Advertisement
ಲೋಕಸಭಾ ಚುನಾವಣೆಗೆ ದಿನಾಂಕ ಪ್ರಕಟಿಸುವಾಗ ಚುನಾವಣೆಯನ್ನು ಪರಿಸರ ಸ್ನೇಹಿಯಾಗಿ ನಡೆಸಲು ಒತ್ತು ನೀಡುವುದಾಗಿ ದಿಲ್ಲಿಯಲ್ಲಿ ಕೇಂದ್ರ ಚುನಾವಣ ಆಯೋಗದ ಮುಖ್ಯ ಆಯುಕ್ತರು ಪ್ರಕಟಿಸಿದ್ದರು. ಈ ನಿಟ್ಟಿನಲ್ಲಿ ಉಡುಪಿ ಜಿಲ್ಲಾಡಳಿತವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಚುನಾವಣೆ ಘೋಷಣೆಯ ಆರಂಭದಲ್ಲಿಯೇ ಎಲ್ಲ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳ ಸಭೆ ನಡೆಸಿ ಪರಿಸರ ಸ್ನೇಹಿ ಚುನಾವಣೆ ನಡೆಸಲು ಸಹಕಾರ ಕೋರಿತ್ತು.
ಈ ಹಿಂದೆ ಚುನಾವಣೆ ಎಂದರೆ ರಸ್ತೆಯುದ್ದಕ್ಕೂ ಬ್ಯಾನರ್, ಬಂಟಿಂಗ್ಸ್, ಪಕ್ಷದ ಧÌಜಗಳು ಸಾಮಾನ್ಯವಾಗಿದ್ದವು. ಆದರೆ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಇವು ಅಪರೂಪ. ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಪಡೆದು ಬ್ಯಾನರ್, ಕಟೌಟ್, ಬಂಟಿಂಗ್ಸ್ ಹಾಕಲು ಅವಕಾಶ ಇದ್ದರೂ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳಿಂದ ಇವುಗಳಿಗೆ ಅನುಮತಿ ಕೋರಿ ಅರ್ಜಿಗಳು ಚುನಾವಣಾಧಿಕಾರಿಗಳ ಕಚೇರಿಗೆ ಬಾರದಿರುವುದು ಗಮನಾರ್ಹ. ಪರಿಸರದಲ್ಲಿ ವಾಯು ಮಾಲಿನ್ಯ ತಡೆಗಟ್ಟಲು ಯಾವುದೇ ರೀತಿಯ ವಾಹನ ರ್ಯಾಲಿ, ಬೈಕ್ ರ್ಯಾಲಿಗಳಿಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷದ/ಅಭ್ಯರ್ಥಿಗಳ ಸಭೆಯಲ್ಲಿ ಚರ್ಚಿಸಲಾಗಿತ್ತು. ಅಂದು ಪರಿಸರ ಸ್ನೇಹಿ ಚುನಾವಣೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದವರು ಯಾವುದೇ ರ್ಯಾಲಿಗಳಿಗೆ ಜಿಲ್ಲಾಡಳಿತದ ಅನುಮತಿಯನ್ನು ಕೋರದೆ ಪರಿಸರದ ಬಗ್ಗೆ ಕಾಳಜಿಯನ್ನು ಪ್ರದರ್ಶಿಸಿದ್ದಾರೆ.
Related Articles
Advertisement
ಪರಿಸರ ಸ್ನೇಹಿ ಚುನಾವಣೆ ಆಚರಣೆಯ ಉದ್ದೇಶದಿಂದ ಜಿಲ್ಲಾಡಳಿತ ವತಿಯಿಂದ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ವಿವಿಧ ತಾಲೂಕು ಕೇಂದ್ರಗಳಲ್ಲಿ ಆಯೋಜಿಸಿದ್ದ ತರಬೇತಿಯಲ್ಲಿ ಕಾಫಿ, ಟೀ ಕುಡಿಯಲು ಪೇಪರ್‌ನಿಂದ ಮಾಡಿದ ಗ್ಲಾಸ್‌ಗಳು, ಊಟಕ್ಕೆ ಅಡಿಕೆ ಹಾಳೆಯ ತಟ್ಟೆ, ಕುಡಿಯಲು ನೀರಿನ ಕ್ಯಾನ್‌ಗಳನ್ನು ಇಡುವ ಮೂಲಕ ಪ್ಲಾಸ್ಟಿಕ್ ಮುಕ್ತ ತರಬೇತಿ ಕೇಂದ್ರ ಆಯೋಜಿಸಲಾಗಿತ್ತು. ಮತದಾನ ದಿನದಂದು ಕೂಡ ಎಲ್ಲ ಮತಗಟ್ಟೆಗಳಲ್ಲಿ ಇದೇ ವ್ಯವಸ್ಥೆ ಮಾಡಲಾಗಿದೆ. ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲೂ ಯಾವುದೇ ರೀತಿಯ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ಮುಂಜಾಗರೂಕತೆ ವಹಿಸಲಾಗಿದೆ. ಮತಗಟ್ಟೆಗಳಲ್ಲಿ ಮತದಾರರಿಗೆ ಮಾಹಿತಿ ನೀಡಲು ಬಟ್ಟೆಯ ಬ್ಯಾನರ್‌ಗಳನ್ನು ಅಳವಡಿಸಲಾಗುತ್ತಿದೆ. ಮಸ್ಟರಿಂಗ್ ಕೇಂದ್ರದಲ್ಲಿ ಮತಗಟ್ಟೆಗಳಿಗೆ ವಿತರಿಸಲಾಗುವ ಎಲ್ಲ ರೀತಿಯ ಕಿಟ್‌ಗಳನ್ನು ಬಟ್ಟೆಯಲ್ಲಿ ತಯಾರಿಸಿದ ಬ್ಯಾಗುಗಳಲ್ಲಿಯೇ ನೀಡಲು ಸಿದ್ಧತೆ ಮಾಡಲಾಗಿದೆ.