Advertisement

ಪರಿಸರ ಸ್ನೇಹಿ ವಿಘ್ನ ನಿವಾರಕನಿಗೆ ಒಲವು

03:55 PM Sep 13, 2018 | |

ಹಬ್ಬಗಳಲ್ಲೇ ವಿಶೇಷವಾದ ಗಣೇಶ ಚತುರ್ಥಿಯನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಇದಕ್ಕಾಗಿ ಭರ್ಜರಿ ತಯಾರಿ ನಡೆಸಲಾಗಿದೆ. ಮನೆ ಮನೆಗಳಲ್ಲಿ ಸಂಭ್ರಮದ ತಯಾರಿ ಜೋರಾಗಿದೆ. ಈಗಾಗಲೇ ಬುಧವಾರ ಗೌರಿಯನ್ನು ಪ್ರತಿಷ್ಠಾಪಿಸಿರುವ ಮಹಿಳೆಯರು ಗಣೇಶನ ಕೂರಿಸಲು ಸಕಲ ಸಿದ್ಧತೆಯಲ್ಲಿ ತೊಡಗಿದ್ದಾರೆ. ಜೊತೆಗೆ ಸಂಘ ಸಂಸ್ಥೆಗಳು, ದೊಡ್ಡ ದೊಡ್ಡ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸಾಂಸ್ಕೃತಿಕ ಚಟುವಟಿಕೆ ಆಯೋಜಿಸಲು ಭರದ ಸಿದ್ಧತೆಯಲ್ಲಿದ್ದಾರೆ. ಈ ಬಾರಿ ಬಹುತೇಕವಾಗಿ ಪರಿಸರ ಸ್ನೇಹಿ ಮಣ್ಣಿನ ಮೂರ್ತಿಯತ್ತ ಜನರು ಒಲವು ತೋರಿರುವುದು ವಿಶೇಷವಾಗಿದೆ.

Advertisement

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನೆಲ್ಲೆಡೆ ಸಂಭ್ರಮ, ಸಡಗರದ ಗಣೇಶ ಚತುರ್ಥಿ ಆಚರಣೆ ಮಾಡಲಾಗುತ್ತಿದೆ. ಹಬ್ಬದ ಆಚರಣೆಗೆ ಪರಿಸರ ಸ್ನೇಹಿ ಗಣೇಶಮೂರ್ತಿ ಖರೀದಿಸುವ ಮೂಲಕ ನಗರದ ಜತೆಗೆ ಹಬ್ಬದ ಆಚರಣೆ ಜತೆಗೆ ಪರಿಸರ ಸಂರಕ್ಷಣೆಗೆ ಒಲವು ತೋರಿದ್ದಾರೆ. ಪ್ರತಿವರ್ಷ ಗಣೇಶ ಚತುರ್ಥಿ ಬಂತೆಂದರೆ ನಗರದೆಲ್ಲೆಡೆ ಪಿಒಪಿ ಅಥವಾ ರಾಸಾಯನಿಕಗಳಿಂದ ತಯಾರಿಸಿದ ಗಣೇಶ ಮೂರ್ತಿಗಳು ಎಲ್ಲಾ ಕಡೆಗಳಲ್ಲೂ ರಾರಾಜಿಸುತ್ತಿತ್ತು. ಇಂತಹ ಗಣೇಶ ಮೂರ್ತಿಗಳ ಬಳಕೆಯಿಂದ ಆಗುವ ಪರಿಸರ ಮಾಲಿನ್ಯವನ್ನು ತಡೆಯಲೆಂದು ನಗರ ಪಾಲಿಕೆ ಈ ಬಾರಿ ಪಿಒಪಿ ಅಥವಾ ರಾಸಾಯನಿಕ ಬಣ್ಣಗಳಿಂದ ತಯಾರಿಸಿದ ಗಣೇಶ ಮೂರ್ತಿಗಳ ಮಾರಾಟ ಮತ್ತು ಖರೀದಿಗೆ ಕಡಿವಾಣ ಹಾಕಿತ್ತು. ಇದರಿಂದ ಎಚ್ಚೆತ್ತುಕೊಂಡ ನಗರದ ಜನತೆ ಹಬ್ಬದ ಮುನ್ನಾದಿನವಾದ ಬುಧವಾರ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಖರೀದಿಸಿ, ವಿಘ್ನ ವಿನಾಶಕನ ಆರಾಧನೆಗೆ ಸಜ್ಜಾಗಿದ್ದಾರೆ.

 ಗಣೇಶ ಚತುರ್ಥಿ ಬಂತೆಂದರೆ ನಗರ ಪ್ರದೇಶ ಮಾತ್ರವಲ್ಲದೆ ಎಲ್ಲಾ ಹಳ್ಳಿಗಳಲ್ಲೂ ನಾನಾ ವಿನ್ಯಾಸದ ಗಣಪನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಸಂಭ್ರದಿಂದ ಹಬ್ಬವನ್ನು ಆಚರಿಸಲಾಗುತ್ತದೆ. ಹೀಗೆ ಬಡಾವಣೆಗಳು, ಗ್ರಾಮಗಳಲ್ಲಿ ಆಚರಿಸಲಾಗುವ ಗಣೇಶ ಉತ್ಸವಗಳಲ್ಲಿ ಪಿಒಪಿ ಅಥವಾ ರಾಸಾಯನಿಕ ಬಣ್ಣಗಳಿಂದ ತಯಾರಿಸಿದ ಗಣಪನ
ಮೂರ್ತಿಗಳನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತಿತ್ತು. ಆದರೆ ಪಿಒಪಿ ಅಥವಾ ರಾಸಾಯನಿಕ ಬಣ್ಣಗಳಿಂದ ಮಾಡಿರುವ
ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಮನಸ್ಸು ಮಾಡದ ಗಣೇಶ ಉತ್ಸವಗಳ ಆಯೋಜಕರು ಜೇಡಿ ಮಣ್ಣಿನಿಂದ
ಮಾಡಿದ ಗಣೇಶ ಮೂರ್ತಿಗಳನ್ನೇ ಹೆಚ್ಚಾಗಿ ಖರೀದಿಸಿದ್ದಾರೆ. 

ದೊಡ್ಡಮಟ್ಟದಲ್ಲಿ ನಡೆಯುವ ಗಣೇಶ ಉತ್ಸವಗಳಿಗಾಗಿ ನಗರದ ಮಾರುಕಟ್ಟೆಯಲ್ಲಿ ಗಂಡ ಬೇರುಂಡ, ಮೈಸೂರು ಪೇಟ, ಹಂಸ, ಶಂಖು, ದಿಂಬು, ಹಸು, ಕೃಷ್ಣ ಗಣಪತಿ ಸೇರಿದಂತೆ ವಿವಿಧ ಬಗೆಯ ಗಣೇಶ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡಲಾಗಿದೆ. 100 ರೂ.ನಿಂದ 10 ಸಾವಿರ ರೂ.ಗಳವರೆಗೂ ಗಣಪತಿ ಮೂರ್ತಿಗಳು ಮಾರಾಟಗೊಂಡವು. 

ಭಾವೈಕ್ಯತೆಯ ಗಣೇಶ ಚತುರ್ಥಿ ಗೌರಿ-ಗಣೇಶ ಹಬ್ಬವನ್ನು ಎಲ್ಲೆಡೆ ಸಡಗರದಿಂದ ಆಚರಿಸಲಾಗುತ್ತಿದೆ. ಅದರಂತೆ ನಗರದ ಪರಿವರ್ತನ ಟ್ರಸ್ಟ್‌ ಹಾಗೂ ಅದಿತ್ರಿ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ಭಾವೈಕ್ಯತೆಯ ಗಣೇಶ ಚತುರ್ಥಿಯನ್ನು ಆಚರಿಸಲಾಯಿತು. ಹಿಂದೂ-ಮುಸ್ಲಿಂ ಯುವಕರು ಒಟ್ಟಾಗಿ ಗೌರಿ ಹಬ್ಬದ ಆಚರಣೆ ಮಾಡುವ ಮೂಲಕ ಹಬ್ಬದ ಸಂಭ್ರಮಕ್ಕೆ ಧರ್ಮ ಅಡ್ಡಿ ಬರುವುದಿಲ್ಲ ಎಂಬ ಸಂದೇಶ ಸಾರಿದರು. ನಗರದ ಅಗ್ರಹಾರದಲ್ಲಿರುವ ಟ್ರಸ್ಟ್‌ನ ಕಚೇರಿಯಲ್ಲಿ ಗೌರಿ- ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಒಂದಾಗಿ ಹಬ್ಬ ಆಚರಿಸಿದ ಹಿಂದೂ – ಮುಸ್ಲಿಂ ಯುವಕರು, ಭಾವೈಕ್ಯತೆ ಮೆರೆಯುವ ಜತೆಗೆ ಗಣೇಶ ಹಾಗೂ ಮೊಹರಂ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

Advertisement

ಇಳೈ ಆಳ್ವಾರ್‌ ಸ್ವಾಮೀಜಿ ಮಾತನಾಡಿ, ನಾಡಿನಲ್ಲಿ ಎರಡೂ ಸಮುದಾಯಗಳ ಹಬ್ಬಗಳನ್ನು ಸೌಹಾರ್ದವಾಗಿ ಆಚರಣೆ ಮಾಡುವ ಪದ್ಧತಿ ಇದೆ. ಆದರೆ ಕೆಲ ಕಿಡಿಗೇಡಿಗಳು ಎರಡೂ ಸಮುದಾಯಗಳ ನಡುವೆ ಕಿಚ್ಚು ಹಚ್ಚಲು ಮತ್ತು ಶಾಂತಿ ಕದಡಲು ಸುಳ್ಳು ಸುದ್ದಿ ಹಬ್ಬಿಸುವುದು, ಗಲಾಟೆ ಮಾಡುವ ಕೆಲಸ ಮಾಡುತ್ತಾರೆ. ಸಾರ್ವಜನಿಕರು ಇಂತಹ ಊಹಾಪೋಹಗಳಿಗೆ ಕಿವಿಗೊಡದೆ ಧಾರ್ಮಿಕ ಆಚರಣೆಗಳನ್ನು ಶಾಂತಿಯುತವಾಗಿ ಆಚರಿಸಬೇಕು ಎಂದರು.

ಈ ಸಂದರ್ಭದಲ್ಲಿ ಶ್ರೀಕರ ಸ್ವಾಮೀಜಿ, ಪರಿವರ್ತನಂ ಟ್ರಸ್ಟ್‌ನ ಅಧ್ಯಕ್ಷ ವಿನಯ್‌ ಕಣಗಾಲ್‌, ಅದಿತ್ರಿ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷೆ ಸೌಭಾಗ್ಯ, ಮೈಕ್‌ ಚಂದ್ರು, ಅಮ್ರಿನ್‌ ತಾಜ್‌, ಅರವಿಂದ್‌, ದಿಲೀಪ್‌, ರಂಜಿತ್‌ ಪ್ರಸಾದ್‌, ಅಬ್ರಾರ್‌, ನಾಸೀರ್‌ ಬಾಷಾ, ಜಮೀರ್‌ ಪಾಷಾ, ಅನ್ಸರ್‌ ಪಾಷಾ ಇದ್ದರು.

ಶ್ರೀಕಂಠನ ಸನ್ನಿಧಿಯಲ್ಲಿ ಸ್ವರ್ಣಗೌರಿ ಸಂಭ್ರಮ ನಂಜನಗೂಡು: ಶ್ರೀಕಂಠೇಶ್ವರಸ್ವಾಮಿ ಸನ್ನಿಧಿಯಲ್ಲಿ ಸ್ವರ್ಣಗೌರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಗೌರಿಯನ್ನು ವಿವಿಧ ಹೂವು ಗಳಿಂದ ಅಲಂಕರಿಸಿ ಶ್ರೀಕಂಠನೊಂದಿಗೆ ಪಲ್ಲಕ್ಕಿಯಲ್ಲಿ ಕೂರಿಸಿ, ಮೆರೆವಣಿಗೆ ಮಾಡಿ, ಶ್ರೀಚಾಮುಂಡೇಶ್ವರಿ ದೇವಸ್ಥಾನಕ್ಕೆ ತಂದು ನಾಗಚಂದ್ರ ದೀಕ್ಷಿತರ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ವಾಪಸ್‌ ಬಂದು ಸಹಸ್ರ ಲಿಂಗೇಶ್ವರಸ್ವಾಮಿ ಎದುರಿನಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಲಾಯಿತು. ಮುತ್ತೇದೆಯರು ಬಳೆ, ಬಿಚ್ಚೋಲೆ,
16 ಎಳೆಯ ಹೆಜ್ಜೆ ವಸ್ತ್ರಗಳು, ಕನ್ನಡಿ, ಕಳಸ, ಕಾಡಿಗೆ, ಹಸಿರು ಸೀರೆ, ಕುಪ್ಪಸ, ಜಾಜಿ, ಮಲ್ಲಿಗೆ, ವಿಳ್ಯಗಳನ್ನಿಟ್ಟು ಬಾಗಿನ ಅರ್ಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next