Advertisement

ಸಿಎಂಗಷ್ಟೇ ಸೀಮಿತವಾದ ಮಿತವ್ಯಯ ಸರ್ಕಾರ!

06:00 AM Sep 10, 2018 | Team Udayavani |

ಬೆಂಗಳೂರು: ರಾಜ್ಯದ ಆರ್ಥಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಘೋಷಿಸಿದ್ದ ಆರ್ಥಿಕ ಮಿತವ್ಯಯ ಕ್ರಮಗಳು ಸರ್ಕಾರ ರಚನೆಯಾಗಿ 100 ದಿನ ಕಳೆದರೂ ಜಾರಿಗೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ.

Advertisement

ಮಿತವ್ಯಯ ಕ್ರಮಗಳು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ  ಮತ್ತು ವಿಧಾನಸಭಾ ಸಭಾಧ್ಯಕ್ಷ ರಮೇಶ್‌ ಕುಮಾರ್‌ ಅವರಿಗೆ ಮಾತ್ರ ಸೀಮಿತವಾಗಿದೆ. ಈ ಕುರಿತ ಅಧಿಕೃತ ಆದೇಶ ಹೊರಡಿಸಲು ಸಚಿವರು ಮತ್ತು ಹಿರಿಯ ಅಧಿಕಾರಿಗಳ ಮಟ್ಟದಲ್ಲೇ ಆಕ್ಷೇಪ ವ್ಯಕ್ತವಾಗುತ್ತಿದೆ.

ರೈತರ ಸಾಲ ಮನ್ನಾ ಸೇರಿದಂತೆ ಸಮ್ಮಿಶ್ರ ಸರ್ಕಾರದಲ್ಲಿ ಎರಡೂ ಪಕ್ಷಗಳ ಪ್ರಣಾಳಿಕೆಗಳ ಘೋಷಣೆಗಳನ್ನು ಜಾರಿಗೊಳಿಸಲು ಸಂಪನ್ಮೂಲ ಕ್ರೂಢೀಕರಿಸುವ ನಿಟ್ಟಿನಲ್ಲಿ ಅನಗತ್ಯ ಹಾಗೂ ದುಂದು ವೆಚ್ಚಗಳಿಗೆ ಕಡಿವಾಣ ಹಾಕಲು ನಿರ್ಧರಿಸಿದ್ದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಧಿಕಾರಕ್ಕೆ ಬಂದ ತಕ್ಷಣವೇ ಅನಗತ್ಯ ವೆಚ್ಚ ನಿಯಂತ್ರಿಸುವಂತೆ ಸೂಚನೆ ನೀಡಿದ್ದರು. ಅಲ್ಲದೆ, ತಾವೇ ಈ ಮುಂಚೂಣಿಯಲ್ಲಿ ನಿಂತು ಮಿತವ್ಯಯ ಕ್ರಮಗಳಿಗೆ ಚಾಲನೆ ನೀಡಿದ್ದರು.

ಆದರೆ, ನಂತರದಲ್ಲಿ ಆ ನಿಟ್ಟಿನಲ್ಲಿ ಯಾವುದೇ ಕ್ರಮಗಳು ಜಾರಿಯಾಗಿಲ್ಲ. ರೈತರ ಸಾಲ ಮನ್ನಾ ಹೊರೆ ಜತೆಗೆ ಇದೀಗ ಕೊಡಗು ಸೇರಿದಂತೆ ರಾಜ್ಯದ ಹಲವೆಡೆ ಕಂಡು ಬಂದಿರುವ ಅತಿವೃಷ್ಠಿ, ಕೆಲವು ಜಿಲ್ಲೆಗಳಲ್ಲಿ ಬರಗಾಲ ಪರಿಸ್ಥಿತಿಯಿಂದಾಗಿ ರಾಜ್ಯದ ಬೊಕ್ಕಸದ ಮೇಲೆ ಪರಿಹಾರ ಕಾರ್ಯಕ್ರಮಗಳನ್ನು ಕೈಗೊಳ್ಳುವ ಹೊರೆಯೂ ಬಿದ್ದಿದೆ. ಆದರೆ, ಆರ್ಥಿಕ ಮಿತವ್ಯಯದ ಮೂಲಕ ಈ ಹೊರೆ ಕಡಿಮೆ ಮಾಡಿಕೊಳ್ಳುವ ಆದೇಶ ಮಾತ್ರ ಇನ್ನೂ ಹೊರಬಿದ್ದಿಲ್ಲ. ಇದರಿಂದಾಗಿ ಮುಖ್ಯಮಂತ್ರಿಗಳ ಮೌಖೀಕ ಸೂಚನೆಗೆ ಕಿಮ್ಮತ್ತು ಸಿಗದಂತಾಗಿದೆ.

ಮುಖ್ಯಮಂತ್ರಿಗೆ ಮಾತ್ರ ಸೀಮಿತವೇ?:
ಆರ್ಥಿಕ ಮಿತವ್ಯಯ ಕುರಿತಂತೆ ಆದೇಶ ಹೊರಬೀಳದ ಕಾರಣ ಪ್ರಸ್ತುತ ಇದು ಮುಖ್ಯಮಂತ್ರಿಗಳಿಗೆ ಮಾತ್ರ ಸೀಮಿತ ಎನ್ನುವಂತಾಗಿದೆ. ತಮ್ಮ ಮನೆಯನ್ನೇ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಮಾಡಿಕೊಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಅಧಿಕೃತ ನಿವಾಸದಿಂದ ಆಗಬಹುದಾದ ಹೊರೆ ಕಮ್ಮಿ ಮಾಡಿಕೊಂಡಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಸಚಿವಾಲಯದಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿದ್ದ 50ಕ್ಕೂ ಹೆಚ್ಚು ಹೊರಗುತ್ತಿಗೆ ಸಿಬ್ಬಂದಿಯನ್ನು ಕಡಿತಗೊಳಿಸಿದ್ದಾರೆ. ಹೊಸ ವಾಹನ ಖರೀದಿ, ಭದ್ರತೆ ವೆಚ್ಚಗಳಿಗೂ ನಿಯಂತ್ರಣ ಹೇರಿದ್ದಾರೆ.

Advertisement

ಇನ್ನೊಂದೆಡೆ ಸರ್ಕಾರದಲ್ಲಿರುವ ಇತರೆ ಸಚಿವರು ಅಂತಹ ಯಾವುದೇ ಕ್ರಮಕ್ಕೂ ಮುಂದಾಗಿಲ್ಲ. ಸುಮಾರು 9 ಸಚಿವರು ತಮ್ಮ ಕಚೇರಿಗಳ ಆಧುನೀಕರಣ, ಹೊಸ ಪೀಠೊಪಕರಣಗಳ ಖರೀದಿಗಾಗಿ ಸುಮಾರು 60.5 ಲಕ್ಷ ರೂ. ವೆಚ್ಚದ ಪ್ರಸ್ತಾವನೆಗಳನ್ನು ಆರ್ಥಿಕ ಇಲಾಖೆಗೆ ಕಳುಹಿಸಿಕೊಟ್ಟಿದ್ದಾರೆ. ಅಲ್ಲದೆ, ಇದಕ್ಕೆ ಒಪ್ಪಿಗೆ ಸೂಚಿಸುವಂತೆ ಮುಖ್ಯಮಂತ್ರಿಗಳ ಮೂಲಕವೇ ಒತ್ತಡ ಹೇರುತ್ತಿದ್ದಾರೆ. ಇದಲ್ಲದೆ, ಸಾಕಷ್ಟು ಸಚಿವರು ತಮ್ಮ ಕಚೇರಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ಸಿಬ್ಬಂದಿ ನಿಯೋಜಿಸಿಕೊಂಡಿದ್ದು, ಅವರ ಸಂಖ್ಯೆ ಕಡಿತಗೊಳಿಸಲು ಒಪ್ಪುತ್ತಿಲ್ಲ ಎನ್ನಲಾಗಿದೆ.

ಕಾರು ಬಳಕೆಗೆ ಬಿದ್ದಿಲ್ಲ ಕಡಿವಾಣ:
ಸರ್ಕಾರದ ಮೇಲೆ ಹೊರೆ ಹೆಚ್ಚಾಗಲು ಪ್ರಮುಖ ಕಾರಣ ಕಾರುಗಳ ಬಳಕೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹೊಸ ಕಾರುಗಳ ಖರೀದಿಗೆ ಸ್ವಲ್ಪ ಮಟ್ಟಿಗೆ ಕಡಿವಾಣ ಹಾಕಿದೆ. ಹಿಂದಿನ ಸರ್ಕಾರದಲ್ಲಿ ಈ ಕುರಿತಂತೆ ಕೈಗೊಂಡ ತೀರ್ಮಾನಗಳಿಗೆ ಅನುಮತಿ ನೀಡುವುದನ್ನು ಹೊರತುಪಡಿಸಿ ಹೊಸದಾಗಿ ಕಾರು ಖರೀದಿ ಬೇಡ ಎಂಬ ಮೌಖೀಕ ಸೂಚನೆಯನ್ನು ಎಲ್ಲಾ ಇಲಾಖಾ ಮುಖ್ಯಸ್ಥರಿಗೆ ನೀಡಲಾಗಿದೆ. ಆದರೆ, ಬಳಕೆಗೆ ಮಾತ್ರ ಕಡಿವಾಣ ಬೀಳುತ್ತಿಲ್ಲ.
ಕೆಲವು ಹಿರಿಯ ಅಧಿಕಾರಿಗಳು ತಮ್ಮ ಸ್ವಂತ ಬಳಕೆಗೆ ಸರ್ಕಾರ ನೀಡಿರುವ ಕಾರಿನ ಜತೆಗೆ ಇಲಾಖೆಯಿಂದ ಹೆಚ್ಚುವರಿ ಕಾರುಗಳನ್ನು ಪಡೆದು ತಮ್ಮ ಕುಟುಂಬ ಸದಸ್ಯರಿಗಾಗಿ ಬಳಸುವ ಪ್ರಕ್ರಿಯೆ ಇನ್ನೂ ಮುಂದುವರಿದಿದೆ. ಅನೇಕ ಐಎಎಸ್‌, ಐಪಿಎಸ್‌, ಐಎಫ್ಎಸ್‌ ಅಧಿಕಾರಿಗಳು ಕನಿಷ್ಠ 2ರಿಂದ 3 ಸರ್ಕಾರಿ ಕಾರುಗಳನ್ನು ತಮ್ಮ ಹಾಗೂ ಕುಟುಂಬದ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದಾರೆ.

ಇನ್ನು ಸರ್ಕಾರಿ ವಾಹನ ಸೌಲಭ್ಯ ಇಲ್ಲದ ಕೆಲವು ಅಧಿಕಾರಿಗಳು ಬಾಡಿಗೆ ವಾಹನಗಳನ್ನು ಬಳಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಲವರು ತಾವೇ ಕಾರು ಖರೀದಿಸಿ ಅದನ್ನು ಬಾಡಿಗೆ ಆಧಾರದಲ್ಲಿ ಬಳಸಿಕೊಂಡು ಬೊಕ್ಕಸದಿಂದ ಹಣ ಪಡೆಯುತ್ತಿದ್ದಾರೆ.

ಇವೆಲ್ಲಕ್ಕೂ ಕಡಿವಾಣ ಹಾಕಿ ನಿಯಮಾನುಸಾರ ಅಧಿಕಾರಿಗಳಿಗೆ ವಾಹನ ಒದಗಿಸಲು ಮತ್ತು ವಾಹನ ಸೌಲಭ್ಯ ಇಲ್ಲದ ಅಧಿಕಾರಿಗಳಿಗೆ ವಾಹನ ಒದಗಿಸದೇ ಇರಲು ಕೂಡ ಮುಖ್ಯಮಂತ್ರಿಗಳು ಯೋಚಿಸಿದ್ದರಾದರೂ ಅದು ಪಾಲನೆಯಾಗುತ್ತಿಲ್ಲ. ತಮ್ಮ ಅಧಿಕಾರಿಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಸಚಿವರೇ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ಕಾರು ಬಳಕೆಗೆ ಒಪ್ಪಿಗೆ ಪಡೆದುಕೊಳ್ಳುತ್ತಿದ್ದಾರೆ. ಹೀಗಿರುವಾಗ ತಾವು ಮಾತ್ರ ಏಕೆ ವಾಹನ ಬಳಸಬಾರದು ಎಂದು ಇತರೆ ಅಧಿಕಾರಿಗಳು ಕೂಡ ಬಾಡಿಗೆ ವಾಹನ ಬಳಕೆ ಮುಂದುವರಿಸಿದ್ದಾರೆ.

ಸ್ಪೀಕರ್‌ ಅನುಸರಿಸುತ್ತಿದ್ದಾರೆ ಸಿಎಂ ದಾರಿ
ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ತಾವು ಮತ್ತು ತಮ್ಮ ಸಚಿವಾಲಯದಲ್ಲಿ ಆರ್ಥಿಕ ಮಿತವ್ಯಯ ಜಾರಿಗೊಳಿಸುತ್ತಿರುವಂತೆ ಸ್ಪೀಕರ್‌ ರಮೇಶ್‌ಕುಮಾರ್‌ ಮತ್ತು ಸಭಾಪತಿ ಬಸವರಾಜ ಹೊರಟ್ಟಿ ಅವರೂ ಮುನ್ನಡೆದಿದ್ದಾರೆ. ಶಾಸಕರ ಭವನದಲ್ಲಿ ಅನಗತ್ಯವಾಗಿ ಶಾಸಕರ ಬೆಂಬಲಿಗರು ತಂಗುವುದಕ್ಕೆ ಕಡಿವಾಣ ಹಾಕಿದ್ದಾರೆ. ಶಾಸಕರ ಭವನಕ್ಕೆ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ವೆಚ್ಚ ಮಾಡದಂತೆ ನೋಡಿಕೊಳ್ಳುತ್ತಿದ್ದಾರೆ. ಸ್ಪೀಕರ್‌ ರಮೇಶ್‌ಕುಮಾರ್‌ ಅವರಂತೂ ಸರ್ಕಾರದಿಂದ ಮನೆ ಪಡೆಯದೆ ಶಾಸಕರ ಭವನದ ತಮ್ಮ ಕೊಠಡಿಯಲ್ಲೇ ಇರುತ್ತಾರೆ.

ವಿದೇಶ ಪ್ರವಾಸಕ್ಕೆ ಕಡಿವಾಣ
ಸರ್ಕಾರಿ ಅಧಿಕಾರಿಗಳು, ಸಚಿವರ ವಿದೇಶ ಪ್ರವಾಸಕ್ಕೆ ಸರ್ಕಾರ ಕಡಿವಾಣ ಹಾಕಿದೆ. ವಿದೇಶ ಪ್ರವಾಸ ಸಂದರ್ಭದಲ್ಲಿ ನೇರವಾಗಿ ಮುಖ್ಯಮಂತ್ರಿಗಳ ಅನುಮತಿಗೆ ಪ್ರಸ್ತಾವನೆ ಕಳುಹಿಸದೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಕಳುಹಿಸಿಕೊಡಬೇಕು. ವಿದೇಶ ಪ್ರವಾಸದಿಂದ ಸರ್ಕಾರಕ್ಕೆ ಆಗುವ ಪ್ರಯೋಜನಗಳ ಮಾಹಿತಿಯನ್ನು ಮೊದಲೇ ನೀಡಬೇಕು ಎಂಬ ನಿರ್ಬಂಧಗಳನ್ನು ಹಾಕಲಾಗಿದೆ. ಆದರೆ, ಇಂತಹ ವಿದೇಶ ಪ್ರವಾಸಕ್ಕೆ ವಾರ್ಷಿಕ 5-6 ಕೋಟಿ ವೆಚ್ಚವಾಗಬಹುದು. ಇದು ಸರ್ಕಾರಕ್ಕೇನೂ ಹೆಚ್ಚಿನ ಹೊರೆ ಆಗುವುದಿಲ್ಲ. ಅದರ ಬದಲು ಅಧಿಕಾರಿಗಳ ಕಾರು ಬಳಕೆಗೆ ಕಡಿವಾಣ ಹಾಕಿದರೆ ಹೆಚ್ಚು ಲಾಭವಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

– ಪ್ರದೀಪ್‌ಕುಮಾರ್‌ ಎಂ.

Advertisement

Udayavani is now on Telegram. Click here to join our channel and stay updated with the latest news.

Next