುತ್ತಾರೆ. ಇದರಿಂದ ಶಿಕ್ಷಣ ವ್ಯವಸ್ಥೆಯೇ ಸುಧಾರಿಸುತ್ತದೆ ಎಂದು ಸಲಹೆ ನೀಡಿದರು.
ಸಂಸದರಾದ ಡಾ.ಎಂ.ವೀರಪ್ಪಮೊಯ್ಲಿ, ಕೆ.ಎಚ್. ಮುನಿಯಪ್ಪ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ಸಚಿವರಾದ ಆರ್.ವಿ.ದೇಶಪಾಂಡೆ, ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್, ರೋಷನ್ ಬೇಗ್, ಡಾ.ಎಚ್.ಸಿ.ಮಹದೇವಪ್ಪ, ಎಚ್. ಆಂಜನೇಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಎಸ್.ವಿ.ರಂಗನಾಥ್, ಬೆಂಗಳೂರು ಡಾ.ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ನಿರ್ದೇಶಕ ಡಾ.ಆರ್.ಎಸ್.ದೇಶಪಾಂಡೆ ಇತರರು ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬದ್ಧತೆ ಹೊಂದಿರುವ ಅಧಿಕಾರಿ ವರ್ಗ ಸಿಕ್ಕಿದೆ. ಹಲವು ಬಜೆಟ್ ಮಂಡನೆಯ ಮೂಲಕ ಸಾಮಾಜಿಕ ನ್ಯಾಯ ಹಾಗೂ ಆರ್ಥಿಕ ಸಮಾನತೆಗೆ ಪ್ರಯತ್ನ ಮಾಡಿದ್ದಾರೆ. ಯುಪಿಎ ಸರ್ಕಾರ ಜಾರಿಗೆ ತಂದಿದ್ದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ಕರ್ನಾಟಕದಲ್ಲಿ ಮಾತ್ರ ಪರಿಣಾಮಕಾರಿಯಾಗಿ ಜಾರಿಯಾಗಿದೆ.
●ಡಾ.ಮನಮೋಹನ ಸಿಂಗ್, ಮಾಜಿ ಪ್ರಧಾನಿ