Advertisement

ದೇಶದ ಪ್ರಗತಿಗೆ ಆರ್ಥಿಕತೆಯೊಂದೇ ಮುಖ್ಯವಲ್ಲ

01:20 PM Jul 04, 2022 | Team Udayavani |

ರಾಯಚೂರು: ದೇಶದ ಪ್ರಗತಿ ಎಂದರೆ ಕೇವಲ ಆರ್ಥಿಕ ಸಾಧನೆಯೊಂದೇ ಅಲ್ಲ. ಮನುಷ್ಯ-ಮನುಷ್ಯರ ನಡುವೆ ಉತ್ತಮ ಬಾಂಧವ್ಯ ನಿರ್ಮಿಸುವುದು ಕೂಡ ಪ್ರಗತಿಯ ಭಾಗವೇ ಎಂದು ಪ್ರಗತಿಪರ ಚಿಂತನೆ ಡಾ| ರಹಮತ್‌ ತರಿಕೆರೆ ಅಭಿಪ್ರಾಯ ಪಟ್ಟರು.

Advertisement

ನಗರದ ಪಂ| ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಆಯೋಜಿಸಿದ್ದ ಕರ್ನಾಟಕ ಜನಶಕ್ತಿ 3ನೇ ರಾಜ್ಯ ಸಮ್ಮೇಳನದಲ್ಲಿ ಉದ್ಘಾಟನಾ ಭಾಷಣ ಮಾಡಿದರು. ಮುಂಬೈನ ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲವಾಡ್‌ ಸೇರಿ ಮೂವರು ಹೋರಾಟಗಾರರ ಬಂಧನದ ವಿರುದ್ಧ ವೇದಿಕೆಯಲ್ಲಿ ಪ್ರತಿಭಟನೆ ಮೂಲಕ ರಾಜ್ಯ ಸಮ್ಮೇಳನ ಉದ್ಘಾಟಿಸಲಾಯಿತು. ಇಂದು ದೇಶ ಆರ್ಥಿಕ ಪ್ರಗತಿಯನ್ನು ಬಿಂಬಿಸಿ ಅಮಾನುಷ್ಯ ಕೃತ್ಯಗಳನ್ನು ಮರೆ ಮಾಚಲಾಗುತ್ತಿದೆ. ದೇಶದಲ್ಲಿ ಆತಂಕದ ಪರಿಸ್ಥಿತಿ ಏರ್ಪಟ್ಟಿದೆ. ಹಕ್ಕುಗಳನ್ನು ಪ್ರಶ್ನಿಸುವವರನ್ನೇ ಬಂಧಿಸಲಾಗುತ್ತಿದೆ. ಜನರಿಗೆ ಸತ್ಯ ಹೇಳಬೇಕಾದ ಮಾಧ್ಯಮಗಳನ್ನು ಕೂಡ ಏಕಪಕ್ಷೀಯ ಧೋರಣೆ ತಾಳಿರುವುದು ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದರು.

ಪಠ್ಯ-ಪುಸ್ತಕಗಳಲ್ಲೂ ಬ್ರಾಹ್ಮಣ್ಯವಾದ ಹೇರಲಾಗುತ್ತಿದೆ. ಅಮಾನುಷ್ಯದತ್ತ ಭಾರತ ಸಾಗುತ್ತಿದೆ. ಸಂವಿಧಾನದಡಿ ಪ್ರಮಾಣ ವಚನ ಸ್ವೀಕರಿಸಿದವರು, ತಮ್ಮ ಜೊತೆಗೆ ಬಾಳುವವರನ್ನು ಬೇರ್ಪಡಿಸಿ ನೋಡುವ ವ್ಯವಸ್ಥೆ ಇದೆ. ಇಂಥ ಸನ್ನಿವೇಶದಲ್ಲಿ ಹೋರಾಟ ನಡೆಸಬೇಕಾದ ಪ್ರಜಾಸತ್ತಾತ್ಮಕ ಸಂಘಟನೆಗಳು ದಿಕ್ಕಿಗೊಂದಾಗಿವೆ. ಎಲ್ಲರೂ ಇಂಥ ವ್ಯವಸ್ಥೆ ಹೊಡೆದೊಡಿಸಲು ಸಮಾನ ಮನಸ್ಕ ಸಂಘಟನೆಗಳು ಬೆಸೆದುಕೊಳ್ಳುವ ಅನಿವಾರ್ಯತೆ ಇದೆ. ಆರ್ಥಿಕವಾಗಿ ಎಷ್ಟೇ ಸಾಧನೆ ಮಾಡಿದರೂ ಮಾನವ ಸಂಬಂಧಗಳನ್ನು ಕಡೆಗಣಿಸಿದರೆ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಎಚ್‌.ಆರ್‌. ಬಸವರಾಜಪ್ಪ ಮಾತನಾಡಿ, ಸಾಮಾಜಿಕ ಅಸಮಾನತೆ, ಜಾತಿ ತಾರತಮ್ಯ ಕಂಡಾಗ ಸ್ವಾತಂತ್ರ್ಯದ ಪರಿಕಲ್ಪನೆ ಈಡೇರಿದೆಯಾ ಎಂಬ ಅನುಮಾನ ಮೂಡದಿರದು. ಬಡವ ಇಂದಿಗೂ ಬಡತನದಲ್ಲಿಯೇ ಬಾಳುತ್ತಿದ್ದರೆ; ಉಳ್ಳವರ ಸಂಪತ್ತು ಏರಿಕೆಯಾಗುತ್ತಲೇ ಇದೆ. ಎಲ್ಲರಿಗೂ ಸಮಬಾಳು ಸಿಗುವ ನಿಟ್ಟಿನಲ್ಲಿ ಹೋರಾಟದ ಅನಿವಾರ್ಯತೆ ಇದೆ ಎಂದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಮುಖಂಡ ಎನ್‌.ವೆಂಕಟೇಶ್‌ ಮತ್ತು ಬೆಂಗಳೂರಿನ ಸೇಂಟ್‌ ಜೋಸೆಫ್‌ ಕಾನೂನು ಕಾಲೇಜಿನ ನಿರ್ದೇಶಕ ಫಾ. ಜೆರಾಲ್ಡ್‌ ಡೀಸೊಜಾ ಮಾತನಾಡಿದರು. ಭಾಷಣಕಾರರಾದ ಎನ್‌.ವೆಂಕಟೇಶ, ಮಹ್ಮದ್‌ ಯುಸೂಫ್‌ ಕನ್ನಿ, ಗಣೇಶದೇವಿ ಸೇರಿ ಅನೇಕರು ಮಾತನಾಡಿದರು. ರಾಜ್ಯದ ವಿವಿಧೆಡೆಯಿಂದ ಜನಪರ, ಪ್ರಗತಿಪರ ಸಂಘಟನೆಗಳ ಮುಖಂಡರು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ವಿವಿಧ ವಿಚಾರಗಳ ಗೋಷ್ಠಿ ನಡೆದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next