ಮೈಸೂರು: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆಯಾಗಿದ್ದರೂ ಕೇಂದ್ರ ಸರ್ಕಾರ ಕಳೆದ 15 ದಿನಗಳಿಂದ ತೈಲ ಬೆಲೆ ಏರಿಕೆ ಮಾಡುತ್ತಿರುವುದನ್ನು ಖಂಡಿಸಿ 25 ರೂ. ಗಳಿಗೆ ಪೆಟ್ರೋಲ್ ನೀಡಿ ನೂತನವಾಗಿ ಪ್ರತಿಭಟನೆ ನಡೆಸಲಾಯಿತು. ಕುವೆಂಪುನಗರದ ಪೆಟ್ರೋಲ್ ಬಂಕ್‌ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ತುಂಬಿಸುವ ಮೂಲಕ ತೈಲ ಬೆಲೆ ಏರಿಕೆ ಖಂಡಿಸಿದರು.
ಬಳಿಕ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾಗುತ್ತಲೇ ಇದೆ. ಆದರೆ ಕೇಂದ್ರ ಸರ್ಕಾರ ಕಳೆದ 15 ದಿನಗಳಿಂದಲೂ ತೈಲ ಬೆಲೆ ಏರಿಕೆ ಮಾಡುತ್ತಲೇ ಇದೆ. ಕಚ್ಚಾತೈಲ 18.60 ರೂ.ಗಳಿಗೆ ಸಿಗುತ್ತಿರುವುದರಿಂದ 30ರಿಂದ 35 ರೂ. ಗಳಿಗೆ ಮಾರಾಟ ಮಾಡಬಹುದು. ಆದರೆ, ಕೇಂದ್ರ ಸುಂಕ ಹಾಗೂ ರಾಜ್ಯ ಸರ್ಕಾರ ವಿಧಿಸುವ ಮಾರಾಟ ತೆರಿಗೆಯಿಂದ 79 ರೂ. ಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಕಿಡಿ ಕಾರಿದರು.
ಆರ್ಥಿಕ ಹೊರೆ: ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಪ್ರತಿ ಬ್ಯಾರಲ್‌ಗೆ 125ರಿಂದ 140 ಡಾಲರ್ ಇತ್ತು. ಈಗ 39 ಡಾಲರ್‌ಗೆ ಇಳಿದಿದೆ. ಅದರ ಆಧಾರದ ಮೇಲೆ 35 ರೂ. ಒಳಗೆ ಮಾರಾಟ ಮಾಡಬಹುದು. ಆದರೆ, ಕೇಂದ್ರ ಸರ್ಕಾರ ಬೆಲೆ ಇಳಿಕೆ ಮಾಡದೇ ಬಡವರ ಮೇಲೆ ಆರ್ಥಿಕ ಹೊರೆ ಹೊರೆಸುತ್ತಿದೆ ಎಂದು ಆರೋಪಿಸಿದರು.
ಬಿಎಸ್‌ವೈಗೆ ತಾಕತ್ತಿಲ್ಲ: ಕೇಂದ್ರ ಸರಕಾರ ಹೇಳಿದಂತೆ ತಲೆಯಾಡಿಸುವ ಸಿಎಂ ಯಡಿಯೂರಪ್ಪ ಅವರಿಗೆ ಮೋದಿ ಮುಂದೆ ಮಾತನಾಡಲು ತಾಕತ್ತಿಲ್ಲ. 15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ್ದ 5049 ಕೋಟಿ ರೂ. ಬಿಡುಗಡೆ ಮಾಡದೇ ಇದ್ದರೂ ಈವರೆಗೆ ಕೇಳಿಲ್ಲ. ಅವರ ಎದುರು ಮಾತನಾಡುವ ತಾಕತ್ತು ಎಲ್ಲಿದೆ ಎಂದು ಯಡಿಯೂರಪ್ಪನವರ ಕಾಲೆಳೆದರು.
ಮರಣ ಶಾಸನ: ಭೂಸ್ವಾಧೀನ ಕಾಯಿದೆ ತಿದ್ದುಪಡಿ ಮಾಡುತ್ತಿರುವುದು ಮರಣ ಶಾಸನವಾಗಿದೆ. ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ದಿ.ದೇವರಾಜ ಅರಸು ಉಳುವವನೇ ಭೂ ಒಡೆಯ ಎಂದರು, ಈಗ ಉಳ್ಳವನೇ ಭೂ ಮಾಲೀಕ ಎನ್ನುವಂತೆ ಮಾಡಲು ಹೊರಟಿದೆ ಬಿಜೆಪಿ ಸರಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸೆಕ್ಷನ್ 144 ಬಳಸಿಕೊಂಡು ಎಲ್ಲಾ ಕಾಯಿದೆಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಮುಂದಾಗಿದ್ದಾರೆ. ಇನ್ನು ನಮ್ಮ ಮುಂದಿರುವುದು ಜೈಲ್ ಭರೋ ಳವಳಿ ಒಂದೇ ಎಂದರು.
ವಿಶ್ವನಾಥ್ ಪೆದ್ದನೋ, ಜಾಣನೋ ಗೊತ್ತಿಲ್ಲ: ಎಂಎಲ್‌ಸಿ ಟಿಕೆಟ್ ಕೈತಪ್ಪಿದ ಸಂಬಂಧ ವಿಶ್ವನಾಥ್ ಆರೋಪಕ್ಕೆ ಪ್ರತಿಕ್ರಿಯಿಸಿ, ವಿಶ್ವನಾಥ್ ಪೆದ್ದನೋ, ಜಾಣನೋ ಗೊತ್ತಿಲ್ಲ. ನಾನು ಕಾಂಗ್ರೆಸ್ ನಲ್ಲಿದ್ದೇನೆ, ವಿಶ್ವನಾಥ್ ಬಿಜೆಪಿಯಲ್ಲಿದ್ದಾರೆ. ನಾನು ಹೇಗೆ ಟಿಕೆಟ್ ತಪ್ಪಿಸಲು ಸಾಧ್ಯ? ಹತಾಶೆಯಿಂದ ಏನೇನೋ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದರು. ಈ ವೇಳೆ ಮಾಜಿ ಶಾಸಕ ಸೋಮಶೇಖರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ವಿಜಯ್ ಕುಮಾರ್, ನಗರಾಧ್ಯಕ್ಷ ಮೂರ್ತಿ, ವೆಂಕಟೇಶ್ ಇತರರಿದ್ದರು.