ವಿಜಯಪುರ: ದೇಶದ ಗಡಿಯಲ್ಲಿ ಹಗಲಿರುಳು ಶ್ರಮಿಸುತ್ತಿರುವ ಭಾರತದ ಹೆಮ್ಮೆಯ ಸೈನಿಕರಿಗೆ ಗ್ರೀಟಿಂಗ್ ಕಾರ್ಡ್ ಮತ್ತು ಪರಿಸರ ಸ್ನೇಹಿ ರಾಖೀ ಕಳಿಸಲು ಲೀಡರ್ಸ್ ಎಕ್ಸ್‌ಲ್‌ರೇಟಿಂಗ ಡೆವಲೆಪಮೆಂಟ್ ಪ್ರೋಗ್ರಾಂ ಅಡಿಯಲ್ಲಿ ವಿದ್ಯಾರ್ಥಿಗಳು ಬಣ್ಣ ಬಣ್ಣದ ಗ್ರೀಟಿಂಗ್ ಸಿದ್ಧತಾ ಅಭಿಯಾನಕ್ಕೆ ಮುಂದಾಗಿದ್ದಾರೆ.
ಜು. 26ರ ಕಾರ್ಗಿಲ್ ವಿಜಯೋತ್ಸವ ನಿಮಿತ್ತ ಭಾರತೀಯ ವೀರ ಯೋಧರಿಗೆ ಶುಭಾಶಯ ಕೋರುವ ಗ್ರೀಟಿಂಗ್ ಕಾರ್ಡ್ ಜೊತೆಗೆ ಭ್ರಾತೃತ್ವ ಸಾರುವ ರಕ್ಷಾಬಂಧನ ಪ್ರಯುಕ್ತ ಧಾನ್ಯಗಳು ಮತ್ತು ಹಣ್ಣಿನ ಬೀಜ ಬಳಸಿ ಪರಿಸರ ಸ್ನೇಹಿ ರಕ್ಷಾ ದಾರಗಳನ್ನು ರೂಪಿಸುವ ಕೆಲಸದಲ್ಲಿ ತೊಡಗಿದ್ದಾರೆ.
ಅಭಿಯಾನ ಸಂಚಾಲಕ ಪ್ರಮೋದ ಹುಕ್ಕೇರಿ ಮಾತನಾಡಿ, ನಾವು ಆಯೋಜಿಸಿರುವ ಅಭಿಯಾನಕ್ಕೆ ಈಗಾಗಲೇ 50ಕ್ಕೂ ವಿದ್ಯಾರ್ಥಿಗಳು ಮನೆಯಲ್ಲಿ ಇದ್ದುಕೊಂಡೇ ಜೋಳ, ಗೋಧಿ , ಹಣ್ಣಿನ ಬೀಜ ಬಳಸಿ 500ಕ್ಕೂ ಹೆಚ್ಚು ಪರಿಸರಸ್ನೇಹಿ ರಾಖೀ ರಕ್ಷೆ, ಶುಭಾಶಯ ಪತ್ರ ಸಿದ್ಧತೆ ಮಾಡುತ್ತಿದ್ದಾರೆ ಎಂದರು.
ಲೀಡ್ ಕಾರ್ಯಕ್ರಮ ಅಧಿಕಾರಿ ಸಂತೋಷ ಬಿರಾದಾರ ಮಾತನಾಡಿ, ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ವಿದ್ಯಾರ್ಥಿಗಳು ಮನೆಯಲ್ಲೇ ಇದ್ದಾರೆ. ಹೀಗಾಗಿ ವಿದ್ಯಾರ್ಥಿಗಳಿಗೆ ಲೀಡ್ ಸಂಸ್ಥೆ ಕ್ರಿಯಾತ್ಮಕ ಚಟುವಟಿಕೆ ಹಮ್ಮಿಕೊಂಡಿದೆ. ಈ ವರ್ಷ ವಿದ್ಯಾರ್ಥಿಗಳು ತಾವೇ ಮನೆಯಲ್ಲಿದ್ದು ಸ್ವಯಂ ತಯಾರಿಸಿದ ರಾಖೀಯನ್ನು ಸೈನಿಕರಿಗೆ ಕಳುಹಿಸುವ ಯೋಜನೆ ರೂಪಿಸಲಾಗಿದೆ. ಇದು ನಮ್ಮ ಮಟ್ಟಿಗೆ ವಿಶಿಷ್ಟ ಅನುಭವ ನೀಡುತ್ತಿದೆ ಎಂದರು.
ಬಿಎಲ್‌ಡಿಇ ಎಂಜಿನಿಯರಿಂಗ್ ಮಹಾವಿದ್ಯಾಲಯದ ಉಪನ್ಯಾಸಕ ಗೋವಿಂದ ಮದಭಾವಿ ಹಾಗೂ ಬಿಎಲ್‌ಡಿಇ ಎಂಜನಿಯರಿಂಗ್ ಕಾಲೇಜು, ಶಾಂತವೀರ ಕಲಾ-ವಾಣಿಜ್ಯ ಕಾಲೇಜು, ಸಿದ್ದೇಶ್ವರ ಚಿತ್ರಕಲಾ ಮಹಾವಿದ್ಯಾಲಯ, ದರಬಾರ ಬಿಬಿಎ ಮತ್ತು ಬಿಸಿಎ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.