ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಲೋಕಸಭೆಯಲ್ಲಿ 2019-20ರ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದ್ದು, ಮುಂದಿನ 2020-2021ರ ಸಾಲಿನ ಏಪ್ರಿಲ್ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ 6ರಿಂದ 6.5ಕ್ಕೆ ಏರಿಕೆಯಾಗಲಿದೆ ಎಂದು ತಿಳಿಸಿದೆ.
ಬಜೆಟ್ ಪೂರ್ವ ಸಮೀಕ್ಷೆಯಲ್ಲಿ ದೇಶದ ಜಿಡಿಪಿ ಶೇ.5ರಷ್ಟು ಇದ್ದಿರುವುದಾಗಿ ತಿಳಿಸಿತ್ತು. ಅಲ್ಲದೇ 2019-2020ರ ಸಾಲಿನಲ್ಲಿ ದೇಶದ ಜಿಡಿಪಿ ಶೇ.7ರಷ್ಟು ಇರಲಿದೆ ಎಂದು ತಿಳಿಸಿತ್ತು. ವಾರ್ಷಿಕ ಹಣಕಾಸು ಸಮೀಕ್ಷೆಯ ವರದಿಯನ್ನು ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರ ನೇತೃತ್ವದ ತಂಡ ತಯಾರಿಸಿತ್ತು.
ದೇಶದ ಜಿಡಿಪಿ ಅಭಿವೃದ್ದಿ ಬಗ್ಗೆ ಸರ್ಕಾರ ಪ್ರಸಕ್ತ ಸಾಲಿನ ವಿತ್ತೀಯ ಕೊರತೆಯನ್ನು ನಿವಾರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆರ್ಥಿಕ ಸಮೀಕ್ಷೆ ವರದಿ ತಿಳಿಸಿದೆ.
ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ನಲ್ಲಿ ಹಣಕಾಸು ಕೊರತೆ ಗುರಿಯನ್ನು ಸಡಿಲಿಕೆ ಮಾಡಲು ಕೇಂದ್ರ ಮುಂದಾಗುವ ನಿರೀಕ್ಷೆ ಇದೆ ಎಂದು ವರದಿ ಹೇಳಿದೆ. ಆರ್ಥಿಕ ಹಿಂಜರಿಕೆಯಿಂದ ಕಂದಾಯ ಸಂಗ್ರಹದಲ್ಲಿ ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಜಾಗತಿಕ ವ್ಯಾಪಾರ ಸಂಘರ್ಷ ಮುಂದುವರಿದಲ್ಲಿ ಭಾರತೀಯ ರಫ್ತಿನ ಮೇಲೆ ಪರಿಣಾಮ ಬೀರಲಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.