ಕುಂದಾಪುರ: ಹಟ್ಟಿಯಂಗಡಿ ಶ್ರೀ ಸಿದ್ಧಿ ವಿನಾಯಕ ವಸತಿ ಶಾಲೆಗೆ ಪರಿಸರ ಸ್ನೇಹಿ ಶಾಲೆ ಎಂಬ ಪ್ರಶಸ್ತಿ ದೊರೆತಿದೆ. ಜಗತ್ತು ಪರಿಸರ ಮಾಲಿನ್ಯ ಮತ್ತು ಜಾಗತಿಕ ತಾಪಮಾನ ಏರಿಕೆಯಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ಇಂದಿನ ಸಂದರ್ಭದಲ್ಲಿ ಶಾಲಾ ಮಟ್ಟದಲ್ಲೇ ವಿದ್ಯಾರ್ಥಿಗಳಿಗೆ ನಿರ್ಮಲ ಪರಿಸರದ ಅಗತ್ಯತೆ, ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸಿಕೊಟ್ಟು, ಅವರನ್ನು ಪರಿಸರ ಉಳಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವತ್ತ ಸಿದ್ಧಿವಿನಾಯಕ ವಸತಿ ಶಾಲೆಯು ಪ್ರಯತ್ನವನ್ನು ನಡೆಸುತ್ತಿದೆ.
ಶಾಲೆಯ ಈ ಪ್ರಯತ್ನಕ್ಕೆ ಬಿ.ಎಂ.ಎಲ್. ವಿಶ್ವವಿದ್ಯಾಲಯ ಮುಂಜಾಲ್ ಹರ್ಯಾಣದಲ್ಲಿ ನಡೆದ ಸಮಾರಂಭದಲ್ಲಿ ಭಾರತೀಯ ಶಾಲಾ ಪುರಸ್ಕಾರದವರು ಕೊಡಮಾಡುವ ಪರಿಸರ ಸ್ನೇಹಿ ಶಾಲೆ ಎಂಬ ಪ್ರಶಸ್ತಿಗೆ ಭಾಜನವಾಯಿತು. ಭಾರತಾದ್ಯಂತ ಸುಮಾರು 500 ಶಾಲೆಗಳು ಸ್ಪರ್ಧಾಕಣದಲ್ಲಿದ್ದವು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಾಂಶುಪಾಲ ಶರಣ ಕುಮಾರ, ಆಡಳಿತಾಧಿಕಾರಿ ವೀಣಾ ರಶ್ಮಿ ಎಂ., ಶಾಲಾ ಸಂಸ್ಥಾಪಕ ಕಾರ್ಯದರ್ಶಿಗಳ ಧರ್ಮಪತ್ನಿ ರಮಾದೇವಿ ರಾಮಚಂದ್ರ ಭಟ್ ಉಪಸ್ಥಿತರಿದ್ದು, ಭಾರತೀಯ ರಾಯಭಾರಿ ಡಾ| ದೀಪಕ್ ವೊಹ್ರ ಅವರಿಂದ ಪ್ರಮಾಣಪತ್ರ ಮತ್ತು ಪಾರಿತೋಷಕವನ್ನು ಸ್ವೀಕರಿಸಿದರು. ಬಿ.ಎಂ.ಎಲ್. ವಿಶ್ವವಿದ್ಯಾಲಯ ಮುಂಜಾಲ್‌ನ ಅಧ್ಯಕ್ಷ ಅಕ್ಷಯ್ ಮುಂಜಾಲ್ ಉಪಸ್ಥಿತರಿದ್ದರು.
ಆರಂಭದ ದಿನಗಳಿಂದಲೇ ಶಾಲಾ ಸುತ್ತಮುತ್ತಲ ಪ್ರದೇಶವನ್ನು ಶುಚಿಗೊಳಿಸುವುದು, ಶಾಲಾ ಆವರಣದಲ್ಲಿಯೇ ಕೃಷಿ ಭೂಮಿಯನ್ನು ಮಾಡುವುದು, ಔಷಧೀಯ ಗಿಡಗಳನ್ನು ಬೆಳೆಸುವುದು, ಕೈ ತೋಟ, ಹೂದೋಟಗಳನ್ನು ನಿರ್ಮಿಸುವುದು, ನಾನಾ ಬಗೆಯ ತರಕಾರಿ ಗಿಡಗಳನ್ನು ಬೆಳೆಸುವುದು ಮತ್ತು ಅವುಗಳ ಆರೈಕೆ ಮಾಡುವ ಕೆಲಸವನ್ನು ವಿದ್ಯಾರ್ಥಿಗಳ ಸಹಭಾಗಿತ್ವದೊಂದಿಗೆ ನಡೆಸುತ್ತಾ ಬಂದಿವೆ.
ವಿದ್ಯುತ್ ಶಕ್ತಿಗೆ ಬದಲಾಗಿ ಸೌರಶಕ್ತಿಯ ಬಳಕೆ, ಇ-ರಿಕ್ಷಾಗಳ ಬಳಕೆಯಂತಹ ಪರಿಸರ ಸ್ನೇಹಿ ಕಾರ್ಯಗಳನ್ನು ನಡೆಸುತ್ತಿದೆ. ಶಾಲೆಯ ವಿದ್ಯಾರ್ಥಿ ಕೃಷಿಕ ಸಂಘ ಮತ್ತುಕೊಡಚಾದ್ರಿ ಇಕೋ ಕ್ಲಬ್ ಈ ಎಲ್ಲಾ ಚಟುವಟಿಕೆಗಳ ನೇತೃತ್ವವನ್ನು ವಹಿಸಿದೆ.